ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು: ಮತ್ತೆ ಚಿಗುರಿದ ಕನಸು

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿರಿಂದ ಶೀಘ್ರ ಸ್ಥಳ ಪರಿಶೀಲನೆ
Last Updated 9 ಸೆಪ್ಟೆಂಬರ್ 2020, 20:00 IST
ಅಕ್ಷರ ಗಾತ್ರ

ರಾಮನಗರ: ಮೇಕೆದಾಟು ಪ್ರದೇಶಕ್ಕೆ ಭೇಟಿ ನೀಡಿ ಅಣೆಕಟ್ಟೆ ನಿರ್ಮಾಣದ ಸ್ಥಳ ಪರಿಶೀಲಿಸಲು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮುಂದಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಮೇಕೆದಾಟು ವಿಚಾರ ಮುನ್ನಲೆಗೆ ಬಂದಂತಾಗಿದೆ.

2018ರ ಡಿಸೆಂಬರ್‌ನಲ್ಲಿ ಜಿಲ್ಲೆಯವರೇ ಆದ ಅಂದಿನ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಇಲ್ಲಿಗೆ ತೆರಳಿ ಸ್ಥಳ ಪರಿಶೀಲಿಸಿದ್ದರು. ಜೊತೆಗೆ ಯೋಜನೆ ಖರ್ಚು-ವೆಚ್ಚಗಳ ಕುರಿತು ಮಾಧ್ಯಮಗಳಿಗೆ ಮಾಹಿತಿಯನ್ನೂ ನೀಡಿದ್ದರು. ಆದರೆ ನಂತರದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ವಿಚಾರ ನೆನೆಗುದಿಗೆ ಬಿದ್ದಿತ್ತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಅಲ್ಲಲ್ಲಿ ಚರ್ಚೆ ನಡೆದಿತ್ತು. ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಸಹ ಈ ಬಗ್ಗೆ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.

ಮೇಕೆದಾಟು ಸಮನಾಂತರ ಅಣೆಕಟ್ಟು ನಿರ್ಮಾಣ ಸಂಬಂಧ ಕರ್ನಾಟಕದ ಮನವಿಯನ್ನು ಕೂಡಲೇ ಪುರಸ್ಕರಿಸುವಂತೆ ಕೇಂದ್ರದ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಸಚಿವ ರಮೇಶ್ ಜಾರಕಿಹೊಳಿ ತಿಂಗಳ ಹಿಂದೆ ಮನವಿ ಮಾಡಿದ್ದರು. ಅದಕ್ಕೆ ತಾತ್ವಿಕ ಒಪ್ಪಿಗೆ ದೊರೆತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಚಿವರು ಕಳೆದ ವಾರವೇ ಸ್ಥಳ ಪರಿಶೀಲನೆಗೆ ಮುಂದಾಗಿದ್ದರು. ಆದರೆ ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ನಿಧನದ ಕಾರಣ ಅವರ ಭೇಟಿ ರದ್ದಾಗಿತ್ತು. ಶೀಘ್ರದಲ್ಲೇ ಅವರು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬಹುದಿನಗಳ ಕನಸು: ಮೇಕೆದಾಟು ಬಳಿ ಕಾವೇರಿ ನದಿಗೆ ಅಣೆಕಟ್ಟೆ ನಿರ್ಮಿಸಬೇಕು. ಈ ಮೂಲಕ ಬೆಂಗಳೂರು ಸೇರಿದಂತೆ ಬಯಲುಸೀಮೆ ಜಿಲ್ಲೆಗಳ ನೀರಿನ ಬವಣೆ ನೀಗಿಸಬೇಕು ಎನ್ನುವುದು ಈ ಭಾಗದ ಜನರ ಬಹುದಿನದ ಕನಸು.

ಸಂಗಮ ಹಾಗೂ ಮೇಕೆದಾಟು ನಡುವಿನ ಒಂಟಿಗುಂಡ್ಲು ಪ್ರದೇಶದ ಬಳಿ ಸರ್ಕಾರವು ಹೊಸ ಅಣೆಕಟ್ಟೆ ನಿರ್ಮಾಣಕ್ಕೆ ಉದ್ದೇಶಿಸಿದೆ.

ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಆರಂಭದಲ್ಲಿ ರಾಜ್ಯ ಸರ್ಕಾರವು ಮೇಕೆದಾಟು, ಮಹಾಮಡು ಸಹಿತ ಮೂರು ಸ್ಥಳಗಳನ್ನು ಗುರುತಿಸಿತ್ತು. ಇದರಲ್ಲಿ ಎರಡು ಬೆಟ್ಟ ಶ್ರೇಣಿಗಳ ನಡುವಿನ ಒಂಟಿಗುಂಡ್ಲುವನ್ನು ಅಣೆಕಟ್ಟೆ ನಿರ್ಮಾಣಕ್ಕೆ ಅಂತಿಮಗೊಳಿಸಲಾಗಿದೆ. ಈ ಪ್ರದೇಶವು ಸಂಗಮದಿಂದ 4 ಕಿಲೋಮೀಟರ್ ದೂರವಿದೆ. ಇದರಾಚೆಗೆ 1.8 ಕಿ.ಮೀ. ದೂರದಲ್ಲಿ ಮೇಕೆದಾಟು ಸಿಗಲಿದೆ. ಮೇಕೆ ದಾಟಿತ್ತು ಎನ್ನಲಾದ ಬೃಹತ್‌ ಬಂಡೆಕಲ್ಲುಗಳುಳ್ಳ ಕಂದಕ ಶ್ರೇಣಿಯ ಸೌಂದರ್ಯಕ್ಕೆ ಯಾವುದೇ ಧಕ್ಕೆ ಆಗದಂತೆ ಅಣೆಕಟ್ಟೆ ನಿರ್ಮಾಣ ಮಾಡಲು ಜಲ ಸಂಪನ್ಮೂಲ ಇಲಾಖೆಯು ಯೋಜಿಸಿದೆ.

ಜಲಾಶಯಕ್ಕಾಗಿ ಸುಮಾರು 4,996 ಹೆಕ್ಟೇರ್‌ ಪ್ರದೇಶವು ಮುಳುಗಡೆ ಆಗಲಿದ್ದು, ಇದರಲ್ಲಿ 4716 ಹೆಕ್ಟೇರ್‌ ಅರಣ್ಯ ಪ್ರದೇಶವೇ ಆಗಿದೆ. ಅದರಲ್ಲಿಯೂ 2800 ಹೆಕ್ಟೇರ್‌ನಷ್ಟು ಪ್ರದೇಶವು ಕಾವೇರಿ ವನ್ಯಧಾಮಕ್ಕೆ ಸೇರಿದೆ. ಉದ್ದೇಶಿತ ಅಣೆಕಟ್ಟೆಯು 66.85 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಲಿದ್ದು, ಇದರಲ್ಲಿ ವಾಸ್ತವದಲ್ಲಿ 64 ಟಿಎಂಸಿಯಷ್ಟು ನೀರು ಸಂಗ್ರಹವಾಗಲಿದೆ. ಆ ಪೈಕಿ 7.7 ಟಿಎಂಸಿ ಡೆಡ್‌ ಸ್ಟೋರೇಜ್ ಆಗಿದ್ದು, ಉಳಿದ 56.30 ಟಿಎಂಸಿ ಬಳಕೆಗೆ ಲಭ್ಯವಿರಲಿದೆ.

ಮೇಕೆದಾಟು ಅಣೆಕಟ್ಟೆಯು ಕಾಡಿನಲ್ಲಿ ನಿರ್ಮಾಣ ಆಗುವುದರಿಂದ ಜನರಿಗೆ ಹೆಚ್ಚು ಸಮಸ್ಯೆ ಇಲ್ಲ. ಕೇವಲ 280 ಹೆಕ್ಟೇರ್‌ ಕಂದಾಯ ಭೂಮಿ ಮಾತ್ರ ಇದರ ವ್ಯಾಪ್ತಿಗೆ ಬರಲಿದೆ. ಸುತ್ತಲಿನ ಗ್ರಾಮಗಳಾದ ಮಡಿವಾಳ, ಕೊಕ್ಕೆದೊಡ್ಡಿ, ಬೊಮ್ಮಸಂದ್ರ, ಕಾಳಿಬೋರೆ ಫಿಶಿಂಗ್‌ ಕ್ಯಾಂಪ್‌ ಸಹಿತ ಏಳೆಂಟು ಗ್ರಾಮಗಳು ಮುಳುಗಡೆ ಆಗುವ ಸಾಧ್ಯತೆ ಇದೆ.

ಯೋಜನಾ ವೆಚ್ಚ ಹೊರೆಯಲ್ಲ: ‘ಯೋಜನೆಯಿಂದ ವಾರ್ಷಿಕ 400–440 ಮೆಗಾ ವಾಟ್‌ನಷ್ಟು ವಿದ್ಯುತ್‌ ಉತ್ಪಾದನೆ ಗುರಿ ಹೊಂದಲಾಗಿದೆ. ಇದಕ್ಕಾಗಿ ಕೆಪಿಟಿಸಿಎಲ್‌ ₹2 ಸಾವಿರ ಕೋಟಿಯಷ್ಟು ಹೂಡಿಕೆ ಮಾಡುವ ಒಪ್ಪಂದವೂ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT