ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ಸಾರಿಗೆ ನೌಕರರಿಗೆ ದಿನಸಿ ಕಿಟ್‌

Last Updated 18 ಏಪ್ರಿಲ್ 2021, 3:42 IST
ಅಕ್ಷರ ಗಾತ್ರ

ಮಾಗಡಿ: ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಸರ್ವಪಕ್ಷಗಳ ಸಭೆ ಕರೆದು ನೌಕರರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮಾಜಿ ಶಾಸಕ ಎಚ್‌.ಸಿ. ಬಾಲಕೃಷ್ಣ ಒತ್ತಾಯಿಸಿದರು.

ಯುವ ಕಾಂಗ್ರೆಸ್‌ ವತಿಯಿಂದ ಶನಿವಾರ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸಾರಿಗೆ ನೌಕರರ 70 ಕುಟುಂಬಗಳಿಗೆ ದಿನಸಿ ಕಿಟ್‌ ವಿತರಿಸಿ ಅವರು ಮಾತನಾಡಿದರು.

ಸರ್ಕಾರ ಸಾರಿಗೆ ನೌಕರರ ಮಾರ್ಚ್‌ ತಿಂಗಳ ವೇತನ ತಡೆ ಹಿಡಿದು ದೌರ್ಜನ್ಯ ನಡೆಸಿದೆ. ಕೂಡಲೇ ಬಾಕಿ ವೇತನ ಬಿಡುಗಡೆಗೊಳಿಸಬೇಕು. ಸಾರಿಗೆ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಕೇವಲ ₹ 18 ಸಾವಿರ ವೇತನ ನೀಡುವುದು ಅನ್ಯಾಯ. ಜೀವನ ಹೇಗೆ ನಿರ್ವಹಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸಂವಿಧಾನದ ಆಶಯವಾಗಿದೆ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೌಕರರಿಗೆ ಬೆಂಬಲ ನೀಡಿದ್ದು ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಕಾಂಗ್ರೆಸ್‌ ಪಕ್ಷ ಯಾವತ್ತು ದುಡಿಯುವ ವರ್ಗದ ಪರವಾಗಿ ಹೋರಾಟ ಮಾಡಲಿದೆ. ವರ್ಗಾವಣೆ, ವಜಾದಂತಹ ಕಾನೂನುಬಾಹಿರ ಕೆಲಸ ಮಾಡುತ್ತಿರುವ ಸರ್ಕಾರದ ಗೊಡ್ಡು ಬೆದರಿಕೆಗೆ ನೌಕರರು ಹೆದರುವ ಅಗತ್ಯವಿಲ್ಲ ಎಂದು ಹೇಳಿದರು.

ಲಾಕ್‌ಡೌನ್‌ ಸಮಯದಲ್ಲಿ ಜನಸಾಮಾನ್ಯರ ಸಂಕಟಕ್ಕೆ ನೆರವಾಗಲು ಕಾಂಗ್ರೆಸ್ ಪಕ್ಷದಿಂದ ಟಾಸ್ಕ್‌ಪೋರ್ಸ್‌ ರಚನೆ ಮಾಡಿದರೆ ಶಾಸಕ ಮಂಜುನಾಥ ಎಲ್ಲದರಲ್ಲೂ ರಾಜಕೀಯ ಬೆರೆಸಿ ಟೀಕಿಸಿದರು. ರೈತರು ಬೆಳೆದಿದ್ದ ಬೆಳೆಯನ್ನು ಕೊಂಡು ಹಳ್ಳಿ ಹಳ್ಳಿಗೆ ಉಚಿತವಾಗಿ ವಿತರಣೆ ಮಾಡಿದೆವು. ಈಗ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡುತ್ತೇವೆ ಎಂದರು.

ಜನಸಾಮಾನ್ಯರ ಸಂಕಟ ನಿವಾರಿಸಲು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಮುಂದಾಗದಿದ್ದರೆ ಜನರ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.

ಪುರಸಭಾ ಸದಸ್ಯರಾದ ರಂಗಹನುಮಯ್ಯ, ಎಚ್‌.ಜೆ. ಪುರುಷೋತ್ತಮ್, ಶಿವಕುಮಾರ್‌, ನಯಾಜ್, ಮುಖಂಡರಾದ ಬೆಳಗುಂಬ ವಿಜಯಕುಮಾರ್, ಚಂದ್ರಶೇಖರ್‌, ಕಾರ್ತಿಕ್‌, ತೇಜಸ್‌ ಕುಮಾರ್‌, ನರಸಿಂಹಮೂರ್ತಿ, ಪುರುಷೋತ್ತಮ್‌ ಇದ್ದರು. ದಿನಸಿ ಕಿಟ್‌ ಪಡೆಯಲು ನೂಕುನುಗ್ಗಲು ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT