ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಸೇರದ ನವೆಂಬರ್ ‘ಗೃಹಲಕ್ಷ್ಮಿ’ ಹಣ

ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ ಪಾವತಿಯಾಗದ ₹2 ಸಾವಿರ
Published 10 ಡಿಸೆಂಬರ್ 2023, 5:03 IST
Last Updated 10 ಡಿಸೆಂಬರ್ 2023, 5:03 IST
ಅಕ್ಷರ ಗಾತ್ರ

ರಾಮನಗರ: ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ‘ಗೃಹಲಕ್ಷ್ಮಿ’ಯೋಜನೆಯಡಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ನವೆಂಬರ್ ತಿಂಗಳ ಹಣವು ಪಾವತಿಯಾಗಿಲ್ಲ. ತಿಂಗಳು ಕಳೆದು ಅದಾಗಲೇ ಡಿಸೆಂಬರ್ ತಿಂಗಳಿಗೆ ಕಾಲಿಟ್ಟು ಹತ್ತು ದಿನಗಳಾಗುತ್ತಾ ಬಂದರೂ ಹಣ ಬಾರದಿರುವುದು ಚಿಂತೆಗೀಡು ಮಾಡಿದೆ.

ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿದ್ದ ‘ಗೃಹಲಕ್ಷ್ಮಿ’ ಯೋಜನೆಗೆ, ಜುಲೈ 20ರಂದು ರಾಜ್ಯದಾದ್ಯಂತ ಚಾಲನೆ ನೀಡಲಾಗಿತ್ತು. ಪ್ರತಿ ತಿಂಗಳು ಇಷ್ಟೊತ್ತಿಗಾಗಲೇ ಪಾವತಿಯಾಗುತ್ತಿದ್ದ ಮೊತ್ತವು ಈ ಸಲ ವಿಳಂಬವಾಗಿದೆ. ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 2,94,399 ಫಲಾನುಭವಿಗಳನ್ನು ಗುರುತಿಸಲಾಗಿದೆ. ಈ ಪೈಕಿ 2,62,531 ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ ಮೊತ್ತ ಪಾವತಿಯಾಗುತ್ತಿದೆ.

ವಿಳಂಬದಿಂದ ತೊಂದರೆ: ‘ಸರ್ಕಾರವು ಪ್ರತಿ ತಿಂಗಳು ನೀಡುತ್ತಿರುವ ₹2 ಸಾವಿರ ಗೃಹಲಕ್ಷ್ಮಿ ಮೊತ್ತವು ನಮ್ಮ ಬದುಕಿಗೆ ಆಸರೆಯಾಗಿದೆ. ಆರೋಗ್ಯ ಸಮಸ್ಯೆ, ಔಷಧ–ಮಾತ್ರೆ ಖರೀದಿ ಸೇರಿದಂತೆ ಪ್ರತಿ ತಿಂಗಳ ಕೆಲ ಖರ್ಚುಗಳಿವೆ. ಆದರೆ, ಈ ತಿಂಗಳು ವಿಳಂಬವಾಗಿರುವುದರಿಂದ ಸ್ವಲ್ಪ ತೊಂದರೆಯಾಗಿದೆ’ ಎಂದು ರಾಮನಗರದ ಫಲಾನುಭವಿಗೆ ಜಯಲಕ್ಷ್ಮಿ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಗೃಹಲಕ್ಷ್ಮಿ ಬರುವುದಕ್ಕೆ ಮುಂಚೆ ಸಣ್ಣಪುಟ್ಟ ಖರ್ಚುಗಳಿಗೂ ಮಕ್ಕಳ ಬಳಿಯೇ ಹಣ ಕೇಳಬೇಕಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಇದರಿಂದ, ಅವರಿಗೂ ಸ್ವಲ್ಪ ಆರ್ಥಿಕ ಹೊರೆ ತಗ್ಗಿದೆ. ಆದರೆ, ಸರ್ಕಾರದವರು ತಡ ಮಾಡದೆ ಪ್ರತಿ ತಿಂಗಳು 10ನೇ ತಾರೀಖಿನೊಳಗೆ ಬ್ಯಾಂಕ್ ಖಾತೆಗೆ ಹಣ ಹಾಕಬೇಕು. ಇಲ್ಲದಿದ್ದರೆ ತೊಂದರೆಯಾಗಲಿದೆ’ ಎಂದು ನಿಂಗಮ್ಮ ಹೇಳಿದರು.

31,868 ಮಂದಿಗಿಲ್ಲ ಗೃಹಲಕ್ಷ್ಮಿ: ಯೋಜನೆಗೆ ಜಿಲ್ಲೆಯಲ್ಲಿ ಗುರುತಿಸಿರುವ ಫಲಾನುಭವಿಗಳ ಪೈಕಿ 31,868 ಮಂದಿಯ ಬ್ಯಾಂಕ್‌ ಖಾತೆಗಳಿಗೆ ₹2 ಸಾವಿರ ಮೊತ್ತ ಪಾವತಿಯಾಗಿಲ್ಲ. ಜಿಲ್ಲೆಯಾದ್ಯಂತ ಇವರ ಸಂಖ್ಯೆ ಶೇ 10.8ರಷ್ಟಿದೆ. ಹಣ ಪಡೆಯಲು ಅರ್ಹರಿದ್ದರೂ ವಿವಿಧ ಕಾರಣಗಳಿಗಾಗಿ ಇವರಿಗೆ ‘ಗೃಹಲಕ್ಷ್ಮಿ’ ಇನ್ನೂ ಒಲಿದಿಲ್ಲ.

‘ಗೃಹಲಕ್ಷ್ಮಿ ಯೋಜನೆಯ ಅರ್ಹರ ಪೈಕಿ ಆರಂಭದಲ್ಲಿ 42,500 ಫಲಾನುಭವಿಗಳಿಗೆ ಮೊತ್ತ ಪಾವತಿಯಾಗಿರಲಿಲ್ಲ. ಪಡಿತರ ಚೀಟಿಯ ಇಕೆವೈಸಿ ಆಗದಿರುವುದು, ಪಡಿತರ ಚೀಟಿಯಲ್ಲಿ ಮನೆ ಯಜಮಾನಿ ಮಹಿಳೆ ಬದಲು ಪುರುಷರಾಗಿರುವುದು, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದಿರುವುದು ಸಹ ಹಣ ಪಾವತಿಯಾಗದಿರುವುದಕ್ಕೆ ಪ್ರಮುಖ ಕಾರಣ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಪ್ರಸನ್ನ ಅವರು ‘ಪ್ರಜಾವಾಣಿ’ ತಿಳಿಸಿದರು.

‘ಈ ಕುರಿತು ಇಲಾಖೆಯು ತಾಲ್ಲೂಕುವಾರು ಫಲಾನುಭವಿಗಳನ್ನು ಗುರುತಿಸಿ, ಬ್ಯಾಂಕ್ ಮತ್ತು ಅಂಚೆ ಇಲಾಖೆ ಸಹಯೋಗದಲ್ಲಿ ಕೈಗೊಂಡ ಕ್ರಮಗಳಿಂದಾಗಿ 10,632 ಮಂದಿಗೆ ಹಣ ಹೋಗುತ್ತಿದೆ. ಪಡಿತರ ಚೀಟಿಯಲ್ಲಿ ಯಜಮಾನಿ ವಿವರವನ್ನು ಬದಲಾಯಿಸಿದ್ದರೆ ಶೀಘ್ರವೇ ಅಪ್ಡೇಟ್ ಆಗಲಿದೆ. ಬಳಿಕ, ಅವರ ಬ್ಯಾಂಕ್ ಖಾತೆಗೂ ಮೊತ್ತ ಪಾವತಿಯಾಗಲಿದೆ’ ಎಂದು ಹೇಳಿದರು.

Highlights - ಅಂಕಿಅಂಶ... 2,94,399ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಗುರಿ2,62,531ಇದುವರೆಗಿನ ಸಾಧನೆಶೇ 89.18ಶೇಕಡಾವಾರು ಪ್ರಗತಿ31,868ಗೃಹಲಕ್ಷ್ಮಿ ಭಾಗ್ಯವಿಲ್ಲದವರು ಪಟ್ಟಿ.. ರಾಮನಗರ ಜಿಲ್ಲೆಯ ‘ಗೃಹಲಕ್ಷ್ಮಿ’ ಪ್ರಗತಿತಾಲ್ಲೂಕು;ಗುರಿ;ಸಾಧನೆ;ಶೇಕಡವಾರುರಾಮನಗರ;69,911;61,427;61,345;87.86ಚನ್ನಪಟ್ಟಣ;70,937;62,942;88.73ಹಾರೋಹಳ್ಳಿ;23,333;20,729;88.84ಕನಕಪುರ;73,761;67,706;91.79ಮಾಗಡಿ;56,457;49,727;88.08

ಗೃಹಲಕ್ಷ್ಮಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯು ಕೇಂದ್ರೀಕೃತವಾಗಿ ನಡೆಯಲಿದೆ. ಜಿಲ್ಲೆಗೆ ಸಂಬಂಧಿಸಿದ ಮಾಹಿತಿಯನ್ನು ಕಳಿಸಲಾಗಿದ್ದು ಸದ್ಯದಲ್ಲೇ ಮೊತ್ತ ಪಾವತಿಯಾಗಲಿದೆ
– ಪ್ರಸನ್ನ ಉಪ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಮನಗರ

ಅಕ್ಟೋಬರ್ ಮೊತ್ತವೂ ಹಲವರಿಗೆ ಬಂದಿಲ್ಲ ಗೃಹಲಕ್ಷ್ಮಿಯ ಅಕ್ಟೋಬರ್ ತಿಂಗಳ ಹಣವು ಜಿಲ್ಲೆಯ ಹಲವು ಫಲಾನುಭವಿಗಳಿಗೆ ಇನ್ನೂ ಪಾವತಿಯಾಗಿಲ್ಲ. ಸತತ ಎರಡು ತಿಂಗಳ ಹಣ ಇನ್ನು ಬಾರದಿರುವ ಕುರಿತು ಯಜಮಾನಿಯರು ಆತಂಕಕ್ಕೀಡಾಗಿದ್ದಾರೆ. ‘ಎರಡು ತಿಂಗಳ ಹಣ ಬಂದಿಲ್ಲದಿರುವುದರಿಂದ ಚಿಂತೆಗೀಡಾಗಿದ್ದೆ. ನಂತರ ಸ್ಥಳೀಯ ಅಧಿಕಾರಿಗಳನ್ನು ವಿಚಾರಿಸಿದಾಗ ಸ್ವಲ್ಪ ತಡವಾಗಿ ಬರಲಿದೆ. ನಿಮ್ಮ ಹಣ ಎಲ್ಲೂ ಹೋಗುವುದಿಲ್ಲ ಕಾಯಿರಿ ಎಂದು ಪ್ರತಿಕ್ರಿಯಿಸಿದರು. ನಾನು ಸಹ ಯಾವಾಗ ಬರುತ್ತದೊ ಎಂದು ಕಾಯುತ್ತಿದ್ದೇನೆ’ ಎಂದು ಫಲಾನುಭವಿ ನಾಗಮ್ಮ ಹೇಳಿದರು. 3 ಕಂತಿನಲ್ಲಿ ಪಾವತಿ: ‘ಫಲಾನುಭವಿಗಳಿಗೆ ಮೂರು ಕಂತುಗಳಲ್ಲಿ ಗೃಹಲಕ್ಷ್ಮಿ ಹಣವನ್ನು ಪಾವತಿಸಲಾಗುತ್ತಿದೆ. ಈಗಾಗಲೇ ಎರಡು ಕಂತು ಪಾವತಿಯಾಗಿದೆ. ಮೂರನೇ ಕಂತಿನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಶೀಘ್ರ ಯಜಮಾನಿಯರ ಖಾತೆಗೆ ಹಣ ಬರಲಿದೆ. ಮುಂಚೆ ಜಿಲ್ಲಾ ಮಟ್ಟದಲ್ಲಿ ಡಿಬಿಟಿ (ನೇರ ನಗದು ವರ್ಗಾವಣೆ) ನಡೆಯುತ್ತಿತ್ತು. ಒಂದು ತಿಂಗಳಿಂದ ಕೇಂದ್ರೀಕೃ ಮಾಡಲಾಗಿದೆ. ಈ ಪ್ರಕ್ರಿಯೆಯಿಂದಾಗಿ ಸ್ವಲ್ಪ ವಿಳಂಬವಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT