ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ಕನಿಷ್ಠ ವೇತನ, ಪಿಂಚಣಿಗೆ ಆಗ್ರಹ

ಜಿಲ್ಲಾಧಿಕಾರಿ ಎದುರು ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ
Published 26 ಜನವರಿ 2024, 7:28 IST
Last Updated 26 ಜನವರಿ 2024, 7:28 IST
ಅಕ್ಷರ ಗಾತ್ರ

ರಾಮನಗರ: ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದವರಿಗೆ ಸಾಮಾಜಿಕ ಭದ್ರತೆ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.

ಪಂಚಾಯಿತಿಗಳಲ್ಲಿ ಕರ ವಸೂಲಿಗಾರ, ಗುಮಾಸ್ತ, ಕ್ಲರ್ಕ್/ಡಾಟಾ ಎಂಟ್ರಿ ಆಪರೇಟರ್, ಜವಾನ, ನೀರುಗಂಟಿ ಹಾಗೂ ಸ್ವಚ್ಛತಾಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹುದ್ದೆಗಳು ಸೃಷ್ಟಿಯಾದಾಗಿನಿಂದಲೂ ಅವರಿಗೆ ಕನಿಷ್ಠ ಕೂಲಿ ಹೊರತುಪಡಿಸಿ, ಬೇರಾವುದೇ ಸೌಲಭ್ಯ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜೀವಮಾನವಿಡೀ ದುಡಿದು ನಿವೃತ್ತಿಯಾದವರಿಗೆ ಪಿಂಚಣಿ ಸೇರಿದಂತೆ ಯಾವುದೇ ಸಾಮಾಜಿಕ ಭದ್ರತೆ ಇಲ್ಲ. ಇದರಿಂದಾಗಿ, ಇಳಿ ವಯಸ್ಸಿನಲ್ಲಿ ಜೀವನ ನಿರ್ವಹಣೆ ಸವಾಲಾಗಿದೆ. ಹಿಂದೆ ನಮಗೂ ಪಿಂಚಣಿ ನೀಡಲು ಸರ್ಕಾರವೇ ಆಯೋಗವೊಂದನ್ನು ರಚಿಸಿ, ವರದಿ ತರಿಸಿಕೊಂಡಿತ್ತು. ವರದಿ ಶಿಫಾರಸ್ಸಿನಂತೆ ಪಂಚಾಯಿತಿ ನೌಕರರಿಗೆ ಕನಿಷ್ಠ ₹6 ಸಾವಿರ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರ ನಮಗೆ ನಿಗದಿಪಡಿಸಿರುವ ಕನಿಷ್ಠ ವೇತನಕ್ಕೆ ಬದಲಾಗಿ, ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಕನಿಷ್ಠ ₹31 ಸಾವಿರ ವೇತನ ನೀಡಬೇಕು. ಈ ಬಗ್ಗೆ ನೌಕರರ ಸಂಘವು ಹಿಂದಿನಿಂದಲೂ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಕಾರ್ಮಿಕ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರ ಜೊತೆಗೂ ಮಾತುಕತೆ ನಡೆಸಿದರೂ, ನಮ್ಮ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಇನ್ನಾದರೂ ನಮಗೆ ನ್ಯಾಯಯುತ ಸಂಬಳ ಕೊಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಸರ್ಕಾರ ರೈಲ್ವೆ, ವಿದ್ಯುತ್ ಸೇರಿದಂತೆ ಸೇವಾ ವಲಯವನ್ನು ಖಾಸಗೀಕರಣ ಮಾಡಬಾರದು. ಇದರಿಂದ ಉದ್ಯೋಗಗಳು ಕಡಿಮೆಯಾಗಲಿದೆ.  ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ರೈತರ ಬೆಳೆಗಳಗೆ ಲಾಭದಾಯ ಬೆಂಬಲ ಬೆಲೆ ಖಾತರಿಪಡಿಸಬೇಕು ಎಂದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ, ಜಿಲ್ಲಾಧ್ಯಕ್ಷ ಪ್ರದೀಪ್, ಪ್ರಧಾನ ಕಾರ್ಯದರ್ಶಿ ಜಯಲಿಂಗು, ಖಜಾಂಚಿ ಎಂ.ಡಿ. ಪ್ರಸಾದ್, ಉಪಾಧ್ಯಕ್ಷ ಖಮರುದ್ದೀನ್ ಪಾಷ, ರಾಮನಗರ ತಾಲ್ಲೂಕು ಅಧ್ಯಕ್ಷ ರಾಜೇಶ್, ಚನ್ನಪಟ್ಟಣ ಸುರೇಶ್, ಮಾಗಡಿಯ ನಾಗರಾಜು, ಕನಕಪುರದ ಪರಮಶಿವಮೂರ್ತಿ, ಸಿಐಟಿಯು ರಾಜ್ಯ ಕಾರ್ಯದರ್ಶಿ ಬಿ.ವಿ. ರಾಘವೇಂದ್ರ ಹಾಗೂ ಇತರರು ಇದ್ದರು.

ವರ್ಗಾವಣೆಗೆ ಅವಕಾಶಕ್ಕೆ ಒತ್ತಾಯ

ಗುತ್ತಿಗೆ ಮತ್ತು ಹೊರಗುತ್ತಿಗೆ ನೇಮಕಾತಿ ರದ್ದುಗೊಳಿಸಬೇಕು. ಪಂಚಾಯಿತಿಗಳಲ್ಲಿ ಕೆಲಸ ಮಾಡುವವರಿಗೆ ವರ್ಗಾವಣೆಗೆ ಅವಕಾಶ ಕೊಡಬೇಕು. ನೀರುಗಂಟಿಗಳಿಗೆ ಬಹುಪಯೋಗಿ ಕೆಲಸದ ಬದಲು ನಿರ್ದಿಷ್ಟ ಕೆಲಸವನ್ನು ಗೊತ್ತುಪಡಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರ ವಸೂಲಿಗಾರರ ಹುದ್ದೆ ನಿಗದಿ ಮಾಡಬೇಕು. ಐ.ಪಿ.ಡಿ. ಸಾಲಪ್ಪ ವರದಿಯಂತೆ ಪಂಚಾಯಿತಿ ಮಟ್ಟದಲ್ಲಿ ಸ್ವಚ್ಛತಾಗಾರರನ್ನು ಕಡ್ಡಾಯವಾಗಿ ನೇಮಕ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT