ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ: ಮಳೆ ಬಂದರೆ ನೀರು, ಮೈದಾನದಲ್ಲಿ ಪಾಠ

ಗೋವಿಂದರಾಜು ವಿ
Published 1 ಜುಲೈ 2024, 8:21 IST
Last Updated 1 ಜುಲೈ 2024, 8:21 IST
ಅಕ್ಷರ ಗಾತ್ರ

ಹಾರೋಹಳ್ಳಿ: ಇಲ್ಲಿನ ಸರ್ಕಾರಿ ಶಾಲೆ ಕೊಠಡಿಗಳು ಸೋರುತ್ತಿವೆ. ಕೆಲವು ಬೀಳುವ ಹಂತದಲ್ಲಿವೆ. ಇನ್ನೂ ಅನೇಕ ಕಡೆ ಚಾವಣಿ ಕುಸಿದು ಬೀಳುವ ಆತಂಕವಿದೆ. ಮಳೆ ಬಂದರೆ ಕೊಠಡಿಗಳಲ್ಲಿ ನೀರು, ಮೈದಾನದಲ್ಲಿ ಪಾಠ ಮಾಡಬೇಕಾದ ಸ್ಥಿತಿ ಇದೆ.

ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ಶಾಲೆ ಕಥೆ ಇದು. ಈ ಶಿಥಿಲ ಕೊಠಡಿಗಳು ಇಂದೋ-ನಾಳೆಯೋ ಬೀಳುವ ಸ್ಥಿತಿಯಲ್ಲಿವೆ. ಕೊಠಡಿಗಳು ದುರ್ಬಲವಾಗಿವೆ. ‌‌‌ಇವುಗಳ ನಿರ್ಮಾಣಕ್ಕೆ ಮುಂದಾಗದಿರುವುದ ಶಿಕ್ಷಣ ಇಲಾಖೆ ನಿರ್ಲಕ್ಷ್ಯಕ್ಕೆ ಕೈಗನ್ನಡಿ ಆಗಿದೆ.

ಸರ್ಕಾರ ಮಕ್ಕಳಿಗೆ ಬಿಸಿಯೂಟ, ಮೊಟ್ಟೆ, ಹಾಲು, ಸಮವಸ್ತ್ರ ಜೆತೆಗೆ ಕಲಿಕಾ ಚೇತರಿಕೆ, ಓದು ಕರ್ನಾಟಕ, ನಲಿ–ಕಲಿ ಹೀಗೆ ಮಕ್ಕಳನ್ನು ಶಾಲೆಗೆ ಸೆಳೆಯಲು ಹಾಗೂ ಕಲಿಕೆಗೆ ಒತ್ತು ನೀಡುವ ದೃಷ್ಟಿಯಿಂದ ಸಾಲು ಸಾಲು ಯೋಜನೆಗಳನ್ನು ಜಾರಿ ಮಾಡುತ್ತಲೇ ಇದೆ. ಆದರೆ, ಇವೆಲ್ಲವುದಕ್ಕಿಂತ ಮುಖ್ಯವಾಗಿ ಸಮರ್ಪಕ ಶಿಕ್ಷಕರು, ತರಗತಿ ಕೊಠಡಿ ಕೊರತೆ ನೀಗಿಸಲು ಈವರೆಗೂ ಆಗುತ್ತಿಲ್ಲ ಎಂಬುದು ವಿಷಾದಕರ ಸಂಗತಿ.

ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಾಕಷ್ಟು ಏರಿಕೆ ಕಂಡಿದೆ. ಆದರೆ, ಕೊಠಡಿಗಳು ಅತ್ಯಂತ ಶಿಥಿಲಗೊಂಡಿವೆ. ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳು ಪಾಠ ಕೇಳಬೇಕಾದ ಪರಿಸ್ಥಿತಿ ಇದೆ.

ಜಿಲ್ಲೆಗೆ ಅತಿ ಹೆಚ್ಚು ಮಕ್ಕಳು: ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 710 ಮಕ್ಕಳಿವೆ. ಜಿಲ್ಲೆಗೆ ಅತಿ ಹೆಚ್ಚು ಮಕ್ಕಳು ದಾಖಲಾಗಿದ್ದು ಇರುವ 15 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಇವುಗಳು 1992-93ರಲ್ಲಿ ನಿರ್ಮಾಣ ಮಾಡಲಾಗಿದೆ. ಕೊಠಡಿಗಳು ಯಾವುದೇ ಕ್ಷಣದಲ್ಲಿಯೂ ಕುಸಿದು ಬೀಳುವ ಸ್ಥಿತಿಗೆ ತಲುಪಿದೆ.

ಬಿರುಕು ಬಿಟ್ಟ ಗೋಡೆ: ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ಕೊಠಡಿಗಳ ಗೋಡೆ ಹಾಗೂ ಚಾವಡಿಗಳು ಬಿರುಕು ಬಿಟ್ಟಿವೆ. ಮಳೆ ಸಂದರ್ಭದಲ್ಲಿ ನೀರು ತುಂಬಿಕೊಂಡು ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಕಟ್ಟಡದ ಸಿಮೆಂಟ್ ಅವಶೇಷ ಉದುರುತ್ತಿದೆ.

ಸಿಬ್ಬಂದಿಗೆ ಕೊಠಡಿ ಇಲ್ಲ: ಈ ಶಾಲೆ ಶಿಕ್ಷಕರಿಗೆ ಸರಿಯಾದ ಕೊಠಡಿ ಇಲ್ಲ. ಮಕ್ಕಳ ಕೊಠಡಿಯಲ್ಲಿಯೇ ಸಿಬ್ಬಂದಿ ಕಚೇರಿ ಕೆಲಸ ಮಾಡಬೇಕಾಗಿದೆ. ಮಧ್ಯಾಹ್ನ ಸಮಯದಲ್ಲಿ ಮಕ್ಕಳು ಊಟ ಮಾಡಲು ಸರಿಯಾದ ಜಾಗವಿಲ್ಲ.

ಮೈದಾನವೇ ಗತಿ: ಮಳೆ ಬಂದರೆ ಬಯಲಲ್ಲೇ ಪಾಠ ಮಾಡಬೇಕಾಗಿದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ. ಹಲವು ವರ್ಷಗಳಿಂದಲೂ ಕಟ್ಟಡಗಳ ಅಗತ್ಯ ಬಗ್ಗೆ ಮುಖ್ಯ ಶಿಕ್ಷಕರು ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇದುವರೆಗೂ ಕೊಠಡಿಗಳ ಮಂಜೂರಾತಿ ಆಗಿಲ್ಲ. ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಇನ್ನೂ ಹಸ್ತಾಂತರ ಮಾಡಿಲ್ಲ

ಹೊಸದಾಗಿ 11 ಕೊಠಡಿಗಳು ನಿರ್ಮಾಣ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದುವರೆಗೂ ಹಸ್ತಾಂತರ ಮಾಡಿಲ್ಲ. ಇದರಿಂದ ತೊಂದರೆಯಾಗುತ್ತಿದ್ದು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು - ಜೇ.ಬಿ ರಾಮಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ

ಸಂಪೂರ್ಣ ಶಿಥಿಲ

ಶಾಲೆಯಲ್ಲಿ 15 ಕೊಠಡಿಗಳಿವೆ. ಇದರಲ್ಲಿ ಎಲ್ಲ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿವೆ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 710 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಮಳೆ ಬಂದರೆ ಕಷ್ಟ ಹೇಳತೀರದು. ಶೀಘ್ರ ಶಿಥಿಲಗೊಂಡಿರುವ ಕೊಠಡಿಗಳನ್ನು ಸರ್ಕಾರ ನಿರ್ಮಿಸಬೇಕು - ರಾಘವೇಂದ್ರ ಎಸ್‌ಡಿಎಂಸಿ ಅಧ್ಯಕ್ಷ ಕರ್ನಾಟಕ ಪಬ್ಲಿಕ್ ಶಾಲೆ

ಹೊಸ ಕೊಠಡಿ ನಿರ್ಮಿಸಿ

ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿಗಳ ಸಮಸ್ಯೆ ಎದುರಿಸುತ್ತಿದೆ. ಸರ್ಕಾರ ಜನಪ್ರತಿನಿಧಿಗಳು ಈ ಶಾಲೆ ಬಗ್ಗೆ ಕಾಳಜಿ ವಹಿಸಿ ಹೊಸ ಕೊಠಡಿಗಳನ್ನು ನಿರ್ಮಿಸುವುದಕ್ಕೆ ಮುಂದಾಗಬೇಕು - ನಾಗರಾಜು ಸಾಮಾಜಿಕ ಕಾರ್ಯಕರ್ತ ಹಾರೋಹಳ್ಳಿ

ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ
ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ
ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಚಾವಣಿ ಸ್ಥಿತಿ
ಹಾರೋಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಚಾವಣಿ ಸ್ಥಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT