ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಹಾರ ಪದ್ಧತಿ ಬದಲಾದರೆ ಆರೋಗ್ಯ ವೃದ್ಧಿ

Last Updated 8 ನವೆಂಬರ್ 2021, 7:40 IST
ಅಕ್ಷರ ಗಾತ್ರ

ಕನಕಪುರ: ‘ಹಿಂದಿನ ಕಾಲದಲ್ಲಿ ತಮಗೆ ಇಷ್ಟಬಂದ ರೀತಿಯಲ್ಲಿ ಆಹಾರ ಸೇವನೆ ಮಾಡಿ ದಷ್ಟಪುಷ್ಟವಾಗಿದ್ದರು. ಇಂದು ತೂಕ ಮಾಡಿ ಊಟ ತಿನ್ನುತ್ತಿದ್ದರೂ ಆರೋಗ್ಯವಾಗಿಲ್ಲ. ಹೆಚ್ಚಾದರೆ ಒಂದು ಸಮಸ್ಯೆ, ಕಡಿಮೆಯಾದರೆ ಮತ್ತೊಂದು ಸಮಸ್ಯೆ ಎದುರಿಸುತ್ತಿದ್ದೇವೆ. ಇದಕ್ಕೆ ನಮ್ಮ ಆಹಾರ ಧಾನ್ಯಗಳೇ ಕಾರಣವಾಗಿವೆ’ ಎಂದು ಆಹಾರ ವಿಜ್ಞಾನಿ ಡಾ.ಖಾದರ್‌ ವಾಲಿ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಪ್ರಗತಿ ಶಾಲೆಯ ಆವರಣದಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ನಿಂದ ಆರೋಗ್ಯ ಭಾಗ್ಯ ಎಂಬ ವಿಷಯದ ಮೇಲೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ತಾತ, ಮುತ್ತಾತರ ಕಾಲದಿಂದಲೂ ಜಮೀನುಗಳಲ್ಲಿ ತಾವು ಬೆಳೆದ ತರಕಾರಿ, ದವಸ ಧಾನ್ಯಗಳಿಂದಲೇ ಅಡುಗೆ ಮಾಡಿ ಊಟ ಮಾಡುತ್ತಿದ್ದರು. ಜಮೀನುಗಳಲ್ಲಿ ಚೆನ್ನಾಗಿ ದುಡಿಮೆ ಮಾಡುತ್ತಿದ್ದರು. ಅವರ ಆಯಸ್ಸು 100 ವರ್ಷಕ್ಕೂ ಅಧಿಕವಾಗಿತ್ತು. ಆದರೆ, ಇಂದು ನಮ್ಮ ಆಯಸ್ಸು 60 ವರ್ಷ ದಾಟುವುದೇ ಕಷ್ಟವಾಗುತ್ತಿದೆ’ ಎಂದು ಹೇಳಿದರು.

‘ನಮಗೆ ನೂರೆಂಟು ಕಾಯಿಲೆಗಳು ಬರುತ್ತಿವೆ. ಸಣ್ಣ ವಯಸ್ಸಿಗೆ ಬಿಪಿ, ಷುಗರ್‌, ಹೃದಯಾಘಾತ, ಹತ್ತು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಯಾವ ಕಾರಣಕ್ಕೆ ಈ ರೀತಿ ಆಗುತ್ತಿದೆ ಎಂದು ಯಾರು ಯೋಜನೆ ಮಾಡುತ್ತಿಲ್ಲ. ಸಮಸ್ಯೆ ಪರಿಹಾರ ಹುಡುಕುವ ಬದಲು ಕಾಯಿಲೆ ಬಂದಾಗ ವೈದ್ಯರಿಗೆ ತೋರಿಸುವುದು, ಔಷಧಿ ಪಡೆದುಕೊಳ್ಳುವುದಷ್ಟೇ ಪರಿಹಾರವಾಗಿದೆ’ ಎಂದರು.

ಪ್ರತಿ ವ್ಯಕ್ತಿಯು ಒಂದಲ್ಲ ಒಂದು ರೀತಿಯಲ್ಲಿ ಕಾಯಿಲೆಗೆ ತುತ್ತಾಗಿ ದುಡಿದ ಅರ್ಧದಷ್ಟು ಹಣವನ್ನು ಔ‍ಷಧಿ ಮತ್ತು ಆಸ್ಪತ್ರೆಗೆ ಖರ್ಚು ಮಾಡುತ್ತಿದ್ದಾನೆ. ಇದು ಶಾಶ್ವತವಾದ ಪರಿಹಾರವಲ್ಲ. ಮೊದಲು ನಾವು ನಮ್ಮ ಆಹಾರ ಪದ್ಧತಿ ಬದಲಾಯಿಸಿಕೊಳ್ಳಬೇಕು. ಆಹಾರ ಪದಾರ್ಥಗಳನ್ನು ಬೆಳೆಯುವ ರೀತಿಯನ್ನು ಬದಲಾಯಿಸಬೇಕಿದೆ ಎಂದು ಸಲಹೆ ನೀಡಿದರು.

ಹಾರೋಹಳ್ಳಿ ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಕೆ. ಮಲ್ಲೇಶ್‌ ಮಾತನಾಡಿ, 30 ವರ್ಷಗಳಲ್ಲಿ ಆಹಾರ ಪದ್ಧತಿ ಮತ್ತು ಆಹಾರ ಪದಾರ್ಥಗಳ ಬೆಳೆಯುವುದರಲ್ಲಿ ಮಹತ್ವದ ಬದಲಾವಣೆಯಾಗಿದೆ. ಆರೋಗ್ಯದ ಬಗ್ಗೆಯೂ ಕಾಳಜಿ ಹೆಚ್ಚಾಗಿದೆ. ಆದರೂ ನಮಗೆ ಒಳ್ಳೆಯ ಆರೋಗ್ಯ ಸಿಗುತ್ತಿಲ್ಲ. ಪ್ರತಿ ವ್ಯಕ್ತಿಯು ತನ್ನ ಆಯಸ್ಸನ್ನು ಕಳೆದುಕೊಳ್ಳುತ್ತಿದ್ದಾನೆ. ಇದಕ್ಕೆ ನಾವು ಸೇವನೆ ಮಾಡುತ್ತಿರುವ ಆಹಾರ ಪದಾರ್ಥಗಳೇ ಕಾರಣವಾಗಿವೆ ಎಂದು ಹೇಳಿದರು.

ನಾವು ತಾಜಾ ತರಕಾರಿ ಬೇಕು ಎಂದು ಹಳ್ಳಿಗಳ ಕಡೆ ಹೋಗಿ ಹುಡುಕಿ ತರುತ್ತೇವೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆಯು ರಾಗಿ, ಭತ್ತ ಚೆನ್ನಾಗಿರುತ್ತದೆ ಎಂದು ಭಾವಿಸುತ್ತೇವೆ. ಆದರೆ, ಪ್ರತಿಯೊಬ್ಬ ರೈತನು ರಾಸಾಯನಿಕ ಬಳಕೆ ಮಾಡದೆ ಸೊಪ್ಪು, ತರಕಾರಿ, ಹಣ್ಣು, ಹೂವು ಬೆಳೆಯಲು ಆಗುತ್ತಿಲ್ಲ. ಪ್ರತಿಯೊಂದಕ್ಕೂ ಕೀಟನಾಶಕ ಮತ್ತು ರಸಗೊಬ್ಬರ ಬಳಕೆ ಮಾಡಬೇಕಿದೆ. ಆದ್ದರಿಂದ ಪ್ರತಿ ಆಹಾರವೂ ವಿಷಯುಕ್ತವಾಗುತ್ತಿದೆ ಎಂದುತಿಳಿಸಿದರು.

ಸ್ಕೌಟ್ಸ್‌ ಅಂಡ್‌ ಗೈಡ್ಸ್‌ ಜಿಲ್ಲಾ ಕಾರ್ಯದರ್ಶಿ ಶಿವನಂಜಪ್ಪ, ಪ್ರಗತಿ ಶಾಲೆಯ ಖಜಾಂಚಿ ಎಸ್‌. ದೀಪಕ್‌ ಮಾತನಾಡಿದರು.ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಸ್‌. ಮುರಳೀಧರ್‌, ಎಎಸ್‌ಐ ಪ್ರಭುಸ್ವಾಮಿ, ಸ್ಕೌಟ್ಸ್‌ ಮತ್ತು ಗೈಡ್ಸ್‌ನ ಎಸ್‌.ಒ.ಸಿ. ಹೊನ್ನಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT