ಶನಿವಾರ, ಜನವರಿ 25, 2020
19 °C

ಗಂಗಾ ಮತಸ್ಥ ಸಮುದಾಯ ಸಂಘಟಿತವಾಗಲಿ: ಬಸವಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ಗಂಗಾಮತಸ್ಥ ಸಮುದಾಯವು ಸಂಘಟಿತರಾದಾಗ ಮಾತ್ರ ಹಕ್ಕುಬಾಧ್ಯತೆಗಳನ್ನು ಪಡೆದು ಕೊಳ್ಳಲು ಸಾಧ್ಯವಾಗುತ್ತದೆ ಎಂದು ಮಳವಳ್ಳಿ ರಾಮಾರೂಢ ಮಠದ ಬಸವಾನಂದ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಮಲ್ಲಯ್ಯನದೊಡ್ಡಿ ಗ್ರಾಮದಲ್ಲಿ ಬುಧವಾರ ನಡೆದ ಬೆಸ್ತರ ಜನಾಂಗದ 39 ಉಪಜಾತಿಗಳ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯವು ಕುಲಕಸುಬಾದ ಮೀನುಗಾರಿಕೆಯ ಜೊತೆಗೆ ಇನ್ನಿತರ ಕೂಲಿ ಕೆಲಸಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಈ ಸಮುದಾಯಕ್ಕೆ ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ವಲಯದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಸಂಘಟನೆಗಳು ಪ್ರಬಲವಾಗಿ ಕೆಲಸ ಮಾಡಬೇಕಿದೆ ಎಂದರು.

ಸಂಘಟನೆಗಳು ಕೇವಲ ಉದ್ಘಾಟನೆಗೆ ಸೀಮಿತವಾಗದೆ, ಸಮುದಾಯದ ಹಿತಕಾಯುವ ಕೆಲಸ ಮಾಡಬೇಕು. ಸಮುದಾಯದ ಬಡ ವಿದ್ಯಾರ್ಥಿಗಳಿಗೆ, ಕುಟುಂಬಗಳಿಗೆ ನೆರವು ನೀಡುವ ಮೂಲಕ ಅವರನ್ನು ಮೇಲಕ್ಕೆ ತರಲು ಪ್ರಯತ್ನಿಸಬೇಕು. ಉದ್ಘಾಟನೆಗೊಂಡಿರುವ ಸಂಘವು ಸಮುದಾಯದ ಎಲ್ಲರ ಹಿತಕಾಯುವ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

ರಾಜ್ಯ ಗಂಗಾ ಮತಸ್ಥರ ಸಂಘದ ಅಧ್ಯಕ್ಷ ಮುಲಾಲಿ ಮಾತನಾಡಿ, ‘ರಾಜ್ಯದಾದ್ಯಂತ ನಮ್ಮ ಸಮುದಾಯಕ್ಕೆ ಸೇರಿದ ಜನತೆ 80 ಲಕ್ಷಕ್ಕೂ ಹೆಚ್ಚು ವಾಸಿಸುತ್ತಿದೆ. ಆದರೆ ನಮ್ಮ ಸಮುದಾಯಕ್ಕೆ ಸಿಗಬೇಕಾದ ಸವಲತ್ತುಗಳು ಸರ್ಕಾರದಿಂದ ಸಿಗುತ್ತಿಲ್ಲ. ನಮ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಸಂಘ ಹೋರಾಟ ನಡೆಸಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ನಮ್ಮ ಸಮುದಾಯವನ್ನು ಎಸ್.ಟಿ. ವರ್ಗಕ್ಕೆ ಸೇರಿಸಲು ಹೋರಾಟ ನಡೆಸಲಾಗುವುದು’ ಎಂದು ಅವರು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ್ ಮಾತನಾಡಿ, ಸಮುದಾಯದ ಅಭಿವೃದ್ಧಿಯ ಹಿತದೃಷ್ಟಿಯಿಂದ ಸಂಘವನ್ನು ಸ್ಥಾಪಿಸಲಾಗಿದೆ. ಸಂಘದ ಚಟುವಟಿಕೆಗಳಿಗೆ ಸಮುದಾಯದ ಜನ ಸಹಕಾರ ನೀಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಗಂಗಾಧರ್, ಜಿ.ಪಂ. ಮಾಜಿ ಉಪಾಧ್ಯಕ್ಷೆ ಪದ್ಮಕೃಷ್ಣಯ್ಯ, ಸಮಾಜದ ಮುಖಂಡರಾದ ಡಾ.ಭಗತ್ ರಾಮ್, ಟಿ.ಎ.ಪಿ.ಸಿ.ಎಂ.ಎಸ್. ಉಪಾಧ್ಯಕ್ಷ ಬಿಳಿಯಪ್ಪ, ಮಂಡ್ಯ ಜಿಲ್ಲಾ ಗಂಗಾಮತಸ್ಥರ ಸಂಘದ ಅಧ್ಯಕ್ಷ ನಂಜುಂಡಪ್ಪ, ರಾಜ್ಯ ಸಂಘದ ಉಪಾಧ್ಯಕ್ಷ ಮಣ್ಣೂರು ನಾಗರಾಜು, ಸಂಘಟನಾ ಕಾರ್ಯದರ್ಶಿ ಗವಿರಾಜು, ಸಹ ಕಾರ್ಯದರ್ಶಿ ರಾಮು, ತಾಲ್ಲೂಕು ಸಂಘದ ಗೌರವಾಧ್ಯಕ್ಷ ಟಿ.ಮಲ್ಲಯ್ಯ, ಅಧ್ಯಕ್ಷ ರಾಜು, ಉಪಾಧ್ಯಕ್ಷ ದೊಡ್ಡಯ್ಯ, ಖಜಾಂಚಿ ಈಶ್ವರಯ್ಯ, ಸಂಘಟನಾ ಕಾರ್ಯದರ್ಶಿ ಪದ್ಮನಾಭ, ಮುಖಂಡರಾದ ವಿಶ್ವೇಶ್ವರಯ್ಯ, ಮಾಗಡಿ ಮಲ್ಲಯ್ಯ, ರಾಮನಗರ ಪಾಲಭೋವಿದೊಡ್ಡಿ ಶಿವಣ್ಣ, ಚಿಕ್ಕಬೈರಯ್ಯ, ರೇವಣ್ಣ, ಗಂಗರಾಜು ಭಾಗವಹಿಸಿದ್ದರು

ಪ್ರತಿಕ್ರಿಯಿಸಿ (+)