ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಬಿದ ಹೇಮೆ: ಹರಿಯದ ಜಲಧಾರೆ!

–ಸುಧೀಂದ್ರ ಸಿ.ಕೆ.
Published 11 ಆಗಸ್ಟ್ 2024, 4:29 IST
Last Updated 11 ಆಗಸ್ಟ್ 2024, 4:29 IST
ಅಕ್ಷರ ಗಾತ್ರ

ಮಾಗಡಿ: ಉತ್ತಮ ಮಳೆಯಿಂದಾಗಿ ಹೇಮಾವತಿ ಜಲಾಶಯ ತುಂಬಿದರೂ ಮಾಗಡಿ ತಾಲ್ಲೂಕಿಗೆ ಮೀಸಲಾದ ಮುಕ್ಕಾಲು ಟಿಎಂಸಿ ನೀರು ಇನ್ನೂ ಶ್ರೀರಂಗ ಏತ ನೀರಾವರಿ ಪಂಪ್ ಹೌಸ್ ತಲುಪಿಲ್ಲ.

ಹೇಮಾವತಿ ಜಲಾಶಯ ತುಂಬಿ ಕಾಲುವೆಯ ಮೂಲಕ ನೀರು ಹರಿಸಲಾಗುತ್ತಿದೆ. ಆದರೆ, ಕೆನಾಲ್ ಕೊನೆಯ ಭಾಗವಾಗಿರುವ ಕಲ್ಲನಾಯಕ
ನಹಳ್ಳಿ ಹಿರೇಕೆರೆವರೆಗೆ ನೀರು ಹರಿದು ಬರುತ್ತಿಲ್ಲ.

ಶ್ರೀರಂಗ ಏತ ನೀರಾವರಿ ಮೂಲಕ ಮಾಗಡಿ ಮತ್ತು ಕುಣಿಗಲ್‌ ತಾಲ್ಲೂಕಿನ 83 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಭಾಗವಾಗಿ ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿ ಆರಂಭಿಸದ ಕಾರಣ ತಾಲ್ಲೂಕಿನ ಕೆರೆಗಳ ಒಡಲು ತುಂಬಬೇಕಿದ್ದ ನೀರು ಹರಿದು ಬಂದಿಲ್ಲ.

ಸತತ ಎರಡು ತಿಂಗಳು 170 ಕ್ಯೂಸೆಕ್‌ ನೀರು ಹರಿದರೆ ಮಾತ್ರ ಮಾಗಡಿ ಮತ್ತು ಕುಣಿಗಲ್‌ ಕೆರೆಗಳು ತುಂಬುತ್ತವೆ. ಆದರೆ ಈಗ ಕೆನಾಲ್‌ ಮೂಲಕ ಹರಿದು ಬರುತ್ತಿರುವ ಕೇವಲ 30 ಕ್ಯೂಸೆಕ್‌ ನೀರಿನಿಂದ 83 ಕೆರೆಗಳಿಗೆ ನೀರು ಪಂಪ್ ಮಾಡಲು ಸಾಧ್ಯ ಇಲ್ಲ.

ಶ್ರೀರಂಗ ಏತ ನೀರಾವರಿ ಯೋಜನೆಯ ಪಂಪ್‌ಹೌಸ್‌ 195 ಕಿ.ಮೀ.ದೂರದಲ್ಲಿದ್ದು ಕಾಲುವೆ ಮೂಲಕ ಮಾಗಡಿ ತಾಲ್ಲೂಕಿಗೆ ಮಂಜೂರಾಗಿರುವ ಮುಕ್ಕಾಲು ಟಿಎಂಸಿ ನೀರು ಇಲ್ಲಿಗೆ ತಲುಪುತ್ತಿಲ್ಲ.

ಕುಣಿಗಲ್ ಕೆರೆ ಈಗ ಅರ್ಧದಷ್ಟು ತುಂಬಿದೆ. ಕುಣಿಗಲ್ ಕೆರೆ ತುಂಬಿದ ನಂತರ ಮಾಗಡಿ ಪಂಪ್‌ ಹೌಸ್‌ಗೆ ನೀರು ಹರಿದು ಬರಬೇಕು. ಎಕ್ಸ್‌ಪ್ರೆಸ್ ಕೆನಾಲ್ ನಿರ್ಮಾಣ ಮಾಡದಿದ್ದರೆ ಹೇಮಾವತಿ ನೀರು ತುಂಬಿ ಹರಿದರೂ ವ್ಯರ್ಥ. ಮಾಗಡಿ ತಾಲ್ಲೂಕಿನ ಕೆರೆ ತುಂಬಿಸುವಷ್ಟು ನೀರು ಕಾಲುವೆಯಲ್ಲಿ ಹರಿದು ಬರುವುದಿಲ್ಲ. 

ಹೇಮಾವತಿ ಕಾಲುವೆಯ 33 ಕಿ. ಮೀ ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿಗೆ ಸರ್ಕಾರ ಒಂದು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸುವ ವೇಳೆ ತುಮಕೂರಿನ ಜನಪ್ರತಿನಿಧಿಗಳು ವಿರೋಧ
ವ್ಯಕ್ತಪಡಿಸಿದ್ದಾರೆ.

ಎಕ್ಸ್‌ಪ್ರೆಸ್‌ ಕೆನಾಲ್ ಕಾಮಗಾರಿಗೆ ತುಮಕೂರು ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಮಾಗಡಿ ತಾಲ್ಲೂಕಿಗೆ ಈ ಯೋಜನೆ ಅಗತ್ಯವನ್ನು ಸರ್ಕಾರ ನೇಮಕ ಮಾಡಿರುವ ತಾಂತ್ರಿಕ ಸಮಿತಿಗೆ ಮನವರಿಕೆ ಮಾಡಬೇಕು ಎನ್ನುತ್ತಾರೆ ತಾಲ್ಲೂಕಿನ ರೈತರು ಮತ್ತು ನೀರಾವರಿ ಹೋರಾಟಗಾರರು.

ಎಕ್ಸ್‌ಪ್ರೆಸ್‌ ಕೆನಾಲ್ ಅನಿವಾರ್ಯತೆ ಮತ್ತು ವಾಸ್ತವ ಚಿತ್ರಣ ತೆರೆದಿಡಲು ಜನಪ್ರತಿನಿಧಿಗಳು ಮಾತನಾಡಲು ಇದಕ್ಕಿಂತ ಸರಿಯಾದ ಸಮಯ ಸಿಗಲಾರದು. ಸ್ಥಗಿತಗೊಂಡಿರುವ ಕಾಮಗಾರಿ ಆರಂಭಿಸಲು ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮೇಲೆ ತುರ್ತಾಗಿ ಒತ್ತಡ ಹೇರಬೇಕು ಎನ್ನುವುದು ರೈತ ಸಂಘಟನೆಗಳ ಒತ್ತಾಸೆ.

3 ಕಿ.ಮೀ ಕಾಮಗಾರಿ ಬಾಕಿ!

83 ಕೆರೆಗಳಿಗೆ ನೀರು ತುಂಬಿಸಲು ಇನ್ನೂ 250 ಕಿ.ಮೀ. ಲಿಂಕ್ ಪೈಪ್ ಅಳವಡಿಕೆ ಕೆಲಸ ಬಾಕಿ ಉಳಿದಿದ್ದು ಪಂಪ್ ಹೌಸ್ ಬಳಿ ಶೇ. 80ರಷ್ಟು ಕಾಮಗಾರಿ ಪೂರ್ಣವಾಗಿದೆ. ಶ್ರೀರಂಗ ಏತ ನೀರಾವರಿ ಕಾಮಗಾರಿಯ ಪಂಪ್ ಹೌಸ್ ಬಳಿಯಿಂದ ಒಟ್ಟು 37 ಕಿ.ಮೀ. ಕಾಮಗಾರಿಯಲ್ಲಿ ಈಗ 34 ಕಿ.ಮೀ. ಪೈಪ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಇನ್ನುಳಿದ ಮೂರು ಕಿಲೋ ಮೀಟರ್ ಪೈಪ್ ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡರೆ ಮಾತ್ರ ಕಲ್ಲನಾಯಕನಹಳ್ಳಿ ಹಿರೇಕೆರೆ ತುಂಬಿದರೆ ರೈಸಿಂಗ್ ಮೈನ್ ಮೂಲಕ ಕೆಲವು ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಬಹುದು.


ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಅಗತ್ಯ

ಶ್ರೀರಂಗ ಏತ ನೀರಾವರಿ ಯೋಜನೆ ಮೂಲಕ 83 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಅಗತ್ಯವಾಗಿದೆ. ಹೇಮಾವತಿ ಜಲಾಶಯ ತುಂಬಿದರು ಕೂಡ ಕಾಲುವೆ ಮೂಲಕ ಶ್ರೀರಂಗ ಏತ ನೀರಾವರಿ ಪಂಪ್ ಹೌಸ್ ಬಳಿಗೆ ಅಗತ್ಯವಾಗಿ ಬೇಕಾಗಿರುವ ನೀರು ಹರಿಯುತ್ತಿಲ್ಲ. 70 ಕಿಲೋ ಮೀಟರ್ ಬಳಿ 1600 ಕ್ಯೂಸೆಕ್ಸ್ ನೀರು ಬರುತ್ತಿದೆ. ಅಲ್ಲಿಂದ ಕೆನಾಲ್ ಮೂಲಕ ನಮಗೆ ಅಗತ್ಯವಾಗಿ ಬೇಕಾಗಿರುವ 170 ಕ್ಯೂಸೆಕ್ ನೀರು ಸತತ ಎರಡು ತಿಂಗಳು ಹರಿದಾಗ ಮಾತ್ರ ನಮಗೆ ಸಿಗಬೇಕಾದ ಮೂರು ಟಿಎಂಸಿ ನೀರು ಲಭ್ಯವಾಗುತ್ತದೆ. ಇಲ್ಲವಾದರೆ ಕೆನಾಲ್‌ ಮೂಲಕ ನಮ್ಮ ಪಾಲಿನ ನೀರು ಸಿಗುವುದಿಲ್ಲ
––ವೆಂಕಟೇಶ್, ತಾ.ಪಂ.ಮಾಜಿ ಸದಸ್ಯರು

ಕೂಡಲೇ ಕಾರ್ಯಪ್ರವೃತ್ತರಾಗಬೇಕು

ಮಳೆಗಾಲದಲ್ಲಿ ಕೆರೆಗಳಿಗೆ ನೀರು ತುಂಬಿಸಲು ನಮ್ಮ ಪಾಲಿನ ಹೇಮಾವತಿ ನೀರು ಹರಿದು ಬರುತ್ತಿಲ್ಲ. ಇದನ್ನು ಜನಪ್ರತಿನಿಧಿಗಳು ಗಮನಿಸಿ ಕೂಡಲೇ ಜಲಸಂಪನ್ಮೂಲ ಸಚಿವರ ಬಳಿ ನಿಯೋಗದಲ್ಲಿ ತೆರಳಿ ವಾಸ್ತವ ಸ್ಥಿತಿಯನ್ನು ಗಮನಕ್ಕೆ ತರಬೇಕು. ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಆರಂಭಿಸಲು ಒಪ್ಪಿಗೆ ಪಡೆದರೆ ಮುಂದಿನ ವರ್ಷವಾದರೂ ಮಾಗಡಿ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಕನಸು ನನಸಾಗಲಿದೆ.
ಹೊಸಪಾಳ್ಯ ಲೋಕೇಶ್, ರೈತ ಸಂಘದ ತಾಲ್ಲೂಕು ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT