ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಸ್ವಾತಂತ್ರ್ಯೋತ್ಸವ ಸಂಭ್ರಮ; ಕಣ್ಮನ ಸೆಳೆದ ತ್ರಿವರ್ಣ

ಧ್ವಜಾರೋಹಣ ನೆರವೇರಿಸಿದ ಸಚಿವ ರಾಮಲಿಂಗಾ ರೆಡ್ಡಿ; ಗಮನ ಸೆಳೆದ ಪಥ ಸಂಚಲನ; ನೃತ್ಯಕ್ಕೆ ಮನಸೋತ ಜನ
Published 15 ಆಗಸ್ಟ್ 2023, 13:00 IST
Last Updated 15 ಆಗಸ್ಟ್ 2023, 13:00 IST
ಅಕ್ಷರ ಗಾತ್ರ

ರಾಮನಗರ: ಕಣ್ಣು ಹಾಯಿಸಿದತ್ತೆಲ್ಲಾ ತ್ರಿವರ್ಣ, ಚಿಣ್ಣರ ಸಂಭ್ರಮದ ಓಡಾಟ, ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮ, ಗಮನ ಸೆಳೆದ ಆಕರ್ಷಕ ಪಥ ಸಂಚಲನ. ದೇಶಪ್ರೇಮ ಉಕ್ಕಿಸಿದ ದೇಶಭಕ್ತಿ ಗೀತೆಗಳು... ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 77ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಕಂಡುಬಂದ ದೃಶ್ಯವಿದು.

ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಸುಸಜ್ಜಿತ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಧ್ವಜಾರೋಹಣ ಮಾಡಿದರು. ಪೊಲೀಸರು, ವಿದ್ಯಾರ್ಥಿಗಳು ಹಾಗೂ ಗೃಹ ರಕ್ಷಕ ಸಿಬ್ಬಂದಿಯಿಂದ ಗೌರವ ಸ್ವೀಕರಿಸಿದರು. ಬಳಿಕ ರಾಷ್ಟ್ರಗೀತೆ, ನಾಡಗೀತೆ ಹಾಗೂ ರೈತ ಗೀತೆಗಳು ಮೊಳಗಿದವು.

ಬಳಿಕ ಮಾತನಾಡಿದ ಅವರು, ‘ಅನೇಕ ಮಹನೀಯರ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ರಾಮನಗರ ಜಿಲ್ಲೆಯವರ ಪಾತ್ರವೂ ಇದ್ದು, ಆಲಹಳ್ಳಿಯ ಪುಟ್ಟಸ್ವಾಮಿ, ಕನಕಪುರದ ಲಿಂಗಯ್ಯ, ಕಲ್ಲಹಳ್ಳಿಯ ಕರಿಯಪ್ಪನವರ ಕೊಡುಗೆ ಅಪಾರವಾದುದು’ ಎಂದು ಸ್ಮರಿಸಿದರು.

‘ಸ್ವಾತಂತ್ರ್ಯ ನಂತರ ದೇಶದ ಅಭಿವೃದ್ಧಿಗೆ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ ಅವರಿಂದಿಡಿದು ಜಿಲ್ಲೆಯನ್ನು ಪ್ರತಿನಿಧಿಸಿದ್ದ ಎಚ್‌.ಡಿ.ದೇವೇಗೌಡರವರೆಗೆ ಕಾಂಗ್ರೆಸ್ಸೇತರ ಸರ್ಕಾರಗಳು ಸಹ ಕೊಡುಗೆ ನೀಡಿವೆ. ಎಸ್.ಎಂ.ಕೃಷ್ಣ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟದಲ್ಲಿ ಅಚ್ಚೊತ್ತುವಂತೆ ಮಾಡಿತು. ಸಿದ್ದರಾಮಯ್ಯ ಅವರ ಮೊದಲ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ದೇಶದ ಗಮನ ಸೆಳೆದವು’ ಎಂದರು.

‘ಐತಿಹಾಸಿಕ, ಪುರಾಣ ಪ್ರಸಿದ್ಧ ರಾಮನಗರವು ಸಾಮರಸ್ಯಕ್ಕೆ ಹೆಸರಾಗಿದೆ. ಶಿಕ್ಷಣ, ಕ್ರೀಡೆ, ಕೃಷಿ, ರೇಷ್ಮೆ, ಪರಿಸರ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಶ್ರೀಮಂತವಾಗಿದ್ದು, ಸುಭಿಕ್ಷ ಜಿಲ್ಲೆಯಾಗುವ ಸನಿಹದಲ್ಲಿದೆ. ಈಗಾಗಲೇ ಸಾಧಿಸಿರುವುದು ಬಹಳ. ಸಾಧಿಸಬೇಕಾದ್ದು ಇನ್ನಷ್ಟು ಇದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ, ನಾನು ಮತ್ತು ಇಲ್ಲಿಯವರೇ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತೊಡಗಿಸಿಕೊಂಡಿದ್ದೇವೆ’ ಎಂದು ಹೇಳಿದರು.

ತಿಂಗಳಾಂತ್ಯಕ್ಕೆ ಖಾತೆಗೆ ಮೊತ್ತ: ‘ನಮ್ಮ ಸರ್ಕಾರದ ವಿವಿಧ ಯೋಜನೆಗಳ ಪೈಕಿ ಐದು ಗ್ಯಾರಂಟಿಗಳು ಪ್ರಮುಖವಾಗಿವೆ. ಈಗಾಗಲೇ ಶಕ್ತಿ ಯೋಜನೆ, ಅನ್ನಭಾಗ್ಯ ಹಾಗೂ ಗೃಹಜ್ಯೋತಿ ಯೋಜನೆಗಳು ಜಾರಿಯಾಗಿವೆ. ಈ ತಿಂಗಳಾಂತ್ಯಕ್ಕೆ ಗೃಹಲಕ್ಷ್ಮಿ ಯೋಜನೆಯಡಿ ಮನೆಯೊಡತಿ ಬ್ಯಾಂಕ್ ಖಾತೆಗೆ ನೇರವಾಗಿ ₹ 2 ಸಾವಿರ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದರು.

ನಗರಸಭೆ ಅಧ್ಯಕ್ಷ ಸಿ.ಸೋಮಶೇಖರ್, ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ದಿಗ್ವಿಜಯ್ ಬೋಡ್ಕೆ, ಮಾಜಿ ಶಾಸಕ ಕೆ.ರಾಜು, ನಗರಸಭೆ ಸದಸ್ಯರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ವೇದಿಕೆಯಲ್ಲಿದ್ದರು.

ಗಮನ ಸೆಳೆದ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ
ಗಮನ ಸೆಳೆದ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ
ತ್ರಿವರ್ಣ ಧ್ವಜದೊಂದಿಗೆ ಗಮನ ಸೆಳೆದ ಭಾರತ ಮಾತೆ ವೇಷಧಾರಿ ವಿದ್ಯಾರ್ಥಿನಿ
ತ್ರಿವರ್ಣ ಧ್ವಜದೊಂದಿಗೆ ಗಮನ ಸೆಳೆದ ಭಾರತ ಮಾತೆ ವೇಷಧಾರಿ ವಿದ್ಯಾರ್ಥಿನಿ
ಮನಸೂರೆಗೊಂಡ ವಿದ್ಯಾರ್ಥಿಗಳ ಆಕರ್ಷಕ ನೃತ್ಯ ಕಾರ್ಯಕ್ರಮ
ಮನಸೂರೆಗೊಂಡ ವಿದ್ಯಾರ್ಥಿಗಳ ಆಕರ್ಷಕ ನೃತ್ಯ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು
ಎದೆ ಝಲ್ ಎನಿಸುವಂತೆ ಪ್ರದರ್ಶನ ನೀಡಿದ ಹುಲಿ ಕುಣಿತ ತಂಡ
ಎದೆ ಝಲ್ ಎನಿಸುವಂತೆ ಪ್ರದರ್ಶನ ನೀಡಿದ ಹುಲಿ ಕುಣಿತ ತಂಡ
ಅತ್ಯುತ್ತಮ ಸೇವೆ ಸಲ್ಲಿಸಿದ ಕೆಎಸ್‌ಆರ್‌ಟಿಸಿ ಚಾಲಕರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಶಾಸಕ ಎಚ್‌.ಎ.ಇಕ್ಬಾಲ್ ಹುಸೇನ್ ಬೆಳ್ಳಿ ಪದಕ ನೀಡಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಇದ್ದಾರೆ
ಅತ್ಯುತ್ತಮ ಸೇವೆ ಸಲ್ಲಿಸಿದ ಕೆಎಸ್‌ಆರ್‌ಟಿಸಿ ಚಾಲಕರಿಗೆ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಶಾಸಕ ಎಚ್‌.ಎ.ಇಕ್ಬಾಲ್ ಹುಸೇನ್ ಬೆಳ್ಳಿ ಪದಕ ನೀಡಿದರು. ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ್ ಇದ್ದಾರೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು
ಪೊಲೀಸರ ಪಥ ಸಂಚಲನ ಗಮನ ಸೆಳೆಯಿತು
ಪೊಲೀಸರ ಪಥ ಸಂಚಲನ ಗಮನ ಸೆಳೆಯಿತು

‘ನಿರಂತರ ನೀರು ಯೋಜನೆ ಶೀಘ್ರ ಸಾಕಾರ’

ಅಧ್ಯಕ್ಷೀಯ ನುಡಿಗಳನ್ನಾಡಿದ ಶಾಸಕ ಎಚ್‌.ಎ.ಇಕ್ಬಾಲ್ ಹುಸೇನ್ ‘ಜಿಲ್ಲೆಯಲ್ಲಿ ಮೇಕೆದಾಟು ಅಣೆಕಟ್ಟು ಯೋಜನೆ ಜಾರಿ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ ನಮ್ಮ ಸರ್ಕಾರದ ಮುಖ್ಯ ಗುರಿಯಾಗಿದೆ. ಸತ್ತೆಗಾಲ ಏತ ನೀರಾವರಿ ಯೋಜನೆಯಿಂದ ರಾಮನಗರಕ್ಕೆ ನಿತ್ಯವೂ ಕುಡಿಯುವ ನೀರು ಬರಲಿದ್ದು ಕೆಲವೇ ದಿನಗಳಲ್ಲಿ ಸಾಕಾರವಾಗಲಿದೆ. ಕೊತ್ತಿಪುರ ಮತ್ತು ಚನ್ನೇನಹಳ್ಳಿ ಬಳಿ ಒಂದು ಕೋಟಿ ಲೀಟರ್ ಸಂಗ್ರಹದ ಸಾಮರ್ಥ್ಯವುಳ್ಳ 2 ಘಟಕ ನಿರ್ಮಿಸಿ ನಗರದೊಂದಿಗೆ ಗ್ರಾಮೀಣ ಪ್ರದೇಶಕ್ಕೂ ನೀರು ಪೂರೈಸುವ ಯೋಜನೆಯೂ ಅಂತಿಮ ಹಂತಕ್ಕೆ ಬಂದಿದೆ’ ಎಂದು ಹೇಳಿದರು. ‘ಮಳೆಯಿಂದ ಹಾನಿಗೀಡಾದ ಸೇತುವೆಗಳ ಮರು ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಸೂರಿಲ್ಲದವರಿಗೆ ನಿವೇಶನ ಹಂಚುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಕೊತ್ತಿಪುರದಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ 888 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಒಟ್ಟು 1530 ಫಲಾನುಭವಿಗಳಿಗೆ ಸ್ವಂತ ಸೂರು ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದರು. ‘ಉದ್ಯಾನ ಸುಸಜ್ಜಿತ ರಂಗಮಂದಿರ ನಿರ್ಮಾಣ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯ ಪಾದಚಾರಿ ಮಾರ್ಗ ನಿರ್ಮಾಣ ಸೇರಿದಂತೆ ಹಲವು ಕೆಲಸಗಳಿಗೆ ಆದ್ಯತೆ ನೀಡಲಾಗಿದೆ. ಹೊಸ ತಾಲ್ಲೂಕು ಹಾರೋಹಳ್ಳಿಯಲ್ಲಿ ಮೂಲಸೌಕರ್ಯ ಕೊರತೆ ಪರಿಹರಿಸಲು ಶ್ರಮಿಸುತ್ತಿದ್ದೇನೆ’ ಎಂದರು.

ಬಿಸಿಲ ಬೇಗೆಗೆ ಬಳಲಿದರು

ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಬಿಸಿಲಿನ ತಾಪ ಹೆಚ್ಚಾಗಿದ್ದರಿಂದ ಪಥ ಸಂಚಲನಕ್ಕಾಗಿ 8 ಗಂಟೆಯಿಂದಲೇ ತಯಾರಾಗಿ ನಿಂತಿದ್ದ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಪೊಲೀಸರು ಹಾಗೂ ಗೃಹ ರಕ್ಷಕ ಸಿಬ್ಬಂದಿ ಬಳಲಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನಕ್ಕಾಗಿ ವೇಷ–ಭೂಷಣದೊಂದಿಗೆ ಸನ್ನದ್ಧ ಸ್ಥಿತಿಯಲ್ಲಿದ್ದ ಮಕ್ಕಳು ಸಹ ಬಿಸಿಲಿಗೆ ಹೈರಾಣಾದರು. ಹೊಸ ಸಂಪ್ರದಾಯಕ್ಕೆ ನಾಂದಿ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಷ್ಟೇ ಭಾಷಣ ಮಾಡುತ್ತಿದ್ದರು. ಆದರೆ ಈ ಸಲ ಸಚಿವರ ಭಾಷಣದ ಬಳಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದರು. ಇದಕ್ಕೂ ಮುಂಚೆ ಕ್ಷೇತ್ರ ಪ್ರತಿನಿಧಿಸುತ್ತಿದ್ದವರು ಭಾಷಣ ಮಾಡಿದ ನಿದರ್ಶನವಿಲ್ಲ ಎಂಬ ಮಾತುಗಳು ಕಾರ್ಯಕ್ರಮದಲ್ಲಿ ಕೇಳಿಬಂದವು. ಉಪಾಹಾರ ಲಾಡು ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಅಧಿಕಾರಿಗಳು ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಕ್ರೀಡಾಂಗಣದ ಮೇಲ್ಭಾಗದ ಮೈದಾನದಲ್ಲಿ ಬೆಳಿಗ್ಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಧ್ವಜಾರೋಹಣದ ಬಳಿಕ ಕ್ರೀಡಾಂಗಣದಲ್ಲಿದ್ದ ಎಲ್ಲರಿಗೂ ಲಾಡು ವಿತರಿಸಲಾಯಿತು.

Cut-off box - ಕೆಎಸ್‌ಆರ್‌ಟಿಸಿಯ 29 ಚಾಲಕರಿಗೆ ಬೆಳ್ಳಿ ಪದಕ ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗದಲ್ಲಿ 2019ನೇ ಸಾಲಿನಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ 29 ಬಸ್ ಚಾಲಕರಿಗೆ ಗಣ್ಯರು ಬೆಳ್ಳಿ ಪದಕ ಪ್ರಶಸ್ತಿ ಪತ್ರ ಹಾಗೂ ₹ 2500 ನಗದು ನೀಡಿ ಗೌರವಿಸಿದರು. ಇದರೊಂದಿಗೆ ಚಾಲಕರಿಗೆ ಮಾಸಿಕ ₹ 250 ಪ್ರೋತ್ಸಾಹಧನವು ಸಿಗಲಿದೆ. ಆನೇಕಲ್ ಘಟಕದ ವಿ.ಶ್ರೀನಿವಾಸಾಚಾರಿ ಫಯಾಜ್ ಪಾಷ ಚನ್ನಪಟ್ಟಣದ ಬಿ.ಆರ್.ಇಂದ್ರಕುಮಾರ್ ಬಿ.ಎಂ.ವಿಜಯಗಿರಿ ಎಸ್.ಸಿದ್ದರಾಜು ಕೆ.ಸಿ.ಗೋಪಿ ಎಚ್‌.ಪಿ.ಮಹೇಶ್ ಮಹದೇವ ಗುದಗಿ ಹಾರೋಹಳ್ಳಿಯ ಶಿವಮಾದು ಕನಕಗಿರಿಯಪ್ಪ ಯಮನೂರ ಸಾಬ್ ರಾಮನಗರದ ಬಸವರಾಜು ಪೂಜಾರಿ ರಾಜ್‌ಕುಮಾರ್ ನಾಗರಾಜು ಸಿದ್ದರಾಮು ಚಂದ್ರಶೇಖರ ಎನ್ ಟಿ.ಗೋಪಾಲ ಲಾಲಸಾಬ್ ಅಮ್ಮಣಗಿ ಎ.ಎಸ್.ನಾಗರಾಜು ಶರಣಪ್ಪ ಕಲ್ಗುಡಿ ಇಲಾಖಾ ವಾಹನ ಚಾಲಕರಾದ ರಮೇಶ್ ಆರ್ (ವಿಭಾಗೀಯ ಕಚೇರಿ) ಮರಿಚನ್ನಯ್ಯ ಎಸ್ (ವಿಭಾಗೀಯ ತನಿಖಾ ದಳ) ಮಾಗಡಿಯ ಎಂ.ಪಿ.ಈಶ್ವರಾಚಾರಿ ಕನಕಪುರದ ಪಿ.ಎಂ.ಪ್ರಕಾಶ್ ಜಯರಾಮು ಕೆ.ಎಸ್.ಕುಮಾರ್ ಬಿ.ಸಿ.ಲಿಂಗಯ್ಯ ಮಹಾದೇವ ನಾಯ್ಕ ಹಾಗೂ ಬಿ.ಟಿ.ನಾಗರಾಜು ಅವರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಬೆಳಿಗ್ಗೆ ಪದಕ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT