ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಸಿನ ಮತದಾನ; ಎಲ್ಲೆಡೆ ಉತ್ಸಾಹ

ಮೊದಲ ಹಂತದಲ್ಲಿ 56 ಗ್ರಾ.ಪಂ.ಗಳಲ್ಲಿ ಹಕ್ಕು ಚಲಾಯಿಸಿದ ಮತದಾರರು; ಶಾಂತಿಯುತ ಪ್ರಕ್ರಿಯೆ
Last Updated 22 ಡಿಸೆಂಬರ್ 2020, 14:18 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯ 56 ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನಡೆಯಿತು. ಹೆಚ್ಚಿನವರು ತಮ್ಮ ಹಕ್ಕು ಚಲಾವಣೆಗೆ ಉತ್ಸಾಹ ತೋರಿದರು.

ಬೆಳಿಗ್ಗೆ 7ಕ್ಕೆ ಮತದಾನ ಆರಂಭಗೊಂಡಿದ್ದು, ಮತಗಟ್ಟೆಗಳ ಮುಂದೆ ಜನರ ಸಾಲು ನೆರೆದಿತ್ತು. ಯುವಜನರ ಜೊತೆಗೆ ಹಿರಿಯರೂ ಉತ್ಸಾಹ ತೋರಿದರು. 80–90 ವಯಸ್ಸು ದಾಟಿದ ವೃದ್ಧರೂ ಇನ್ನೊಬ್ಬರ ಸಹಾಯ ಪಡೆದು ತಮ್ಮ ಹಕ್ಕು ಚಲಾವಣೆಗೆ ಬಂದಿದ್ದರು. ಅಂತಹವರಿಗಾಗಿ ಮತಗಟ್ಟೆಗಳಲ್ಲಿ ವೀಲ್‌ಚೇರ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಿಗೆ ಅನತಿ ದೂರದಲ್ಲಿ ನಿಂತಿದ್ದ ಅಭ್ಯರ್ಥಿಗಳು, ಮತ್ತವರ ಬೆಂಬಲಿಗರು ಬಂದ ಮತದಾರರಿಗೆ ಕೈ ಮುಗಿಯುತ್ತಾ ಚಿಹ್ನೆಯ ನೆನೆಪು ಮಾಡಿಕೊಡುತ್ತಾ ಅಲ್ಲಿಯೂ ಮತಯಾಚನೆ ಮಾಡಿದರು.

ಕೆಲವು ಕಡೆ ಮತದಾರರಿಗೆ ಊಟೋಪಚಾರದ ವ್ಯವಸ್ಥೆಯೂ ಇತ್ತು. ವಯಸ್ಸಾದವರನ್ನು ಕರೆದೊಯ್ಯಲು ಆಟೊ, ಕಾರ್‌ಗಳ ವ್ಯವಸ್ಥೆಯನ್ನೂ ಅಭ್ಯರ್ಥಿಗಳು ಮಾಡಿದ್ದರು. ಸಂಜೆ 5ರವರೆಗೆ ಮತದಾನ ನಿಗದಿಯಾಗಿದ್ದು, ಕಡೆಯ ಅವಧಿಯಲ್ಲೂ ಕೆಲವರು ಉತ್ಸಾಹದಿಂದ ಬಂದರು. ಹೀಗಾಗಿ ಅಂತಹವರಿಗೆ ಟೋಕನ್‌ ನೀಡಿ, ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.

ಮತದಾನದ ಕಡೆಯ ಒಂದು ಗಂಟೆಯ ಅವಧಿಯಲ್ಲಿ ಕೋವಿಡ್ ಸೋಂಕಿತರಿಗೂ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಅಂತಹ ಯಾವ ಸೋಂಕಿತರೂ ನೋಂದಾಯಿಸಿಕೊಂಡಿರಲಿಲ್ಲ. ಪ್ರತಿ ಮತಗಟ್ಟೆಗೆ ತಲಾ ನಾಲ್ವರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು. ಜೊತೆಗೆ 1200ಕ್ಕೂ ಹೆಚ್ಚು ಪೊಲೀಸರು ಭದ್ರತೆ ಒದಗಿಸಿದ್ದರು.

ಮೊದಲ ಮತದಾನದ ಪುಳಕ

18 ವರ್ಷ ತುಂಬಿದ ಯುವಜನರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಒಂದರಲ್ಲಿ ಮತದಾನ ಮಾಡುವ ಮೂಲಕ ಗಮನ ಸೆಳೆದರು. ಮತದಾನದ ಅನುಭವದ ಬಗ್ಗೆ ಮಾತನಾಡಿ ಹರ್ಷ ವ್ಯಕ್ತಪಡಿಸಿದರು.

ಕೋವಿಡ್ ನಿಯಮ ಪಾಲನೆ

ಕೋವಿಡ್ ಸುರಕ್ಷಾ ನಿಯಮಗಳ ಅನುಸಾರ ಮತದಾನ ಪ್ರಕ್ರಿಯೆ ನಡೆಯಿತು. ಮತಗಟ್ಟೆಗೆ ಬಂದ ಪ್ರತಿ ಮತದಾರರನ್ನು ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ, ಕೈಗೆ ಸ್ಯಾನಿಟೈಸರ್ ನೀಡಿ ಒಳಗೆ ಬಿಡಲಾಯಿತು. ಕೆಲವು ಕಡೆ ಜನರು ಪರಸ್ಪರ ಅಂತರ ಪಾಲನೆ ನಿಯಮ ಮರೆತಿದ್ದು, ಪೊಲೀಸರು ಆಗಾಗ್ಗೆ ಗದರಿ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಭೇಟಿ

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ರಾಮನಗರ ತಾಲ್ಲೂಕಿನ ಕೈಲಾಂಚ ಗ್ರಾಮ ಸೇರಿದಂತೆ ವಿವಿಧ ಮತಗಟ್ಟೆಗಳಿಗೆ ತೆರಳಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಮತಗಟ್ಟೆ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಪ್ರಜಾತಂತ್ರದ ಹಬ್ಬದಲ್ಲಿ ಪ್ರತಿಯೊಬ್ಬ ಮತದಾರರು ಭಾಗವಹಿಸುವಂತೆ ಮನವಿ ಮಾಡಿದರು.

ಅವಧಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 2 ಹಾಗೂ ಹಾರೋಹಳ್ಳಿ ಪಟ್ಟಣ ಪಂಚಾಯಿತಿ ರಚನೆ ಹಿನ್ನೆಲೆಯಲ್ಲಿ 5 ಸೇರಿದಂತೆ ಕನಕಪುರ ತಾಲ್ಲೂಕಿನ ಏಳು ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಚುನಾವಣೆ ನಡೆಯಲಿಲ್ಲ.

ಪ್ರಮುಖರಿಂದ ಮತದಾನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪತ್ನಿ ಉಷಾ ಜೊತೆಗೂಡಿ ಕನಕಪುರ ತಾಲ್ಲೂಕಿನ ದೊಡ್ಡಾಲಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಸಂಸದ ಡಿ.ಕೆ. ಸುರೇಶ್‌ ಸಹ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಮಾಗಡಿ ಶಾಸಕ ಎ.ಮಂಜುನಾಥ್ ಬಿಡದಿ ಹೋಬಳಿಯ ಬೈರಮಂಗಲ ಮತಗಟ್ಟೆಯಲ್ಲಿ ಹಾಗೂ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮರಳವಾಡಿಯಲ್ಲಿನ ಮತ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿದರು.

ಮತದಾರರಿಗೆ ಆಮಿಷ

ಮೊಬೈಲ್‌, ಸೀರೆ, ಕುಕ್ಕರ್‌, ನಗದು ಸೇರಿದಂತೆ ನಾನಾ ಆಮಿಷಗಳನ್ನು ಒಡ್ಡುವ ಮೂಲಕ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಕಡೆಯ ಕ್ಷಣದಲ್ಲೂ ಪ್ರಯತ್ನಿಸಿದರು ಎಂಬ ಆರೋಪಗಳು ಕೇಳಿಬಂದಿವೆ. ಕೆಲವು ಕಡೆ ಅಭ್ಯರ್ಥಿಗಳ ಬೆಂಬಲಿಗರು ಬಿರಿಯಾನಿಯ ವ್ಯವಸ್ಥೆ ಮಾಡಿದ್ದರೆ, ಇನ್ನೂ ಕೆಲವೆಡೆ ತೆಂಗಿನ ಸಸಿ ವಿತರಣೆಯೂ ನಡೆಯಿತು. ವಯಸ್ಸಾದವರನ್ನು ಮನೆಯಿಂದ ತಾವೇ ಕರೆದೊಯ್ದು ಮತದಾನ ಮಾಡಿಸಿ ವಾಪಸ್ ಕರೆತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ರಾಗಿ ಮೆದೆಗೆ ಬೆಂಕಿ

ಬೈರಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಳಾಳುಸಂದ್ರ ಗ್ರಾಮದಲ್ಲಿ ಮಂಗಳವಾರ ಚಂದ್ರು ಎಂಬುವರಿಗೆ ಸೇರಿದ ರಾಗಿ ಮೆದೆಯೊಂದಕ್ಕೆ ಬೆಂಕಿ ತಗುಲಿದ್ದು, 6 ಕ್ವಿಂಟಲ್‌ನಷ್ಟು ರಾಗಿ ನಷ್ಟವಾಗಿದೆ. ಚಂದ್ರು ಗ್ರಾ.ಪಂ. ಅಭ್ಯರ್ಥಿಯೊಬ್ಬರ ಸಂಬಂಧಿಕರಾಗಿದ್ದಾರೆ. ಎದುರಾಳಿ ಗುಂಪಿನವರು ರಾಜಕೀಯ ವೈಷಮ್ಯದಿಂದ ಬೆಂಕಿ ಹಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT