ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ. ಬಿಡುಗಡೆ ಮಾಡಿ: ಸಿಪಿವೈಗೆ ಕುಮಾರಸ್ವಾಮಿ ಸವಾಲು

ಡಿಎಚ್‌ಒ ಕಚೇರಿ ನೂತನ ಕಟ್ಟದ ಉದ್ಘಾಟನೆ ಮಾಡಿದ ಕುಮಾರಸ್ವಾಮಿ
Last Updated 2 ಮಾರ್ಚ್ 2021, 15:08 IST
ಅಕ್ಷರ ಗಾತ್ರ

ರಾಮನಗರ: ‘ಯೋಗೇಶ್ವರ್ ಬಳಿ ಯಾವುದೇ ಸಿ.ಡಿ. ಇದ್ದಲ್ಲಿ ಅದನ್ನು ಅವರು ನಾಳೆಯೇ ಬಿಡುಗಡೆ ಮಾಡಲಿ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ₨90 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಕಟ್ಟಡವನ್ನು ಉದ್ಘಾಟಿಸಿದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ‘ನನ್ನ ಸಿ.ಡಿ. ಬಿಡುಗಡೆ ಮಾಡಲು ಸೂಕ್ತ ಸಂದರ್ಭಕ್ಕಾಗಿ ಕಾಯುವುದು ಬೇಡ. ಅದೆಲ್ಲವನ್ನು ಎದುರಿಸುವ ಶಕ್ತಿಯನ್ನು ರಾಮನಗರದ ಜನರು ನೀಡಿದ್ದಾರೆ’ ಎಂದರು.

‘ಚನ್ನಪಟ್ಟಣ ಮಾತ್ರವಲ್ಲ ರಾಜ್ಯದ ಯಾವುದೇ ಮೂಲೆಯಲ್ಲಾದರೂ ಯೋಗೇಶ್ವರ್ ಕಣಕ್ಕೆ ಇಳಿಯಲಿ. ಅವರನ್ನು ಎದುರಿಸಲು ನಾನಲ್ಲ, ನನ್ನ ಕಾರ್ಯಕರ್ತರೇ ಸಾಕು’ ಎಂದರು.

‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ನಾನು ಕೇವಲ ನಾಮಪತ್ರ ಸಲ್ಲಿಸಿ ಹೋಗಿದ್ದೆ. ಒಂದು ದಿನವೂ ಪ್ರಚಾರ ಮಾಡಲಿಲ್ಲ. ನನ್ನ ಕಾರ್ಯಕರ್ತರೇ ಚುನಾವಣೆ ನಡೆಸಿದರು. ಇದನ್ನು ಯೋಗೇಶ್ವರ್ ಬಹುಶಃ ಮರೆತಿರಬೇಕು’ ಎಂದು ಟೀಕಿಸಿದರು.

‘ಯೋಗೇಶ್ವರ್ ಬಗ್ಗೆ ಚರ್ಚೆ ನಡೆಸುವುದೇ ಅನವಶ್ಯಕ. ಪದೇ ಪದೇ ಚರ್ಚಿಸಿ ಅವರ ಮಟ್ಟಕ್ಕೆ ಇಳಿಯಲು ನನಗೆ ಇಷ್ಟವಿಲ್ಲ. ರಾಜಕಾರಣ ಮಾಡುವ ಸಂದರ್ಭದಲ್ಲಿ ರಾಜಕಾರಣ ಮಾಡುತ್ತೇನೆ. ಅವರಿಗೆ ಇರುವ ಕೆಲಸ ನೋಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.

ಮೈಸೂರು ಮಹಾನಗರ ಪಾಲಿಕೆ ಮೇಯರ್ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಸಾ.ರಾ. ಮಹೇಶ್ ಎಲ್ಲದಕ್ಕೂ ಉತ್ತರ ನೀಡಿದ್ದಾರೆ. ಕಾಂಗ್ರೆಸ್‌ನೊಳಗೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳಿಗೆ ನಾನು ಉತ್ತರ ಕೊಡುವುದು ಸರಿಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೃಷಿ ಸಚಿವ ಬಿ.ಪಿ.ಪಾಟೀಲ್ ತಮ್ಮ ಮನೆಗೆ ಸರ್ಕಾರಿ ಆಸ್ಪತ್ರೆ ವೈದ್ಯರನ್ನು ಕರೆಯಿಸಿಕೊಂಡು ಕೋವಿಡ್ ಲಸಿಕೆ ಪಡೆದ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ‘ಈ ಸರ್ಕಾರದಲ್ಲಿ ಯಾರು ಏನ್ ಬೇಕಾದರೂ ಮಾಡಬಹುದು’ ಎಂದು ಟೀಕಿಸಿದರು.

ಶಾಸಕಿ ಅನಿತಾ ಕುಮಾರಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿರಂಜನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ತಾಲೂಕು ಪಂಚಾಯಿತಿ ಸದಸ್ಯ ಲಕ್ಷ್ಮೀಕಾಂತ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT