ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ: ರಾಜೀನಾಮೆಗೂ ಮುನ್ನ ಎಚ್‌ಡಿಕೆ ಅಭಿವೃದ್ಧಿ ಪರ್ವ

ಇಂದು ₹19 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ; 24 ಕಾಮಗಾರಿಗಳ ಉದ್ಘಾಟನೆ
Published 15 ಜೂನ್ 2024, 4:56 IST
Last Updated 15 ಜೂನ್ 2024, 4:56 IST
ಅಕ್ಷರ ಗಾತ್ರ

ಚನ್ನಪಟ್ಟಣ: ಕೇಂದ್ರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಎನ್‌ಡಿಎ ಮೈತ್ರಿಕೂಟದ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರು ಹಾಗೂ ಚನ್ನಪಟ್ಟಣದ ಶಾಸಕರೂ ಆಗಿರುವ ಎಚ್.ಡಿ. ಕುಮಾರಸ್ವಾಮಿ ಅವರು, ಸಚಿವರಾದ ಬಳಿಕ ಮೊದಲ ಸಲ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಪಟ್ಟಣಕ್ಕೆ ಶನಿವಾರ ಭೇಟಿ ನೀಡಲಿರುವ ಎಚ್‌ಡಿಕೆ ಸ್ವಾಗತಕ್ಕೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಜ್ಜಾಗಿದ್ದಾರೆ.

ಮಂಡ್ಯದಿಂದ ಗೆದ್ದು ಸಂಸತ್ತು ಪ್ರವೇಶಿಸಿ ಸಚಿವರಾಗಿರುವ ಎಚ್‌ಡಿಕೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಮುನ್ನ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡಲು ಮುಂದಾಗಿದ್ದಾರೆ. ಪಟ್ಟಣದ ಕೆ.ಎಚ್.ಬಿ. ಬಡಾವಣೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸುಮಾರು ₹19 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಜೊತೆಗೆ ಸುಮಾರು ₹132 ಕೋಟಿ ಮೊತ್ತದ 24 ಕಾಮಗಾರಿಗಳ ಉದ್ಘಾಟನೆ ಮಾಡಲಿದ್ದಾರೆ.

ಕುಮಾರಸ್ವಾಮಿ ಅವರು ಶಾಸಕರಾಗಿ ಆಯ್ಕೆಯಾಗಿ ವರ್ಷವಾದ ಬಳಿಕ, ಇಷ್ಟೊಂದು ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನಡೆಯುತ್ತಿರುವುದು ಇದೇ ಮೊದಲು. ಎಚ್‌ಡಿಕೆ ಅವರನ್ನು ಮೈತ್ರಿ ಪಕ್ಷಗಳ ಕಾರ್ಯಕರ್ತರ ಅಭಿನಂದಿಸುವ ಕಾರ್ಯಕ್ಕೂ ಕಾರ್ಯಕ್ರಮದ ವೇದಿಕೆ ಸಾಕ್ಷಿಯಾಗಲಿದೆ.

ಉದ್ಘಾಟನೆಯಾಗಲಿರುವ ಕಾಮಗಾರಿ:

ಚನ್ನಪಟ್ಟಣದ ವಿದ್ಯುತ್ ಕೇಂದ್ರ ಹಾಗೂ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ, ಅಕ್ಕೂರು ಹೊಸಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಿಬ್ಬಂದಿ ವಸತಿ ಗೃಹ, ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿ ಹಾಗೂ ಮೂಲಸೌಕರ್ಯ ವಿತರಣೆ, ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದ ಉದ್ಘಾಟನೆ.

ಕೋಡಂಬಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಅರಳಾಳುಸಂದ್ರ ಕರ್ನಾಟಕ ಪಬ್ಲಿಕ್ ಶಾಲೆ ಕಟ್ಟಡ, ಮಾಕಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ, ಪಟ್ಲು ಗ್ರಾಮದ ಉಪ ಆರೋಗ್ಯ ಕೇಂದ್ರ, ವಿವಿಧೆಡೆ ನಿರ್ಮಾಣವಾಗಿರುವ ಅಂಗನವಾಡಿ ಕೇಂದ್ರಗಳು, ವಿವಿಧ ಶಾಲೆಗಳಲ್ಲಿ ನಿರ್ಮಾಣವಾಗಿರುವ ನೂತನ ಕೊಠಡಿಗಳ ಉದ್ಘಾಟನೆ.

ಯಾವ ಕಾಮಗಾರಿಗೆ ಶಂಕುಸ್ಥಾಪನೆ:

ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಹಲಗೂರು ರಸ್ತೆಯಿಂದ ಯಲಿಯೂರು ಎಲೆತೋಟದಹಳ್ಳಿ ಮಾರ್ಗವಾಗಿ ನಿಡಗೋಡಿವರೆಗೆ ರಸ್ತೆ ಅಭಿವೃದ್ಧಿ, ಶೆಟ್ಟಿಹಳ್ಳಿಯಿಂದ ಮುದುಗೆರೆ– ಆಣಿಗೆರೆ ಮಾರ್ಗವಾಗಿ ಹುಲುವಾಡಿ ಸೇರುವ ರಸ್ತೆ ಅಭಿವೃದ್ಧಿ, ಹಲಗೂರು ರಾಜ್ಯ ಹೆದ್ದಾರಿಯಿಂದ ಕೋಡಂಬಹಳ್ಳಿ ಹುಣಸನಹಳ್ಳಿ ಮಾರ್ಗವಾಗಿ ಮೆಂಗಳ್ಳಿ, ಮದ್ದೂರು ಗಡಿ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ.

ಮೆಣಸಿಗನಹಳ್ಳಿಯಿಂದ ಭೂಹಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ, ಕಾಡಂಕನಹಳ್ಳಿ ಸಾಮಂದಿಪುರ ರಸ್ತೆಯಿಂದ ಗುವ್ವಾಪುರ, ಸಿದ್ದಾಪುರ, ಜಗದಾಪುರ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ, ಗರಕಹಳ್ಳಿ– ಇಗ್ಗಲೂರು ಮುಖ್ಯರಸ್ತೆ ಅಭಿವೃದ್ಧಿ, ಬಿ.ವಿ. ಹಳ್ಳಿ ಅಳ್ಳಿಮಾರನಹಳ್ಳಿ ರಸ್ತೆ ಅಭಿವೃದ್ಧಿ, ಮತ್ತೀಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬದ ಆಂಜನೇಯಸ್ವಾಮಿ ದೇವಸ್ಥಾನದ ರಸ್ತೆ, ದೊಡ್ಡಮಳೂರು ಗ್ರಾಮದಿಂದ ಹೊಟ್ಟಿಗನಹೊಸಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ.

ಬೆಳಿಗ್ಗೆ ಚಾಮುಂಡೇಶ್ವರಿ ದರ್ಶನ

ಚನ್ನಪಟ್ಟಣಕ್ಕೆ ಹೊರಡುವುದಕ್ಕೆ ಮುಂಚೆ ಕುಮಾರಸ್ವಾಮಿ ಅವರು ಮಾರ್ಗಮಧ್ಯೆ ತಮ್ಮ ಕರ್ಮಭೂಮಿಯಾದ ರಾಮನಗರದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬೆಳಿಗ್ಗೆ 11 ಗಂಟೆಗೆ ಭೇಟಿ ನೀಡಲಿದ್ದಾರೆ. ದೇವಿಯ ದರ್ಶನ ಪಡೆಯುವ ಎಚ್‌ಡಿಕೆ ನಂತರ ಪೂಜೆ ಸಲ್ಲಿಸಿ ಚನ್ನಪಟ್ಟಣಕ್ಕೆ ತೆರಳಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಅದ್ಧೂರಿ ಅಭಿನಂದನಾ ಕಾರ್ಯಕ್ರಮಕ್ಕೆ ಸಿದ್ಧತೆ ‘ಕೇಂದ್ರ ಸಚಿವರಾದ ಬಳಿಕ ತವರು ಕ್ಷೇತ್ರಕ್ಕೆ ಮೊದಲ ಸಲ ಭೇಟಿ ನೀಡುತ್ತಿರುವ ಕುಮಾರಸ್ವಾಮಿ ಅವರಿಗೆ ಮೈತ್ರಿ ಪಕ್ಷಗಳಿಂದ ಅದ್ಧೂರಿಯಾಗಿ ಅಭಿನಂದನಾ ಸಮಾರಂಭ ಆಯೋಜಿಸಲು ಯೋಜನೆ ರೂಪಿಸಲಾಗಿತ್ತು. ಆದರೆ ಏಕಾಏಕಿಯಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮತ್ತು ಉದ್ಘಾಟನಾ ಸಮಾರಂಭವನ್ನು ನಿಗದಿಯಾಗಿದ್ದರಿಂದ ಅಭಿನಂದನಾ ಸಮಾರಂಭವನ್ನು ಮುಂದೂಡಲಾಗಿದೆ. ಎರಡೂ ಪಕ್ಷಗಳ ಜನಪ್ರತಿನಿಧಿಗಳು ಮತ್ತು ಮುಖಂಡರು ಸೇರಿ ಸದ್ಯದಲ್ಲೇ ಅಭಿನಂದನಾ ಸಮಾರಂಭದ ದಿನಾಂಕ ನಿಗದಿಪಡಿಸುತ್ತೇವೆ. ಆ ಸಮಾರಂಭವು ಅಭಿನಂದನೆ ಜೊತೆಗೆ ಮುಂಬರುವ ಚನ್ನಪಟ್ಟಣ ಉಪ ಚುನಾವಣೆಯ ಚಾಲನೆಯೂ ಆಗಿರಲಿದೆ’ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.

ಅದ್ಧೂರಿ ಅಭಿನಂದನಾ ಕಾರ್ಯಕ್ರಮಕ್ಕೆ ಸಿದ್ಧತೆ
‘ಕೇಂದ್ರ ಸಚಿವರಾದ ಬಳಿಕ ತವರು ಕ್ಷೇತ್ರಕ್ಕೆ ಮೊದಲ ಸಲ ಭೇಟಿ ನೀಡುತ್ತಿರುವ ಕುಮಾರಸ್ವಾಮಿ ಅವರಿಗೆ ಮೈತ್ರಿ ಪಕ್ಷಗಳಿಂದ ಅದ್ಧೂರಿಯಾಗಿ ಅಭಿನಂದನಾ ಸಮಾರಂಭ ಆಯೋಜಿಸಲು ಯೋಜನೆ ರೂಪಿಸಲಾಗಿತ್ತು. ಆದರೆ, ಏಕಾಏಕಿಯಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮತ್ತು ಉದ್ಘಾಟನಾ ಸಮಾರಂಭವನ್ನು ನಿಗದಿಯಾಗಿದ್ದರಿಂದ ಅಭಿನಂದನಾ ಸಮಾರಂಭವನ್ನು ಮುಂದೂಡಲಾಗಿದೆ. ಎರಡೂ ಪಕ್ಷಗಳ ಜನಪ್ರತಿನಿಧಿಗಳು ಮತ್ತು ಮುಖಂಡರು ಸೇರಿ ಸದ್ಯದಲ್ಲೇ ಅಭಿನಂದನಾ ಸಮಾರಂಭದ ದಿನಾಂಕ ನಿಗದಿಪಡಿಸುತ್ತೇವೆ. ಆ ಸಮಾರಂಭವು ಅಭಿನಂದನೆ ಜೊತೆಗೆ, ಮುಂಬರುವ ಚನ್ನಪಟ್ಟಣ ಉಪ ಚುನಾವಣೆಯ ಚಾಲನೆಯೂ ಆಗಿರಲಿದೆ’ ಎಂದು ಜೆಡಿಎಸ್ ಮುಖಂಡರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT