ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿತ ಶತ್ರುಗಳಿಲ್ಲ, ಸೋಲಿಗೆ ನಾನೇ ಹೊಣೆ: ಡಿ.ಕೆ ಸುರೇಶ್

Published 10 ಜೂನ್ 2024, 20:08 IST
Last Updated 10 ಜೂನ್ 2024, 20:08 IST
ಅಕ್ಷರ ಗಾತ್ರ

ರಾಮನಗರ: ‘ನನಗೆ ಹಿತಶತ್ರುಗಳಿಲ್ಲ, ನನಗೆ ನಾನೇ ಶತ್ರು. ಚುನಾವಣೆಯ ಸೋಲಿಗೆ ನಾನು ಬೇರೆಯವರನ್ನು ದೂರಲಾಗಿದೆ. ಇದು ನನ್ನ ವೈಯಕ್ತಿಕ ಸೋಲಾಗಿದ್ದು, ಅದಕ್ಕೆ ನಾನೇ ಹೊಣೆ. ಜನರ ತೀರ್ಮಾನವನ್ನು ಸ್ವಾಗತಿಸಿ, ಸಾಮಾನ್ಯ ಕಾರ್ಯಕರ್ತನಂತೆ ಪಕ್ಷದ ಕೆಲಸ ಮಾಡುತ್ತೇನೆ’ ಎಂದು ಲೋಕಸಭಾ ಚುನಾವಣೆಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹೇಳಿದರು.

‘ಮಂಜುನಾಥ್ ಗೆಲುವು ಬಿಜೆಪಿ-ಜೆಡಿಎಸ್‌ ಗೆಲುವಲ್ಲ. ಬದಲಿಗೆ ಜಾತಿ, ಧರ್ಮ, ಭಾವನಾತ್ಮಕ ವಿಷಯ ಹಾಗೂ ಅಸೂಯೆಯ ಗೆಲುವು. ನಮ್ಮ ಗ್ಯಾರಂಟಿ ಯೋಜನೆಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಿದವು. ರಾಜಕಾರಣದಲ್ಲಿ ಜಾತಿ ಇಷ್ಟೊಂದು ಮಹತ್ವದ ಪಾತ್ರ ವಹಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ’ ಎಂದು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಾಜಕಾರಣದ ಬಗ್ಗೆ ಆಸಕ್ತಿಯೇ ಇಲ್ಲದ ನನ್ನ ಮೇಲೆ ಒತ್ತಡ ಹಾಕಿ 2013ರ ಉಪ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದರು. ನಂತರ ಸತತವಾಗಿ ಎರಡು ಸಲ ಗೆದ್ದು, 10 ವರ್ಷ 8 ತಿಂಗಳು ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಎಲ್ಲಾ ಜಾತಿ ಮತ್ತು ಧರ್ಮದವರ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ’ ಎಂದರು.

‘ಚುನಾವಣೆಯಲ್ಲಿ ನಾನು ಬೇರೆಯವರ ಹೆಸರಿನಲ್ಲಿ ಮತ ಕೇಳದೆ, ನಾನು ಮಾಡಿದ ಕೆಲಸನ್ನು ಜನರ ಮುಂದಿಟ್ಟು ಮತ ಯಾಚಿಸಿದೆ. ಕನ್ನಡಿಗರಿಗೆ ಆಗುತ್ತಿದ್ದ ತೆರಿಗೆ ಅನ್ಯಾಯ ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಗಟ್ಟಿ ದನಿ ಎತ್ತಿ, ಟೀಕೆಗೂ ಒಳಗಾದೆ. ಆದರೂ ಮಾಡಿದ ಕೆಲಸಕ್ಕೆ ಜನ ಕೂಲಿ ಕೊಡಲಿಲ್ಲ. ರಾಜಕಾರಣದಲ್ಲಿ ಸೋಲು–ಗೆಲುವು ಸಹಜ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತವೆ. ಅದರ ಬಗ್ಗೆ ಅನುಮಾನ ಬೇಡ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಮೊದಲ ಸಲ ಸ್ಪರ್ಧಿಸಿದಾಗ ಜನ ಅಭಿವೃದ್ಧಿ ನಿರೀಕ್ಷೆ ಇಟ್ಟುಕೊಂಡು ನನ್ನನ್ನು ಗೆಲ್ಲಿಸಿದ್ದರು. ಈಗ ಡಾಕ್ಟರ್ ನನಗಿಂತ ಚನ್ನಾಗಿ ಕೆಲಸ ಮಾಡುತ್ತಾರೆಂಬ ನಂಬಿಕೆಯಿಂದ ಅವರನ್ನು ಗೆಲ್ಲಿಸಿದ್ದಾರೆ. ಚುನಾವಣೆಯುದ್ದಕ್ಕೂ ಮಾಧ್ಯಮದವರು ನನ್ನನ್ನು ಒಂದು ರೀತಿ ಬಿಂಬಿಸಿದರೆ, ಡಾಕ್ಟರ್ ಅವರನ್ನು ಬೇರೆ ರೀತಿ ಬಿಂಬಿಸಿದ್ದು ಸಹ ಸೋಲಿಗೆ ಕಾರಣವಾಯಿತು. ನೂತನ ಸಂಸದ ಡಾ. ಸಿ.ಎನ್. ಮಂಜುನಾಥ್, ಸಚಿವರಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ವಿ. ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸುವೆ’ ಎಂದು ಹೇಳಿದರು.

ವಿಧಾನ‌ ಪರಿಷತ್ ಸದಸ್ಯ ಎಸ್. ರವಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಗಂಗಾಧರ್, ಮಾಜಿ ಶಾಸಕ ಕೆ. ರಾಜು, ಬ್ಲಾಕ್ ಅಧ್ಯಕ್ಷರಾದ ವಿ.ಎಚ್. ರಾಜು, ಎ.ಬಿ. ಚೇತನ್‌ಕುಮಾರ್, ಅಶೋಕ್, ಜಿ.ಎನ್. ನಟರಾಜು, ಮುಖಂಡರಾದ ದೀಪಾ ಮುನಿರಾಜು, ಗುರುಪ್ರಸಾದ್, ಪುಟ್ಟರಾಜು, ಕೆ. ರಮೇಶ್, ಪಿ. ನಾಗರಾಜು, ಹರೀಶ್ ಕುಮಾರ್, ರಾಜಶೇಖರ್, ಸಿ.ಎನ್.ಆರ್. ವೆಂಕಟೇಶ್, ವಿಜಯಕುಮಾರಿ, ಅನಿಲ್ ಜೋಗಿಂದರ್, ಶ್ರೀನಿವಾಸ್, ವಸೀಂ, ಸಮದ್ ಹಾಗೂ ಇತರರು ಇದ್ದರು.

Quote - ಈ ಸೋಲು ಸುರೇಶ್ ಅವರದ್ದಲ್ಲ. ಬದಲಿಗೆ ನಮ್ಮಗಳ ಸೋಲು. ಅಭಿವೃದ್ಧಿಯ ಆಶಾಕಿರಣವಾಗಿದ್ದ ಅವರು ಜಿಲ್ಲೆಯಲ್ಲಿ ಹೊಸ ಬದಲಾವಣೆ ತಂದಿದ್ದರು. ಆದರೂ ಜನ ಅವರನ್ನು ಗೆಲ್ಲಿಸದಿರುವುದು ನೋವುಂಟು ಮಾಡಿದೆ ಎಚ್.ಎ. ಇಕ್ಬಾಲ್ ಹುಸೇನ್ ಶಾಸಕ

‘ಚನ್ನಪಟ್ಟಣದಿಂದ ಸ್ಪರ್ಧಿಸಲ್ಲ’

‘ಈಗಾಗಲೇ ಸೋತಿರುವ ನಾನು ಮುಂಬರುವ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಅಲ್ಲಿ ಹಲವರು ಸಮರ್ಥರಿದ್ದಾರೆ. ಅಭಿವೃದ್ಧಿ ರಾಜಕಾರಣ ಮಾಡುತ್ತಿದ್ದ ನನ್ನನ್ನು ಜನ ತಿರಸ್ಕರಿಸಿ ವಿಶ್ರಾಂತಿ ಕೊಟ್ಟಿದ್ದಾರೆ. ಹಾಗಾಗಿ ಎಲ್ಲೂ ಸ್ಪರ್ಧೆ ಮಾಡಲ್ಲ. ಸುರೇಶ್ ಸೋತಿದ್ದಾನೆ ಅವನ ಕೈಯಲ್ಲಿ ಏನೂ ಆಗಲ್ಲ ಅಂದುಕೊಳ್ಳುವುದು ಬೇಡ. ಸದಾ ನಮ್ಮವರೊಂದಿಗಿರುವೆ. ಅವರ ರಕ್ಷಣೆ ನನ್ನ ಜವಾಬ್ದಾರಿಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದರು.

ನೋವಾಗಿದ್ದರೆ ಕ್ಷಮೆ ಕೋರುವೆ

‘ಸಂಸದನಾಗಿದ್ದಾಗ ಅಭಿವೃದ್ಧಿ ಕಾರ್ಯಗಳ ನಿಮಿತ್ತ ಹಾಗೂ ಜನರ ಕೆಲಸಗಳಿಗಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೇನೆಯೇ ಹೊರತು ವೈಯಕ್ತಿಕವಾಗಿ ಯಾರನ್ನು ನಿಂದಿಸಿಲ್ಲ. ನನ್ನಿಂದ ಅಧಿಕಾರಿಗಳಿಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಇನ್ನು ಮುಂದೆ ಸಾಮಾನ್ಯ ಕಾರ್ಯಕರ್ತನಾಗಿ ರಾಜ್ಯ ಸರ್ಕಾರದ ನೆರವಿನೊಂದಿಗೆ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ’ ಎಂದು ಸುರೇಶ್ ಹೇಳಿದರು.

‘ಸೋಲಿನಿಂದ ವಿಚಲಿತರಾಗೋದು ಬೇಡ’

‘ನನ್ನ ಸೋಲಿನಿಂದ ಯಾರೂ ವಿಚಲಿತರಾಗುವುದು ಬೇಡ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದು ಜಿಲ್ಲೆಯಲ್ಲೂ ನಮ್ಮ ಶಾಸಕರೇ ಹೆಚ್ಚಾಗಿದ್ದಾರೆ. ಲೋಕಸಭಾ ಸ್ಥಳೀಯ ಹಾಗೂ ಸಹಕಾರಿ ಚುನಾವಣೆಗಳು ವಿಭಿನ್ನವಾಗಿರುತ್ತವೆ. ಸೋಲಿಗೆ ಎದೆಗುಂದದೆ ಮಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಈಗಿನಿಂದಲೇ ಸನ್ನದ್ಧರಾಗೋಣ’ ಎಂದು ಡಿ.ಕೆ. ಸುರೇಶ್ ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ನಗರದ ಹೊರವಲಯದಲ್ಲಿ ಹಮ್ಮಿಕೊಂಡಿದ್ದ ರಾಮನಗರ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ‘ನಿವೇಶನ ಹಂಚಿಕೆ ಕುಡಿಯುವ ನೀರು ಪೂರೈಕೆ ಯೋಜನೆ ಮಂಚನಬೆಲೆ ಜಲಾಶಯಕ್ಕೆ ನೀರು ತಂದಿದ್ದು ಅರ್ಕಾವತಿ ನದಿಗೆ ಚೆಕ್ ಡ್ಯಾಂ ನಿರ್ಮಾಣ ಸೇತುವೆ ನಿರ್ಮಾಣ ಕೆರೆಗಳಿಗೆ ನೀರು ತುಂಬಿಸಿದ್ದು ಸೇರಿದಂತೆ ಕ್ಷೇತ್ರದಲ್ಲಿ ಮೂಲಸೌಕರ್ಯಗಳನ್ನು ಕಲ್ಪಿಸಿದ್ದು ಜನರಿಗಾಗಿಯೇ ಹೊರತು ನನ್ನ ವೈಯಕ್ತಿಕ ಲಾಭಕ್ಕಲ್ಲ’ ಎಂದರು. ಮುಖಂಡರಾದ ಸಿ.ಎಂ. ಲಿಂಗಪ್ಪ‌ ಸಯ್ಯದ್ ಜಿಯಾವುಲ್ಲಾ ಕೆ. ಶೇಷಾದ್ರಿ ಶಶಿ ಮಾತನಾಡಿ ‘ಸುರೇಶ್ ಅವರು ಯಾರೂ ಮಾಡದ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜೀವ ಲೆಕ್ಕಿಸದೆ ಜನರಿಗೆ ನೆರವಾಗಿದ್ದಾರೆ. ಮೂಲಸೌಕರ್ಯ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಆದರೂ ಜನ ಅವರನ್ನು ತಿರಸ್ಕರಿಸಿದ್ದು ಯಾಕೆಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡುತ್ತಿದೆ. ಅವರ ಜೊತೆ ನಾವು ಸದಾ ಇರುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT