ಕನಕಪುರ: ಚುನಾವಣೆ ವೇಳೆ ಜನರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಪಕ್ಷವು ನಡೆದುಕೊಂಡು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ಅವುಗಳ ಅನುಷ್ಠಾನದಲ್ಲಿ ಇರುವ ಸಮಸ್ಯೆಗಳನ್ನು ದೂರ ಮಾಡಲು ತಾಲ್ಲೂಕು ಮಟ್ಟದ ಸಮಿತಿ ರಚಿಸಲಾಗಿದೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ಇಲ್ಲಿನ ತಾಲ್ಲೂಕು ಆಡಳಿತಸೌಧದಲ್ಲಿ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಕಚೇರಿಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಗ್ಯಾರಂಟಿ ಯೋಜನೆ ಜಾರಿ ಮಾಡುವುದರ ಜೊತೆಗೆ ಅದು ಎಷ್ಟರ ಮಟ್ಟಿಗೆ ಜನರನ್ನು ತಲುಪಿದೆ ಮತ್ತು ಎಲ್ಲಿ ದೋಷಗಳಾಗಿವೆ ಎನ್ನುವುದನ್ನು ಪತ್ತೆ ಹಚ್ಚಿ ಸರಿಪಡಿಸಿ ಫಲಾನುಭವಿಗಳಿಗೆ ತಲುಪಿಸುವ ಕೆಲಸವನ್ನು ತಾಲ್ಲೂಕು ಸಮಿತಿ ಮಾಡಲಿದೆ ಎಂದರು.
ಸರ್ಕಾರದ ಯೋಜನೆ ತಲುಪುವಲ್ಲಿ ವಿಳಂಬವಾದರೆ ಜನರು ಇಲ್ಲಿ ಬಂದು ಪ್ರಶ್ನಿಸಬಹುದು. ಅದಕ್ಕಾಗಿ ರಾಜ್ಯದ ಪ್ರತಿ ತಾಲ್ಲೂಕಿನಲ್ಲಿಯೂ ಸಮತಿ ರಚನೆ ಮಾಡಿ ಯೋಜನೆಯನ್ನು ಅರ್ಹರಿಗೆ ತಲುಪಿಸಲಾಗಿತ್ತದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕೆ.ಎನ್.ದಿಲೀಪ್, ಉಪಾಧ್ಯಕ್ಷರಾಗಿ ಶ್ರೀನಿವಾಸಮೂರ್ತಿ, ಸದಸ್ಯರಾಗಿ ರಾಣಿ, ತಗಡೇಗೌಡ, ಸರಸ್ವತಿ, ಸೈಯದ್ ಖುದ್ರತ್ ಉಲ್ಲಾ, ವಾಣಿ, ಉಮರಾಜು, ಮಹೇಶ್ ನಾಯಕ್, ಶಿವರತ್ನಮ್ಮ, ಅರಸೇಗೌಡ, ರೂಪಾ ಡಿ.ಎಸ್., ಸಾಗರ್ ಗೌಡ, ಮಂಜುಳಾ, ಮಂಜುನಾಥ್ ಅವರನ್ನು ನೇಮಕ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕ್ಷೇತ್ರದ ಶಾಸಕರ ಕಚೇರಿ, ಬಗರ್‌ಹುಕ್ಕುಂ ಅಧ್ಯಕ್ಷರ ಕಚೇರಿಯನ್ನು ಉದ್ಘಾಟನೆ ಮಾಡಲಾಯಿತು.
ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ.ರಾಜು, ವಿಧಾನ ಪರಿಷತ್ ಸದಸ್ಯರಾದ ರಾಮೋಜಿಗೌಡ, ಎಸ್.ರವಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್, ಕನಕಪುರ ಯೋಜನಾ ಪ್ರಾದಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ವಿಶ್ವನಾಥ್, ಎಚ್.ಕೆ.ಶ್ರೀಕಂಠ, ಕೆ.ಎಂ.ರಾಜೇಂದ್ರ, ಜೋಸೆಫ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.