ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ವೃದ್ಧೆಗೆ ₹ 19.5 ಲಕ್ಷ ವಂಚನೆ

Published 23 ಮೇ 2024, 15:56 IST
Last Updated 23 ಮೇ 2024, 15:56 IST
ಅಕ್ಷರ ಗಾತ್ರ

ಚನ್ನಪಟ್ಟಣ: ತಾಲ್ಲೂಕಿನ ಬ್ರಹ್ಮಣೀಪುರ ಗ್ರಾಮದ ವೃದ್ಧೆಯೊಬ್ಬರಿಗೆ ಅವರ ಸಂಬಂಧಿಕನೇ ₹19.5 ಲಕ್ಷ ವಂಚನೆ ಮಾಡಿರುವ ಬಗ್ಗೆ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ಗ್ರಾಮದ ವೃದ್ಧೆ ಗೌರಮ್ಮ (60) ವಂಚನೆಗೆ ಒಳಗಾದವರು. ಈಚೆಗೆ ಇವರ ಪತಿ ಹಾಗೂ ಒಬ್ಬ ಮಗಳು ಮೃತಪಟ್ಟಿದ್ದರು. ಜೀವನಾಧಾರಕ್ಕೆ ಇದ್ದ 1.18 ಎಕರೆ ಜಮೀನನ್ನು ಮಾರಾಟ ಮಾಡಿ ಇದರಿಂದ ಬಂದ ₹ 29.69 ಲಕ್ಷ ಹಣವನ್ನು ಅಬ್ಬೂರು ಗ್ರಾಮದ ಬ್ಯಾಂಕ್ ನಲ್ಲಿ ಜಮೆ ಮಾಡಿದ್ದರು.‌

ಇದನ್ನು ತಿಳಿದಿದ್ದ ವೃದ್ಧೆಯ ಸಂಬಂಧಿಕ ನವೀನ್ ಎಂಬಾತ ಇವರ ಮನೆಗೆ ಬಂದು ನರೇಗಾ ಯೋಜನೆಯಲ್ಲಿ ಮಾಡಿದ ಕಾಮಗಾರಿಯ ನನ್ನ ಹಣ ನಿಮ್ಮ ಖಾತೆಗೆ ಬಂದಿದೆ. ಅದನ್ನು ಡ್ರಾ ಮಾಡದಿದ್ದರೆ ಹಣ ವಾಪಸ್ ಹೋಗುತ್ತದೆ ಎಂದು ನಂಬಿಸಿ ಅವರನ್ನು ಬ್ಯಾಂಕಿಗೆ ಕರೆದೊಯ್ದು ಚಲನ್ ಗೆ ಸಹಿ ಪಡೆದು ಹಣ ಪಡೆದಿದ್ದಾನೆ. ಇದೇ ರೀತಿ ಐದು ಬಾರಿ ಬ್ಯಾಂಕಿಗೆ ಕರೆದೊಯ್ದು ಹಣ ಪಡೆದಿದ್ದಾನೆ ಎಂದು ತಿಳಿದುಬಂದಿದೆ.

ಆದರೆ ಈತ ಪ್ರತಿಬಾರಿ ಹಣ ಪಡೆಯುವಾಗಲೂ ವೃದ್ಧೆಗೆ ₹ 500 ನೀಡಿದ್ದಾನೆ. ಇದರಿಂದ ಖುಷಿಯಾದ ವೃದ್ಧೆ ಗೌರಮ್ಮ ಆತ ಕರೆದಾಗಲೆಲ್ಲಾ ಬ್ಯಾಂಕಿಗೆ ಹೋಗಿ ಹಣ ತೆಗೆದುಕೊಟ್ಟಿದ್ದಾರೆ. ಅದರಂತೆ ಒಟ್ಟು ₹ 3500 ಹಣ ನೀಡಿದ್ದಾನೆ.
ಈ ವಿಚಾರವನ್ನು ಗೌರಮ್ಮ ಮನೆಗೆ ಬಂದ ತಮ್ಮ ಸಹೋದರನಿಗೆ ತಿಳಿಸಿದ್ದಾರೆ. ನಮ್ಮ ಹುಡುಗ ನನಗೂ ಹಣ ನೀಡಿದ ಎಂದು ಹೇಳಿದ್ದಾರೆ.

ಇದರಿಂದ ಅನುಮಾನಗೊಂಡ ಸಹೋದರ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಗೌರಮ್ಮ ಅವರ ಖಾತೆಯಿಂದ ₹ 19.5 ಲಕ್ಷ ತೆಗೆದಿರುವುದು ಬೆಳಕಿಗೆ ಬಂದಿದೆ. ಆನಂತರ ಗೌರಮ್ಮ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT