ಗುರುವಾರ , ಜೂನ್ 17, 2021
21 °C
ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ; ಜಿಲ್ಲೆಯ ಅಭಿವೃದ್ಧಿಗೆ ಪಣ

ವರ್ಷದೊಳಗೆ ಕೆಂಪೇಗೌಡರ ಸಮಾಧಿ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿಯನ್ನು 15 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಕಾಮಗಾರಿಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸಿ, ಮುಂದಿನ ಕೆಂಪೇಗೌಡರ ಜಯಂತಿಯನ್ನು ಇಲ್ಲಿಯೇ ಆಚರಿಸಲು ಕ್ರಮ ವಹಿಸಲಾಗುವುದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಕೆಂಪಾಪುರದ ಅಭಿವೃದ್ಧಿಗಾಗಿ ಒಟ್ಟಾರೆ 30 ಕೋಟಿ ವ್ಯಯಿಸಲಾಗುತ್ತಿದೆ. ಕೆಂಪೇಗೌಡರ ಸಮಾಧಿ ಜೊತೆಗೆ ಮಾಗಡಿ ತಾಲ್ಲೂಕಿನ ಕರೆ - ಕಟ್ಟೆಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರು ಹಾಗೂ ಇನ್ನಿತರ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪ್ರವಾಸೋದ್ಯಮ ದೃಷ್ಟಿಯಿಂದಲೂ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಶ್ರೀರಂಗ ಏತ ನೀರಾವರಿ: ಮಾಗಡಿ ತಾಲ್ಲೂಕಿನ 211 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲು ಮತ್ತು ಇಲ್ಲಿನ 66 ಕೆರೆಗಳನ್ನು ಹೇಮಾವತಿ ನದಿಯಿಂದ ಏತ ನೀರಾವರಿ ಮೂಲಕ ತುಂಬಿಸುವ ಶ್ರೀರಂಗ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಂಡು ಒಂದು ವರ್ಷದಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದರು.

ಕೆಶಿಪ್ ಯೋಜನೆಯಡಿ ಬೆಂಗಳೂರಿನ ನೈಸ್ ರಸ್ತೆಯಿಂದ ಮಾಗಡಿಯವರೆಗೆ ನಾಲ್ಕು ಪಥಗಳ ರಸ್ತೆಯನ್ನು ನಿರ್ಮಿಸುವ ಮೂಲಕ ಮಾಗಡಿಯನ್ನು ಅಭಿವೃದ್ಧಿ ಪಡಿಸಲಾಗುವುದು. ಹಾಗೆಯೇ ಮಾಗಡಿಯಿಂದ ಸೋಮವಾರಪೇಟೆವರೆಗೆ ದ್ವಿಪಥ ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸುವ ಸಂಬಂಧ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು. ಮಾಗಡಿ ತಾಲ್ಲೂಕಿನ ತಿಪ್ಪಸಂದ್ರದ ಬಳಿ ನಿರ್ಮಾಣಗೊಳ್ಳಲಿರುವ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ 100 ಎಕರೆ ಜಮೀನು ಮಂಜೂರು ಮಾಡಲಾಗಿದ್ದು, ₨330 ಕೋಟಿ ವೆಚ್ಚದಲ್ಲಿ ಕ್ಯಾಂಪಸ್ ನಿರ್ಮಿಸಲು ಯೋಜಿಸಲಾಗಿದೆ ಎಂದರು.

ನರೇಗಾ ಸಾಧನೆ: ರಾಮನಗರ ಜಿಲ್ಲಾ ಪಂಚಾಯಿತಿ ವತಿಯಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ಎಂನರೇಗಾ) ಜಿಲ್ಲಾಯಾದ್ಯಂತ ಕೈಗೊಂಡಿರುವ ಹಲವು ಯೋಜನೆಗಳನ್ನು ಸಚಿವರು ಪ್ರಶಂಸಿಸಿದರು.

ಜಿಲ್ಲೆಯ ಉದ್ದಗಲಕ್ಕೂ ಇರುವ ಕಲ್ಯಾಣಿಗಳು ಮತ್ತು ಕರೆ - ಕಟ್ಟೆಗಳಿಗೆ ನರೇಗಾ ಮರುಜೀವ ತುಂಬುತ್ತಿದೆ. ಈ ಸಾಲಿನಲ್ಲಿ 1393 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಇದರಲ್ಲಿ 419 ಕಾಮಗಾರಿಗಳು ಮುಕ್ತಾಯಗೊಂಡಿವೆ ಎಂದರು.

ಕೃಷಿಹೊಂಡ ಕಾಮಗಾರಿಗಳಲ್ಲೂ ಜಿಲ್ಲೆಯಲ್ಲಿ ಅಧಿಕ ಸಾಧನೆಯಾಗಿದೆ. 1270 ಕೃಷಿ ಹೊಂಡಗಳ ಗುರಿ ಪೈಕಿ ಅದಕ್ಕೂ ಹೆಚ್ಚಿನದಾಗಿ 1951 ಕಾಮಗಾರಿಗಳು ಮುಕ್ತಾಯಗೊಂಡಿರುತ್ತವೆ. ಜನನಿ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆ, ’ಸ್ವಾಮಿತ್ವ’ ಯೋಜನೆ ಹಾಗೂ ಮಾನವ ದಿನಗಳ ಸೃಜನೆಯಲ್ಲಿ ರಾಮನಗರ ಜಿಲ್ಲೆಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಪ್ರತಿ ತಿಂಗಳೂ ಒಂದೊಂದು ಕಂದಾಯ ಗ್ರಾಮವನ್ನು ಆಯ್ದುಕೊಂಡು ಖಾತೆಗಳನ್ನು ಕ್ರಮಬದ್ಧಗೊಳಿಸಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಕುಡಿಯುವ ನೀರಿನ ಯೋಜನೆ: 456 ಕೋಟಿ ವೆಚ್ಚದಲ್ಲಿ ರಾಮನಗರ ನಗರಕ್ಕೆ ಮತ್ತು ಮಾರ್ಗ ಮಧ್ಯದ 8 ಹಳ್ಳಿಗಳಿಗೆ ನಟ್ಕಲ್ ಜಲಾಶಯ ಮೂಲದಿಂದ ಕುಡಿಯುವ ನೀರಿನ ಯೋಜನೆ, 13.11 ಕೋಟಿ ರೂ ವೆಚ್ಚದಲ್ಲಿ ಚನ್ನಪಟ್ಟಣ ನಗರಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆ, 73.40 ಕೋಟಿ ವೆಚ್ಚದಲ್ಲಿ ಬಿಡದಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಲ್ಪಿಸುವ ಯೋಜನೆ ಹಾಗೂ 98.20 ಕೋಟಿ ವೆಚ್ಚದಲ್ಲಿ ಬಿಡದಿ ನಗರಕ್ಕೆ ಒಳಚರಂಡಿ ಕಲ್ಪಿಸುವ ಯೋಜನೆ ಕೈಗೊಳ್ಳಲಾಗಿದೆ ಎಂದು ಅಶ್ವಥ್ ನಾರಾಯಣ ಅವರು ತಿಳಿಸಿದರು. 210 ಕೋಟಿ ವೆಚ್ಚದಲ್ಲಿ ಕೋಡಿಹಳ್ಳಿ ಹಾಗೂ ಇತರೆ 299 ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಸರಬರಾಜು ಯೋಜನೆ, ₨4 ಕೋಟಿ ವೆಚ್ಚದಲ್ಲಿ ಸಾತನೂರು ಹಾಗೂ ಇತರೆ 29 ಹಳ್ಳಿಗಳಿಗೆ ಕುಡಿಯುವ ನೀರಿನ ಸರಬರಾಜು ಯೋಜನೆಗಳು ಪ್ರಗತಿಯಲ್ಲಿವೆ ಎಂದರು.

ಕೋವಿಡ್ -19 ನ್ನು ಎದುರಿಸಲು ಅವಶ್ಯಕವಿರುವ 4 ಆಂಬುಲೆನ್ಸ್‌ಗಳನ್ನು ತಾಲ್ಲೂಕಿಗೆ ಒಂದರಂತೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಅಂಗವಿಕಲರಿಗೆ 15 ಯಂತ್ರಚಾಲಿತ ರೆಟ್ರೋಫಿಟೆಡ್ ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸಚಿವರು ಅಭಿನಂದಿಸಿದರು. ರಾಮನಗರ ನಗರಸಭೆಯು ಕೋವಿಡ್ ಸಮಯದಲ್ಲಿ ಸೀಲ್‌ಡೌನ್ ಏರಿಯಾಗಳಲ್ಲಿ ನೀಡುತ್ತಿದ್ದ ಸೇವೆಗಳ ಮಾದರಿಯನ್ನು ಅಣಕು ಪ್ರದರ್ಶನದ ಮೂಲಕ ವ್ಯಕ್ತಪಡಿಸಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸಪ್ಪ, ರಾಮನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುರಳೀಧರ್‌, ಬಿಡದಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವರದರಾಜು ಗೌಡ, ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಜಿ.ಪಂ. ಸಿಇಒ ಇಕ್ರಂ, ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಮತ್ತಿತರರು ಇದ್ದರು.

ಅಂತರ ಪಾಲನೆ: ಕೋವಿಡ್ ಹಿನ್ನಲೆಯಲ್ಲಿ ಕಾರ್ಯಕ್ರಮದಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳಲಾಗಿದ್ದು, ವೇದಿಕೆಯಲ್ಲೂ ಈ ನಿಯಮ ಪಾಲನೆ ಆಯಿತು. ಆದರೆ ವೇದಿಕೆ ಪಕ್ಕದಲ್ಲಿಯೇ ಮುಖಂಡರು ಹಾಗೂ ಸಾರ್ವಜನಿಕರು ಗುಂಪುಕಟ್ಟಿ ನಿಂತಿದ್ದರು.

ಗೌರವ ವಂದನೆ ಸಲ್ಲಿಕೆ ಬಳಿಕ ಸಚಿವರ ಭಾಷಣದ ಸಂದರ್ಭ ನಗರಸಭೆ ಸಿಬ್ಬಂದಿಯೊಬ್ಬರು ತಲೆಸುತ್ತಿ ಬಿದ್ದರು.
ಇದೇ ವೇಳೆ ಪೊಲೀಸರು, ಪ್ರವಾಸಿ ಮಿತ್ರರ ತಂಡ, ಗೃಹ ರಕ್ಷಕದಳ ಹಾಗೂ ಪೌರಕಾರ್ಮಿಕ ತಂಡದವರು ಆಕರ್ಷಕ ಪಥ ಸಂಚಲನ ನಡೆಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಂದ ಪಥ ಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು