ಶನಿವಾರ, ಫೆಬ್ರವರಿ 27, 2021
27 °C
ಯಂಗಯ್ಯನ ಕೆರೆ ಉದ್ಯಾನ, ಜಾನಪದ ಲೋಕದ ಬಳಿ ಆಹಾರ ಮೇಳಕ್ಕೆ ಚಾಲನೆ

ಬಗೆಬಗೆ ಖಾದ್ಯ ಸವಿದ ಪ್ರವಾಸಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ಆಯೋಜಿಸಿರುವ ಜಿಲ್ಲೆಯ ಮೊದಲ ಆಹಾರ ಮೇಳಕ್ಕೆ ಮಂಗಳವಾರ ವಿದ್ಯುಕ್ತ ಚಾಲನೆ ದೊರೆಯಿತು. ನೂರಾರು ಮಂದಿ ಭೇಟಿ ಕೊಟ್ಟು ಬಗೆಬಗೆಯ ಭಕ್ಷ್ಯಗಳ ಸವಿ ನೋಡಿದರು.

ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಜಿಲ್ಲಾಧಿಕಾರಿ ನಿವಾಸದ ಪಕ್ಕ ಇರುವ ಯಂಗಯ್ಯನಕೆರೆ ಸಸ್ಯೋದ್ಯಾನದ ಆವರಣದಲ್ಲಿ ಮೇಳಕ್ಕೆಂದು ಹತ್ತಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿತ್ತು. ಬೆಳಗ್ಗೆ ಇಲ್ಲಿಗೆ ಭೇಟಿ ಕೊಟ್ಟ ಪ್ರವಾಸಿಗರು ಬಿಡದಿ ತಟ್ಲೆ ಇಡ್ಲಿಯ ಜೊತೆಗೆ ರುಚಿಯಾದ ಶಾವಿಗೆ ಬಾತ್‌, ಪುಳಿವೊಗರೆ, ಪಲಾವ್‌, ದೋಸೆ ಮೊದಲಾದ ಉಪಾಹಾರಗಳನ್ನು ಸವಿದರು. ಜೊತೆಗೆ ಕಾಫಿ, ಟೀ, ಹರ್ಬಲ್‌ ಟೀ, ಅಲೋವೇರಾ ಜ್ಯೂಸ್‌ ಮೊದಲಾದ ಬಗೆಯ ಪಾನೀಯಗಳ ವ್ಯವಸ್ಥೆಯೂ ಇತ್ತು.

ಮಾಂಸಾಹಾರದ ಘಮಲು: ಸಸ್ಯಾಹಾರದ ಜೊತೆಗೆ ಮಾಂಸಾಹಾರ ಪ್ರಿಯರಿಗಾಗಿಯೂ ಇಲ್ಲಿ ನಾಲ್ಕಾರು ಮಳಿಗೆಗಳು ತೆರೆದಿವೆ. ಅದರಲ್ಲೂ ರಾಮನಗರದ್ದೇ ಆದ ಶಂಕರ್ ನಾಟಿಕೋಳಿ ಡಾಬಾ ಸಹ ಇಲ್ಲಿ ಅಂಗಡಿ ತೆರೆದಿದ್ದು, ಮಧ್ಯಾಹ್ನ ಬಿಸಿಯಾದ ಮುದ್ದೆ ಜೊತೆಗೆ ನಾಟಿಕೋಳಿ ರುಚಿಯನ್ನು ಗ್ರಾಹಕರಿಗೆ ಉಣಬಡಿಸಿತು. ಮತ್ತೊಂದೆಡೆ, ರಾಜೇಶ್‌ ಹೋಟೆಲ್‌ನ ಬಿರಿಯಾನಿಯ ಕಂಪು ಪಸರಿಸಿತ್ತು. ಜಿಎಫ್‌ಸಿ ಮಳಿಗೆಯಲ್ಲಿ ಬಿಸಿಯಾದ ಬಿರಿಯಾನಿಯ ಜೊತೆಗೆ ಬಿಸಿಬಿಸಿಯಾದ ಮೀನಿನ ಖಾದ್ಯವೂ ಲಭ್ಯವಿತ್ತು.

ಸಸ್ಯಾಹಾರ ಪ್ರಿಯರಿಗಾಗಿ ಸೊಪ್ಪು ಸಾರಿನ ಜೊತೆ ಬಿಸಿ ರಾಗಿ ಮುದ್ದೆ, ಅಕ್ಕಿ ರೊಟ್ಟಿ ಮೊದಲಾದ ಊಟ ಮತ್ತು ಉಪಾಹಾರದ ವ್ಯವಸ್ಥೆ ಇತ್ತು. ಇದಲ್ಲದೆ ವಿವಿಧ ಮಹಿಳಾ ಸ್ವಸಹಾಯ ಗುಂಪುಗಳು ತಯಾರಿಸಿದ ಸಿಹಿ ತಿನಿಸುಗಳು, ಖರಿದ ತಿಂಡಿಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಸಂಜೆ ಹೆದ್ದಾರಿಯಲ್ಲಿ ಪ್ರಯಾಣಿಸುತ್ತ ಸಣ್ಣದೊಂದು ಬ್ರೇಕ್ ಪಡೆಯುವ ಸಲುವಾಗಿ ಸಾಕಷ್ಟು ಪ್ರವಾಸಿಗರು ಆಹಾರ ಮೇಳಕ್ಕೆ ಧಾವಿಸಿದರು. ಅವರಿಗಾಗಿ ಪಾನಿಪುರಿ, ಮಸಾಲೆ, ಸಿಹಿ ತಿನಿಸುಗಳ ಸಹಿತ ನಾನಾ ಚಾಟ್‌ ಪದಾರ್ಥಗಳ ಮಾರಾಟ ನಡೆದಿತ್ತು. ರಾತ್ರಿಯೂ ಪ್ರವಾಸಿಗರಿಗೆ ವಿವಿಧ ಬಗೆಯ ಊಟ ಮತ್ತು ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು.

ಜಾನಪದ ಲೋಕದ ಮುಂಭಾಗದಲ್ಲಿಯೂ ಆರು ಮಳಿಗೆಳನ್ನು ತೆರೆಯಲಾಗಿದ್ದು, ಅಲ್ಲಿಯೂ ಆಹಾರ ಪದಾರ್ಥಗಳ ಮಾರಾಟ ನಡೆದಿತ್ತು.
‘ಮೊದಲ ದಿನದಂದು ಪ್ರವಾಸಿಗರು ತಕ್ಕ ಮಟ್ಟಿಗೆ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು’ ಎಂದು ಸ್ಥಳದಲ್ಲಿದ್ದ ವರ್ತಕರು ಅಭಿಪ್ರಾಯಪಟ್ಟರು.

‘ಆಹಾರ ಮೇಳದ ಮೊದಲ ದಿನ ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡೂ ಬಗೆಯ ಮಳಿಗೆಗಳು ತೆರೆದಿವೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವರ್ತಕರೂ ಖುಷಿ ಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವರ್ತಕರು ಮುಂದೆ ಬಂದರೂ ಅವರಿಗೂ ಮಳಿಗೆಗಳನ್ನು ಒದಗಿಸಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌. ಶಂಕರಪ್ಪ ಹೇಳಿದರು.

ಚಿತ್ರನಟ ಶಶಿಕುಮಾರ್, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಮತ್ತಿತರರು ಮೇಳಕ್ಕೆ ಭೇಟಿ ನೀಡಿದ್ದರು.

ವಿದ್ಯುತ್‌ ದೀಪಗಳ ಅಲಂಕಾರ: ಆಟಕ್ಕೂ ಅವಕಾಶ
ಯಂಗಯ್ಯನ ಕೆರೆ ಅಂಗಳದಲ್ಲಿ ಆಕರ್ಷಕ ವಿದ್ಯುತ್‌ ಅಲಂಕಾರ ಮಾಡಲಾಗಿದ್ದು, ಸಂಜೆ ಪ್ರವಾಸಿಗರನ್ನು ಹೆಚ್ಚು ಆಕರ್ಷಿಸಿತು. ಉಪಾಹಾರ ಸೇವನೆಗೆ ಅನುಕೂಲ ಆಗುವಂತೆ ಖುರ್ಚಿ, ಕುಡಿಯುವ ನೀರಿನ ವ್ಯವಸ್ಥೆಯೂ ಇತ್ತು. ನೆಲಕ್ಕೆ ಹಸಿರು ವರ್ಣದ ಹೊದಿಕೆ ಹಾಸಲಾಗಿತ್ತು. ಹೀಗಾಗಿ ದೂಳಿನ ಸಮಸ್ಯೆ ಇರಲಿಲ್ಲ. ಮಧ್ಯಾಹ್ನ ಒಂದಿಷ್ಟು ಹೊತ್ತು ಹಗುರವಾಗಿ ಮಳೆ ಸುರಿದರೂ ಪ್ರವಾಸಗರಿಗೆ ಯಾವುದೇ ತೊಂದರೆ ಆಗಲಿಲ್ಲ. ಪ್ರವಾಸೋದ್ಯಮ ಇಲಾಖೆಯ ಪ್ರವಾಸಿ ಮಿತ್ರರು ಸ್ಥಳದಲ್ಲಿ ಇದ್ದು, ಮಾರ್ಗದರ್ಶನ ನೀಡಿದರು.

ಸಸ್ಯೋದ್ಯಾನದಲ್ಲಿ ಮಕ್ಕಳಿಗೆಂದು ನಾನಾ ಆಟಿಕೆಗಳು ಇದ್ದು, ಮೇಳಕ್ಕೆ ಬಂದವರು ತಮ್ಮ ಮಕ್ಕಳನ್ನು ಅಲ್ಲಿ ಆಟಕ್ಕೆ ಬಿಟ್ಟು ಖುಷಿ ಪಟ್ಟರು.

ಕಲಾವಿದರ ಸಂಭ್ರಮ
ಆಹಾರ ಮೇಳಕ್ಕೆಂದು ಬಂದ ಪ್ರವಾಸಿಗರಿಗೆ ಜಿಲ್ಲೆಯ ಯುವ ಕಲಾವಿದರು ಜಾನಪದ ನೃತ್ಯಗಳ ಸವಿ ಉಣಬಡಿಸಿದರು. ಮೊದಲ ದಿನದಂದು ಕಂಸಾಳೆ, ಡೊಳ್ಳು, ವೀರಗಾಸೆ ಹಾಗೂ ತಮಟೆ ವಾದನದ ಸದ್ದು ಕೇಳಿ ಬಂದಿತು. ಅರಳೀಮರದ ದೊಡ್ಡಿಯ ಸಂತೋಷ್‌ ಮತ್ತು ತಂಡ, ಕೂಟಗಲ್‌ನ ಎಂ. ಮಹೇಶ್‌ ಮತ್ತು ತಂಡ ಹಾಗೂ ಗಟ್ಟಿಗುಂದದ ಮಹಾದೇವ ಮತ್ತು ತಂಡದವರು ಪ್ರದರ್ಶನ ನೀಡಿದರು.

**
ಪ್ರವಾಸಿಗರಿಗೆ ಉತ್ತಮ ಆಹಾರದ ಜೊತೆಗೆ ಮೂಲ ಸೌಕರ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಇದೇ 10ರವರೆಗೂ ಮೇಳ ನಡೆಯಲಿದೆ.
-ಎಸ್‌. ಶಂಕರಪ್ಪ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

**
ರಾಮನಗರದಲ್ಲಿ ಮೊದಲ ಬಾರಿಗೆ ಆಹಾರ ಮೇಳ ನಡೆದಿರುವುದು ಖುಷಿಯ ಸಂಗತಿ. ಇದು ಹೆಚ್ಚೆಚ್ಚು ಜನರನ್ನು ತಲುಪಲಿ.
-ಶಶಿಕುಮಾರ್, ಚಿತ್ರನಟ

 

 

 

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು