ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳಲ್ಲಿ ಹಬ್ಬದ ಸಡಗರ

ಗೌರಿ, ಗಣೇಶ ಚತುರ್ಥಿ ಸರಳ ಆಚರಣೆ
Last Updated 12 ಸೆಪ್ಟೆಂಬರ್ 2021, 5:10 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನಾದ್ಯಂತ ಗೌರಿ, ಗಣೇಶ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ತಾಲ್ಲೂಕಿನ ಜನತೆ ಆಚರಣೆ ಮಾಡಿದರು.

ಹಿಂದಿನ ಧಾರ್ಮಿಕ ಸಂಪ್ರದಾಯ ಮತ್ತೆ ಮರುಕಳಿಸಿದ್ದು, ಕೆಲವರು ಗುರುವಾರ ಗೌರಿ ಹಬ್ಬ ಆಚರಣೆ ಮಾಡಿ, ಶುಕ್ರವಾರ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಮತ್ತೆ ಕೆಲವರು ಶುಕ್ರವಾರವೇ ಗೌರಿ ಪೂಜೆ ನೆರವೇರಿಸಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದರು.

ಗೌರಿ ಹಬ್ಬವನ್ನು ತಾಲ್ಲೂಕಿನಲ್ಲಿ ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಒಂದು ವಾರದಿಂದಲೇ ಮನೆಯನ್ನು ಶುದ್ಧೀಕರಿಸಿರುವ ಗೃಹಿಣಿಯರು ಗೌರಿ ಮತ್ತು ಗಣೇಶನಿಗೆ ಪ್ರಿಯವಾದ ತಿಂಡಿ, ತಿನಿಸು ತಯಾರಿ ಮಾಡಿಕೊಂಡಿದ್ದರು.

ಕುಟುಂಬದ ಮಹಿಳೆಯರು ಹಬ್ಬದ ದಿನ ಬೆಳಿಗ್ಗೆಯಿಂದಲೇ ಉಪವಾಸವಿದ್ದು ತನಿ ಎರೆದು ಪೂಜೆ ನೆರವೇರಿಸಿದರು. ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದಲ್ಲಿ ಮನೆಯ ಹೆಣ್ಣು ಮಕ್ಕಳಿಗೆ ವಿಶೇಷ ಆದ್ಯತೆ ನೀಡುವ ಕುಟುಂಬದವರು ಮದುವೆ ಮಾಡಿಕೊಟ್ಟಿದ್ದರೆ ಅಳಿಯ ಮತ್ತು ಮಗಳನ್ನು ಹಬ್ಬಕ್ಕೆ ಕರೆದು ಅವರಿಗೆ ಸತ್ಕಾರ ನೆರವೇರಿಸುವುದು, ಸಹೋದರರು, ಸಹೋದರರಿಗೆ ಉಡುಗೊರೆ ಕೊಟ್ಟು ಅವರಿಂದ ಗೌರಿ ರಕ್ಷೆ ಕಟ್ಟಿಸಿಕೊಂಡಿದ್ದು ಎಲ್ಲಡೆ ಕಂಡು ಬಂದಿತು.

ಸರ್ಕಾರ ಕೋವಿಡ್‌ ಕಾರಣಕ್ಕಾಗಿ ಹೆಚ್ಚು ನಿರ್ಬಂಧ ವಿಧಿಸಿರುವುದರಿಂದ ಗಣೇಶ ಮೂರ್ತಿಯನ್ನು ಕೂರಿಸಿರುವುದು ಕಡಿಮೆಯಾಗಿದ್ದರೂ ಹಬ್ಬದ ಸಂಭ್ರಮ ಮಾತ್ರ ಕಡಿಮೆಯಾಗಿಲ್ಲ. ಪೊಲೀಸ್‌ ಇಲಾಖೆಯಿಂದ ಅನುಮತಿ ಪಡೆದು ಗ್ರಾಮಗಳಲ್ಲಿ ಉತ್ಸಾಹಿ ಯುವಕರ ತಂಡ ಅಲ್ಲಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ
ನೆರವೇರಿಸಿದರು.

ಗೌರಿ ಹಬ್ಬದಲ್ಲಿ ವಿಶೇಷವಾಗಿ ತಾಲ್ಲೂಕಿನ ಏಳಗಳ್ಳಿಯಲ್ಲಿರುವ ತಾಯಿ ಮುದ್ದಮ್ಮ ದೇವಾಲಯಕ್ಕೆ ಹೋಗಿ ಪೂಜೆ ನೆರವೇರಿಸುವುದು ವಾಡಿಕೆ. ಅದರಂತೆ ಕುಟುಂಬ ಸಮೇತರಾಗಿ ಏಳಗಳ್ಳಿಗೆ ಭೇಟಿ ನೀಡಿ ಕೊಣ (ಕಲ್ಯಾಣಿ)ದಲ್ಲಿ ಗಂಗೆ ಪೂಜೆ ನೆರವೇರಿಸಿದರು. ನಾಗರಕಲ್ಲು, ಹುತ್ತಕ್ಕೆ ತನಿ ಪೂಜೆ ಹಾಗೂ ತಾಯಿ ಮುದ್ದಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಕಳೆದ ವರ್ಷ ಕೋವಿಡ್‌ ಕಾರಣದಿಂದ ಹಬ್ಬಕ್ಕೆ ಅವಕಾಶ ದೊರೆತಿರಲಿಲ್ಲ. ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸಿರುವುದರಿಂದ ಆಚರಣೆಗೆ ಮುಕ್ತ ಅವಕಾಶ ದೊರೆತಿದೆ. ಈ ವರ್ಷ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಹಬ್ಬದ ಸಡಗರ ಹೆಚ್ಚಿತ್ತು. ಎಲ್ಲಾ ಗ್ರಾಮಗಳಲ್ಲೂ ಗೌರಿ, ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದು ಕಂಡುಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT