ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀ ಸ್ವಾವಲಂಬನೆಗೆ ‘ಶಕ್ತಿ’ ತುಂಬಿದ ಗೃಹಲಕ್ಷ್ಮಿ: ಡಿ.ಕೆ. ಶಿವಕುಮಾರ್

Published 26 ಫೆಬ್ರುವರಿ 2024, 5:02 IST
Last Updated 26 ಫೆಬ್ರುವರಿ 2024, 5:02 IST
ಅಕ್ಷರ ಗಾತ್ರ

ಬಿಡದಿ: ‘ಮಹಿಳೆಯರೆಂದರೆ ಸೌಭಾಗ್ಯ ಎಂದು ಪರಿಗಣಿಸಿರುವ ಕಾಂಗ್ರೆಸ್ ಸರ್ಕಾರ, ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಯನ್ನು ಜಾರಿಗೆ ತಂದು ಸ್ತ್ರೀಯರ ಸ್ವಾವಲಂಬನೆಗೆ ಬುನಾದಿ ಹಾಕಿದೆ. ಈ ಯೋಜನೆಗಳಿಂದ ನಮ್ಮ ಸರ್ಕಾರ ಇನ್ನೂ ನಾಲ್ಕು ವರ್ಷ ಮಾತ್ರವಲ್ಲ, ಮುಂದಿನ ಐದು ವರ್ಷಗಳ ಅವಧಿಯೂ ಸೇರಿದಂತೆ 9 ವರ್ಷ ನಿಮ್ಮ ಸೇವೆ ಮಾಡಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಪಟ್ಟಣದ ಅವರಗೆರೆ ಬಳಿ ಭಾನುವಾರ ನಡೆದ ಗೃಹಲಕ್ಷ್ಮಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಶಕ್ತಿ ಯೋಜನೆಯಿಂದ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ಸರ್ಕಾರ, ಸಿದ್ದರಾಮಯ್ಯ ಹಾಗೂ ನನ್ನ ಹೆಸರಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ಹುಂಡಿಗಳು ತುಂಬುತ್ತಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದು ನಮ್ಮ ಯೋಜನೆಗಳಿಗಿರುವ ಶಕ್ತಿ’ ಎಂದರು.

‘ಸಂಸದ ಸುರೇಶ್ ಅವರನ್ನು ಸೋಲಿಸಲು ಬಿಜೆಪಿ– ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ. ಇಷ್ಟು ದಿನ ಚನ್ನಪಟ್ಟಣದಲ್ಲಿ ಬಡಿದಾಡುತ್ತಿದ್ದ ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ಈಗ ಪರಸ್ಪರ ಆಲಿಂಗನ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಫಲಿತಾಂಶ ಏನಾಯ್ತು? ಇಬ್ಬರೂ ಸೇರಿದರೂ ಕಾಂಗ್ರೆಸ್‌ ಅಭ್ಯರ್ಥಿ ಪುಟ್ಟಣ್ಣ ಗೆದ್ದರು’ ಎಂದು ಹೇಳಿದರು.

‘ಜಿಲ್ಲೆಯ ಅಭಿವೃದ್ಧಿಗೆ ನಾವು ಬದ್ಧರಾಗಿದ್ದೇವೆ. ಬಿಡದಿವರೆಗೂ ಮೆಟ್ರೊ ತರಲು ಸಿದ್ಧತೆ ಮಾಡಲಾಗಿದೆ. ಬಿಡದಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂದು ರಚನೆ ಮಾಡಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರೂಪುರೇಷೆ ತಯಾರಿಸಲಾಗಿದೆ’ ಎಂದರು.

ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಮಾತನಾಡಿ, ‘ನಾವು ಹೇಳಿದ್ದಂತೆ ಗೃಹಲಕ್ಷ್ಮಿಯರ ಖಾತೆಗೆ ಹಣ ಬರುತ್ತಿದೆ. ನಿಮ್ಮ ಬ್ಯಾಂಕ್ ಖಾತೆಗೆ ₹15 ಲಕ್ಷ ಹಾಕುವೆ ಎಂದಿದ್ದ ಮೋದಿ ಹದಿನೈದು ರೂಪಾಯಿನೂ ಕೊಡಲಿಲ್ಲ. ಈಗ ನಡೆಯುತ್ತಿರುವುದು ಗ್ಯಾರಂಟಿ ಬೇಕಾ, ಬೇಡವಾ ಎನ್ನುವ ಚುನಾವಣೆ. ಮೈತ್ರಿಕೂಟವು ಹೆಚ್ಚು ಸ್ಥಾನ ಗೆದ್ದು ಗ್ಯಾರಂಟಿ ನಿಲ್ಲಿಸದಿದ್ದರೆ, ಮುಂದಿನ 9 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಬಿಜೆಪಿಯ ಅಮಿತ್ ಷಾ ಗೆ ಹೇಳಿದ್ದಾರೆ. ನಮ್ಮ ಗ್ಯಾರಂಟಿ ಕುರಿತು ಅವರಿಗೆ ಎಷ್ಟು ಭಯವಿದೆ ನೋಡಿ’ ಎಂದು ವ್ಯಂಗ್ಯವಾಡಿದರು.

‘ಗ್ಯಾರಂಟಿಗಳನ್ನು ಗೇಲಿ ಮಾಡುವ ಬಿಜೆಪಿ ಮತ್ತು ಜೆಡಿಎಸ್‌ನವರು ತಾಕತ್ತಿದ್ದರೆ, ಅವರ ಕಾರ್ಯಕರ್ತರಿಗೆ ಗ್ಯಾರಂಟಿ ತಿರಸ್ಕಾರ ಮಾಡಿ ಅಂತ ಹೇಳಲಿ ನೋಡೋಣ. ನಮ್ಮದು ಬಡವರು ಸರ್ಕಾರ. ಅವರ ಅಭ್ಯದಯಕ್ಕಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಬೇಕಾದರೆ  ಲೋಕಸಭಾ ಚುನಾವಣೆಯಲ್ಲೂ ನಮಗೆ ಆಶೀರ್ವಾ ಮಾಡಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್. ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜ್, ಸ್ಥಳೀಯ ಮುಖಂಡರು ಇದ್ದರು. ಡಿ.ಕೆ. ಸಹೋದರರು ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರೆಲ್ಲರೂ ರುಮಾಲು ಧರಿಸಿದ್ದು ಗಮನ ಸೆಳೆಯಿತು. ಕಾರ್ಯಕ್ರಮ ಉದ್ಘಾಟನೆ ಸಂದರ್ಭದಲ್ಲಿ ಮಹಿಳೆಯರು ವೇದಿಕೆಯಲ್ಲಿ ಹೆಚ್ಚು ಅಲಂಕರಿಸಿದ್ದರು.

ಬಿಡದಿಯ ಅವರಗೆರೆಯಲ್ಲಿ ನಡೆದ ಗೃಹಲಕ್ಷ್ಮಿಯರ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ
ಬಿಡದಿಯ ಅವರಗೆರೆಯಲ್ಲಿ ನಡೆದ ಗೃಹಲಕ್ಷ್ಮಿಯರ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ
5 ಬೆರಳು ಸೇರಿ ಕೈ ಮುಷ್ಠಿಯಾಗುವಂತೆ 5 ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದರಿಂದ ಕಮಲ ಉದುರಿದರೆ ಮಹಿಳೆ ತೆನೆ ಬಿಸಾಕಿದಳು. ಕಮಲ ಕೆರೆಯಲ್ಲಿ ತೆನೆ ಹೊಲದಲ್ಲಿದ್ದರೆ ಅಂದ. ದಾನ–ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ
– ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ
ನೀವೆಲ್ಲರೂ ಗ್ರೇಟರ್ ಬೆಂಗಳೂರಿನವರು. ಇದನ್ನು ಡಿ.ಕೆ ಶಿವಕುಮಾರ್ ಮಾಡಿದ್ದೇ ಹೊರತು ತೋಟದಲ್ಲಿ ಕೂತವರಲ್ಲ. ಸಾವಿರ ಟೀಕೆಗಳನ್ನು ಮಾಡುತ್ತಿರುವವರು ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೆಲಸ ಮಾಡಿಲ್ಲ
– ಡಿ.ಕೆ. ಸುರೇಶ್ ಸಂಸದ
ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ: ಸುರೇಶ್
‘ಸಿನಿಮಾದವರು ರೀಲ್ ಬಿಡ್ತಾರೆ. ಅದರಂತೆ ಕುಮಾರಸ್ವಾಮಿ ರೀಲ್ ಬಿಡ್ತಾವ್ನೆ. ನಾನು ಕಲ್ಲು ಒಡೆಯುತ್ತಿದ್ನೊ ಅವನು ಕಸ ಗುಡಿಸುತ್ತಿದ್ನೊ ಮುಂದೆ ಮಾತನಾಡುತ್ತೇನೆ. ಅವನು ಡಬ್ಬಾ ಮಾಡಿಕೊಂಡು ನಮ್ಮತ್ರ ಬರುವವನು. ನಾವು ರೀಲ್ ಎಲ್ಲಾ ಬಿಟ್ಟು ಬಂದಿರುವವರು’ ಎಂದು ಸಂಸದ ಡಿ.ಕೆ. ಸುರೇಶ್ ಅವರು ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ‘ದೇಶಕ್ಕೆ ಮೋದಿ ಗ್ಯಾರಂಟಿಯಾದರೆ ಬೆಂಗಳೂರು ಗ್ರಾಮಾಂತರಕ್ಕೆ ಸುರೇಶ್ ಗ್ಯಾರಂಟಿ. ನಮ್ಮ ತೆರಿಗೆ ಪಾಲು ಕೇಳಿದ್ದಕ್ಕೆ ಬಿಜೆಪಿಯವರು ನನ್ನನ್ನು ರಾಷ್ಟ್ರದ್ರೋಹಿ ಗುಂಡಿಕ್ಕಿ ಕೊಲ್ಲಿ ಎಂದರು. ಕುಮಾರಸ್ವಾಮಿ ಕೂಡಾ ವಕಾಲತ್ತು ಹಾಕುತ್ತಾನೆ. ನಾನು ಸ್ವಂತಕ್ಕೇನೂ ಕೇಳಲಿಲ್ಲ. ಕನ್ನಡಿಗರು ಕಟ್ಟುವ ತೆರಿಗೆಯ ಪಾಲು ಕೊಡಿ ಎಂದಷ್ಟೇ ಕೇಳಿದೆ. ಅದಕ್ಕೆ ಗುಂಡಿಕ್ಕುವ ಮಾತನಾಡುತ್ತಾರೆ. ಕನ್ನಡ ಮತ್ತು ಕನ್ನಡಿಗರಿಗೋಸ್ಕರ ನನ್ನ ದೇಹವನ್ನೇ ಕೊಡುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT