ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ: ಹೂ ಹಣ್ಣು ಬಲು ದುಬಾರಿ

ಎರಡು ಸಾವಿರದ ಗಡಿ ದಾಟಿದ ಕನಕಾಂಬರ
Last Updated 8 ಆಗಸ್ಟ್ 2019, 12:11 IST
ಅಕ್ಷರ ಗಾತ್ರ

ರಾಮನಗರ: ಗುರುವಾರ ನಗರದ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಖರೀದಿ ಸಂಭ್ರಮ ಕಂಡು ಬಂದಿತು. ಆದರೆ ಹೂ–ಹಣ್ಣುಗಳ ಬೆಲೆ ಕೇಳಿಯೇ ಗ್ರಾಹಕರು ಹೌಹಾರುವಂತೆ ಆಯಿತು.

ಗ್ರಾಮೀಣ ಭಾಗಕ್ಕಿಂತ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ವರಮಹಾಲಕ್ಷ್ಮಿ ಹಬ್ಬ ಆಚರಣೆ ಹೆಚ್ಚು. ಹೀಗಾಗಿ ನಗರದೊಳಗೆ ಹೆಚ್ಚಿನ ಸಂಭ್ರಮ ಕಂಡಿತು. ಬಹುತೇಕ ಮಂದಿ ಶುಕ್ರವಾರ ಮುಂಜಾನೆಯೇ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದರಿಂದ ಮುನ್ನಾ ದಿನವೇ ಅಂತಿಮ ಸಿದ್ಧತೆಯ ಪ್ರಯತ್ನ ನಡೆದಿತ್ತು. ಹಬ್ಬಕ್ಕೆಂದು ನಾಲ್ಕೈದು ದಿನಗಳಿಂದ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದ ಜನರು ಗುರುವಾರ ಖರೀದಿಗೆಂದು ಮಾರುಕಟ್ಟೆಗೆ ಬಂದಿದ್ದರು.

ಹೂವು, ಹಣ್ಣುಗಳು, ಬಾಳೆ ಕಂದು, ಮಾವಿನ ಸೊಪ್ಪು ಖರೀದಿ ಭರಾಟೆಯೂ ಜೋರಾಗಿತ್ತು. ಪೂಜಿಸುವವವರಿಗೆ ವರಮಹಾಲಕ್ಷ್ಮಿ ಒಲಿಯುತ್ತಾಳೋ ಇಲ್ಲವೋ ಗೊತ್ತಿಲ್ಲ. ಆದರೆ, ಹಣ್ಣು, ಹೂವು ಮಾರಾಟಗಾರರಿಗಂತೂ ಗುರುವಾರ `ಲಕ್ಷ್ಮಿ' ವರ ನೀಡಿದ್ದಳು. ಹಬ್ಬದ ನೆಪದಲ್ಲಿ ದುಪ್ಪಟ್ಟು ಬೆಲೆಗೆ ಹಣ್ಣು, ಹೂವು, ಬಾಳೆ ಕಂದು, ಮಾವಿನ ಸೊಪ್ಪು ಮಾರಾಟ ಆಗುತ್ತಿತ್ತು.

ಇದಕ್ಕಾಗಿ ಬುಧವಾರವೇ ನಗರಕ್ಕೆ ಮಾವಿನಸೊಪ್ಪು, ಬಾಳೆ ಕಂದುಗಳನ್ನು ತಂದು ಪ್ರಮುಖ ವೃತ್ತಗಳು ಹಾಗೂ ರಸ್ತೆ ಬದಿಯಲ್ಲಿ ಇಟ್ಟುಕೊಂಡು ವ್ಯಾಪಾರಿಗಳು ಮಾರಾಟದಲ್ಲಿ ತೊಡಗಿದ್ದರು. ಜಿಟಿ ಜಿಟಿ ಮಳೆಯ ನಡು ವೆಯೂ ಜನರು ಖರೀದಿ ಭರಾಟೆಯಲ್ಲಿ ತೊಡಗಿದ್ದರು. ಎಪಿಎಂಸಿ ಮಾರುಕಟ್ಟೆ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಮಾವಿನಸೊಪ್ಪು, ಬಾಳೆಕಂದು, ಹೂವಿನ ಮಾರಾಟ ಭರ್ಜರಿಯಾಗಿ ನಡೆಯುತ್ತಿತ್ತು. ಗುರುವಾರ ಬೆಳಗ್ಗೆಯಿಂದಲೇ ಎಲ್ಲರೂ ಬಾಳೆ ಕಂದು, ಮಾವಿನ ಸೊಪ್ಪು ಹಿಡಿದು ಮನೆಗೆ ಹೋಗುತ್ತಿದ್ದವರೇ.

ಹಗುರವಾದ ಹೂವುಗಳು ಹಬ್ಬದ ನೆಪದಲ್ಲಿ ಬೆಲೆ ಹೆಚ್ಚಾಗಿ ತುಂಬಾ ಭಾರವಾಗಿದ್ದವು. ಒಂದು ಜೋಡಿ ತಾವರೆ ಹೂವು,ಒಂದು ಜೋಡಿ ಬಾಳೆ ಕಂದಿಗೆ ₹30 ರಂತೆ ಬಿಕರಿಯಾಯಿತು. ಒಂದು ಹಿಡಿ ಮಾವಿನ ಸೊಪ್ಪಿಗೆ ₹10, ಎರಡು ಕಬ್ಬಿನ ತೊಂಡೆ ಜಲ್ಲೆ ₹20 ಬೆಲೆ ಇತ್ತು. ಹಳ್ಳಿಯ ಜನರು ಮಾವಿನಸೊಪ್ಪು, ಬಾಳೆಕಂದು, ಕಬ್ಬಿನ ತೊಂಡೆ ಜಲ್ಲೆಯನ್ನು ನಗರಕ್ಕೆ ತಂದು ಜೇಬು ತುಂಬಿಸಿಕೊಳ್ಳುತ್ತಿದ್ದರು.

ಕನಕಾಂಬರ ಹೂವಿನ ದರ ಕೇಳಿಯೇ ಗ್ರಾಹಕರು ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಈ ಹೂವಿನ ಬೆಲೆ ಕೆ.ಜಿ.ಯೊಂದಕ್ಕೆ ಎರಡು ಸಹಸ್ರ ರೂಪಾಯಿ ದಾಟಿತ್ತು. ಉಳಿದ ಜಾತಿಯ ಹೂವುಗಳೂ ತಾವೇನು ಕಡಿಮೆ ಇಲ್ಲ ಎಂಬಂತೆ ಬೆಲೆ ಏರಿಸಿಕೊಂಡಿದ್ದವು. ಮಲ್ಲಿಗೆ ಮತ್ತು ಮರಳೆ ದರವೂ ಸಾವಿರದ ಗಡಿ ದಾಟಿ ಹೋಗಿತ್ತು. ತುಳಸಿ ₹50ಕ್ಕೆ ಮಾರಾಟವಾಯಿತು. ಹೂವಿನ ಹಾರಗಳಿಗಂತೂ ಗಾತ್ರದ ಮೇಲೆ ₹100ರಿಂದ ₹2ಸಾವಿರದವರೆಗೂ ಬೆಲೆ ಇತ್ತು. ವೀಳ್ಯದೆಲೆ ಕಟ್ಟಿಗೆ ₹80 ಇತ್ತು.

‘ಶ್ರಾವಣದ ಆರಂಭದಲ್ಲಿ ಬರುವ ಮೊದಲ ಹಬ್ಬವಿದು. ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ ಎಂದು ಹಬ್ಬ ಆಚರಿಸದೇ ಇರಲಾಗದು. ಆಷಾಢ ಮುಗಿಸಿ ಗಂಡನ ಮನೆಗೆ ಬರುವ ನವವಧುಗಳು ಪತಿಯ ಮನೆಯಲ್ಲಿ ಹಬ್ಬ ಮಾಡುವುದು ವಾಡಿಕೆ’ ಎಂದು ಎಂದು ಗೃಹಿಣಿ ಸುಜಾತ ತಿಳಿಸಿದರು.

‘ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿ ಇರಬೇಕಿತ್ತು. ಆದರೆ, ಮಳೆ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ. ತರಕಾರಿ ಬೆಲೆ ಅಷ್ಟಾಗಿ ಹೆಚ್ಚಳವಾಗಿಲ್ಲ. ಆದರೆ, ಹೂವು ಮತ್ತು ಹಣ್ಣುಗಳ ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ’ ಎಂದು ಎಂದು ವ್ಯಾಪಾರಿ ಸುನೀಲ್ ಹೇಳಿದರು.

ತರಕಾರಿ ದರ ಯಥಾಸ್ಥಿತಿ
ಹಬ್ಬವಿದ್ದರೂ ತರಕಾರಿ ಮಾರಾಟ ದರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಈರುಳ್ಳಿ ಹಾಗೂ ಟೊಮ್ಯಾಟೊ ಕೆ.ಜಿ.ಗೆ ₹25, ಈರೇಕಾಯಿ, ಅವರೆ ₨₹30, ಬೀನ್ಸ್‌, ಬೀಟ್‌ರೂಟ್‌, ಗೆಡ್ಡೆಕೋಸು ₹40 ಹಾಗೂ ಕ್ಯಾರೆಟ್‌ ₹60ಕ್ಕೆ ಮಾರಾಟ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT