ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವದಂದು ಬೆಂಗಳೂರಿನಲ್ಲಿ ರೈತರ ಟ್ರ್ಯಾಕ್ಟರ್ ಪರೇಡ್‌

Last Updated 22 ಜನವರಿ 2021, 7:07 IST
ಅಕ್ಷರ ಗಾತ್ರ

ರಾಮನಗರ: ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟದ ಅಂಗವಾಗಿ ಇದೇ 26ರಂದು ಬೆಂಗಳೂರಿನಲ್ಲಿ ರೈತರಿಂದ ಟ್ರ್ಯಾಕ್ಟರ್ ಪರೇಡ್‌ ನಡೆಯಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

‘ಅಂದು ಬೆಳಿಗ್ಗೆ ನೆಲಮಂಗಲದ ನೈಸ್‌ ಜಂಕ್ಷನ್‌ ಬಳಿ ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಸಮಾವೇಶಗೊಳ್ಳಲಿದ್ದಾರೆ. ಮುಖ್ಯಮಂತ್ರಿಯಿಂದ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಪರೇಡ್‌ ಆರಂಭಗೊಳ್ಳಲಿದೆ. ನೈಸ್ ಜಂಕ್ಷನ್‌ನಿಂದ ಗೊರಗುಂಟೆ ಪಾಳ್ಯ. ಯಶವಂತಪುರ ರೈಲು ನಿಲ್ದಾಣ, ಮಲ್ಲೇಶ್ವರಂ, ಶೇಷಾದ್ರಿಪುರಂ, ಆನಂದ ರಾವ್‌ ವೃತ್ತದ ಮಾರ್ಗವಾಗಿ ತೆರಳಿ ಫ್ರೀಡಂ ಪಾರ್ಕ್‌ ಬಳಿ ಸಮಾವೇಶಗೊಳ್ಳಲಾಗುವುದು. ಅಲ್ಲಿ ‘ಸಂಯಕ್ತ ಕರ್ನಾಟಕ’ ಹೆಸರಿನಲ್ಲಿ ಎಲ್ಲ ಸಂಘಟನೆಗಳೂ ಒಗ್ಗೂಡಲಿವೆ’ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಜ್ಯದ ಎಲ್ಲ ಜಿಲ್ಲೆಗಳಿಂದ ಸುಮಾರು 10 ಸಾವಿರ ವಾಹನಗಳು ಪರೇಡ್‌ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ಕಾರ್ಮಿಕ ಸಂಘಟನೆಗಳು, ಸಂಘ–ಸಂಸ್ಥೆಗಳು ಬೆಂಬಲ ಸೂಚಿಸಿವೆ. ಪರೇಡ್‌ಗೆ ಪೊಲೀಸರಿಂದ ಅನುಮತಿಯನ್ನೂ ಕೇಳಿದ್ದೇವೆ. ಒಂದು ವೇಳೆ ಸರ್ಕಾರ ಈ ಹೋರಾಟ ಹತ್ತಿಕ್ಕಲು ಮುಂದಾದರೆ ಪೇಚಿಗೆ ಸಿಲುಕಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ರಾಜಕೀಯ ಲಾಭಕ್ಕೆ ಹೋರಾಟ: ರೈತರ ಪರವಾಗಿ ಕಾಂಗ್ರೆಸ್ ಹೋರಾಟದ ಕುರಿತು ಪ್ರತಿಕ್ರಿಯೆ ನೀಡಿದ ಅವರು ‘ಸನ್ನಿವೇಶದ ಲಾಭ ಪಡೆಯಲು ರಾಜಕೀಯ ಪಕ್ಷಗಳು ಪ್ರಯತ್ನಿಸುವುದು ಸಹಜ. ಹಿಂದೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆದಾಗ ಅಂದಿನ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಹಸಿರು ಶಾಲು ಧರಿಸಿ ನಮ್ಮ ಪಕ್ಕ ಕುಳಿತಿದ್ದರು. ಆದರೆ ಇಂದಿನ ಕಾಂಗ್ರೆಸ್ ಹೋರಾಟಕ್ಕೂ ರೈತರಿಗೂ ಸಂಬಂಧ ಇಲ್ಲ’ ಎಂದರು.

‘ಸರ್ಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧದ ಬದಲಿಗೆ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದೆ. ಇದರಲ್ಲಿ ಹಸುಗಳ ಜೊತೆಗೆ ಎಮ್ಮೆ, ಕೋಣಗಳೂ ಸೇರಲಿವೆ. ಅಲ್ಪಸಂಖ್ಯಾತರಿಂದ ಗೋವಧೆ ತಡೆಯಲು ಈ ಕಾಯ್ದೆ ರೂಪಿಸಿರುವುದಾಗಿ ಸರ್ಕಾರ ಹೇಳುತ್ತದೆ. ಆದರೆ ಇದು ಕೇವಲ ‘ಸಾಬರ’ ಮಾಂಸದ ವಿಚಾರ ಅಲ್ಲ. ರೈತರಿಗೆ ಆರ್ಥಿಕವಾಗಿ ಸಾಕಷ್ಟು ಹೊಡೆತ ಬೀಳಲಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT