ಶುಕ್ರವಾರ, ಏಪ್ರಿಲ್ 3, 2020
19 °C

ಪಾಕಿಸ್ತಾನ ಪರ ಘೋಷಣೆ ದೇಶದ್ರೋಹದ ಕೆಲಸ: ಎಚ್.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

HD Kumaraswamy

ರಾಮನಗರ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಅಮೂಲ್ಯ ಎಂಬ ಯುವತಿ  ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿರುವುದು ಖಂಡನೀಯ. ಇಂತಹ ದೇಶದ್ರೋಹಿಗಳ ಬಗ್ಗೆ  ಸಂಘಟಕರು ಎಚ್ಚರದಿಂದ ಇರಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ರಾಮನಗರದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭಾರತೀಯರಾಗಿ ನಮ್ಮ ದೇಶಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ. ಆಕೆ ಉದ್ದೇಶಪೂರ್ವಕವಾಗಿ ಹೀಗೆ ಮಾಡಿದ್ದಾಳೋ ಇಲ್ಲ ಪ್ರಚಾರಕ್ಕಾಗಿ ಮಾಡಿದ್ದಾಳೋ, ಆಕೆಗೆ ಈ ಬಗ್ಗೆ ತಿಳಿವಳಿಕೆ ಇದೆಯೋ ಇಲ್ಲವೋ ಗೊತ್ತಿಲ್ಲ. ಇಂತಹ ದೇಶದ್ರೋಹದ ಕೆಲಸ ಮಾಡುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಯುವತಿ

ನಮ್ಮ ಪಕ್ಷದ ಕಾರ್ಯಕರ್ತರಾದ ಇಮ್ರಾನ್ ಸಹ ಕಾರ್ಯಕ್ರಮದ ಸಂಘಟನೆ ಹೊಣೆ ಹೊತ್ತಿದ್ದರು. ಯುವತಿ ಘೋಷಣೆ ಕೂಗಿದ ಕೂಡಲೇ ಆಕೆಯ ಮೈಕ್ ಕಸಿದುಕೊಂಡಿದ್ದಾರೆ. ಹೀಗಾಗಿ ಸಂಘಟಕರಿಂದ ಆ ರೀತಿಯ ಪ್ರಯತ್ನ ಆಗಿಲ್ಲ ಎಂಬುದು ಸ್ಪಷ್ಟವಾಗಿದೆ. ಮೊದಲು ನಾನು ಭಾರತೀಯ ಎಂಬ ಭಾವನೆ ಇದ್ದಾಗ ಮಾತ್ರ ಹೋರಾಟಕ್ಕೆ ಇತರರು ಕೈಜೋಡಿಸುತ್ತಾರೆ. ಈ ರೀತಿಯ ಅಪಪ್ರಚಾರ ಯಾರಿಗೂ ಬೇಡ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ ಈ ರೀತಿಯ ಪ್ರಯತ್ನಗಳಿಗೆ ಹೆಚ್ಚು ಪ್ರಚಾರ ಮಾಡುವ ಮೂಲಕ ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಹೊರಟಿದೆ. ದೇಶಭಕ್ತಿಯ ಬಗ್ಗೆ ಬಿಜೆಪಿಯಿಂದ ಪಾಠ ಕಲಿಯಬೇಕಿಲ್ಲ. ಹೋರಾಟಗಾರರು ತ್ರಿವರ್ಣ ಧ್ವಜ ಹಿಡಿದು ಹೋರಾಟ ನಡೆಸಿದ್ದಾರೆಯೇ ಹೊರತು ಪಾಕಿಸ್ತಾನದ ಧ್ವಜವನ್ನಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಹಾರಿದ್ದ ರಾಷ್ಟ್ರಧ್ವಜಕ್ಕಿಂತ ಹತ್ತು ಪಟ್ಟು ಧ್ವಜಗಳು ಇಂದು ಹೋರಾಟದ ಹೆಸರಿನಲ್ಲಿ ಹಾರುತ್ತಿವೆ. ಸಂವಿಧಾನ ಕೊಟ್ಟ ಹಕ್ಕನ್ನು, ಸಂವಿಧಾನದ ಆಶಯಗಳು ಮತ್ತು ದೇಶವನ್ನು ಯಾರಿಂದಲೂ ಛಿದ್ರಗೊಳಿಸಲು ಆಗದು. ಯಾರೋ ಒಬ್ಬರು ತಿಳಿಗೇಡಿ ಘೋಷಣೆ ಕೂಗಿದ ಮಾತ್ರಕ್ಕೆ ಅದರ ಗಮನವನ್ನು ಬೇರೆ ಕಡೆಗೆ ಸೆಳೆಯುವ ಅವಶ್ಯಕತೆ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು