ಗುರುವಾರ , ಏಪ್ರಿಲ್ 15, 2021
29 °C

ಪ್ರಚಾರಕ್ಕಾಗಿ ಬಿಜೆಪಿ ಮುಖಂಡರಿಂದ ಅಪಪ್ರಚಾರ:ಅನಿತಾರ ಟ್ರೋಲ್‌ಗೆ ಜೆಡಿಎಸ್ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ‘ಬಿಜೆಪಿಯವರು ವಸ್ತುಸ್ಥಿತಿಯನ್ನು ತಿಳಿದುಕೊಂಡು ಆರೋಪಗಳನ್ನು ಮಾಡಬೇಕೇ ಹೊರತು, ಪ್ರಚಾರಕ್ಕಾಗಿ ಅಪಪ್ರಚಾರ ಮಾಡಬಾರದು ’ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ರಾಮನಗರದಲ್ಲಿ ನಾಲ್ಕು ದಿನಕ್ಕೊಮ್ಮೆ ನೀರನ್ನು ಬಿಡಲಾಗುತ್ತಿದೆ. ಮಾರ್ಚ್‌ನಲ್ಲಿ ವಿದ್ಯುತ್‌ ಕಂಬಗಳನ್ನು ಬದಲಾಯಿಸುತ್ತಿದ್ದುದ್ದರಿಂದ ಸ್ವಲ್ಪ ಸಮಸ್ಯೆ ಉಂಟಾಗಿತ್ತು. ನಂತರ ಸರಿ ಹೋಯಿತು. ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮೌಖಿಕವಾಗಿ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ನೀರಿನ ಸಮಸ್ಯೆಯನ್ನು ಬಗೆಹರಿಸಿದ್ದಾರೆ’ ಎಂದು ತಿಳಿಸಿದರು.

‘ಇಬ್ಬರು ಬಿಜೆಪಿ ಮುಖಂಡರು ರಾಮನಗರದಲ್ಲಿ ಹದಿನೈದು ದಿನಕ್ಕೆ ಒಮ್ಮೆ ನೀರನ್ನು ಬಿಡಲಾಗುತ್ತಿದೆ ಎಂದು ವೀಡಿಯೊ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯ ಬಿಟ್ಟಿದ್ದಾರೆ. ಅವರಿಗೆ ವಸ್ತು ಸ್ಥಿತಿ ಗೊತ್ತಿಲ್ಲ. ಪ್ರಚಾರಕ್ಕಾಗಿ ನೀರಿನ ವಿಷಯವನ್ನು ತೆಗೆದುಕೊಂಡು ಈಗ ನಗೆಪಾಟಲಿಗೆ ಈಡಾಗಿದ್ದಾರೆ. ಸಣ್ಣ ವಿಚಾರಗಳಿಗೆಲ್ಲಾ ಜೆಡಿಎಸ್ ಅನ್ನು ಟೀಕಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಅನಿತಾ ಕುಮಾರಸ್ವಾಮಿ ಅವರನ್ನು 'ಲೇಡಿ ಸಿ.ಎಂ' ಎಂದು ಅಧಿಕಾರಿಗಳೇ ಕರೆಯುತ್ತಿದ್ದಾರೆ. ರಾಮನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮಂಚನಬೆಲೆ ನೀರಿನ ಶುದ್ಧೀಕರಣಕ್ಕೆ ₨3.5 ಕೋಟಿ ಮಂಜೂರಾಗಿದ್ದು, ಕೆಲವೆ ದಿನಗಳಲ್ಲಿ ಟೆಂಡರ್ ಕರೆಯಲಾಗುತ್ತದೆ’ ಎಂದು ತಿಳಿಸಿದರು.

‘ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾಕುಮಾರಸ್ವಾಮಿ ಅವರು ಬೆಂಗಳೂರಿನಿಂದ ಮೈಸೂರಿಗೆ ತೆರಳುವಾಗ ಇಲ್ಲಿನ ಸಮಸ್ಯೆಗಳ ಬಗ್ಗೆ ವಿಚಾರಿಸಿಯೇ ತೆರಳುತ್ತಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದರೆ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ರಾಮನಗರದಲ್ಲಿ ಸದ್ಯದಲ್ಲಿಯೇ ಜೆಡಿಎಸ್ ಕಚೇರಿಯನ್ನು ತೆರೆಯಲಾಗುವುದು. ಅನಿತಾ ಕುಮಾರಸ್ವಾಮಿ ಅವರು ಮನೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಮುಖಂಡರಾದ ಪಾಪಣ್ಣ, ರಕ್ಷಿತ್ ದೇವೇಗೌಡ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು