ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ: ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

ಕಾಡುಪ್ರಾಣಿಗಳ ಉಪಟಳ ತಡೆಯಲು ವಿಫಲ
Published 17 ಮೇ 2024, 6:15 IST
Last Updated 17 ಮೇ 2024, 6:15 IST
ಅಕ್ಷರ ಗಾತ್ರ

ಕನಕಪುರ: ತಾಲ್ಲೂಕಿನಲ್ಲಿ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗಿದ್ದು ರೈತರ ಜೀವನ ಕಷ್ಟಕರವಾಗಿದೆ, ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ನೆರವಿಗೆ ಬರುತ್ತಿಲ್ಲ’ ಎಂದು ಆರೋಪಿಸಿ ರೈತ ಸಂಘ ಮತ್ತು ಪ್ರಗತಿಪರ ಸಂಘಟನೆ ಗುರುವಾರ ಅರಣ್ಯ ಇಲಾಖೆ ವಿರುದ್ಧದ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರು ನಗರ ಚನ್ನಬಸಪ್ಪ ವೃತ್ತದಿಂದ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಮುಂಭಾಗ ಆನೆಗಳು ನಾಶಗೊಳಿಸಿರುವ ತೆಂಗಿನ ಸಸಿಗಳನ್ನು ಗುಡ್ಡೆ ಹಾಕಿ ಅರಣ್ಯ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದರು.

ರೈತ ಸಂಘದ ರಾಜ್ಯ ಸಂಚಾಲಕ ಮುನಿರಾಜು ಮಾತನಾಡಿ, ಕಾಡು ಪ್ರಾಣಿಗಳು ಮತ್ತು ಕಾಡಾನೆಗಳು ನಿರಂತರವಾಗಿ ದಾಳಿ ನಡೆಸಿ ರೈತರ ಬೆಳೆದ ಫಸಲನ್ನು ನಾಶ ಮಾಡುತ್ತಿವೆ. ದೀರ್ಘಕಾಲ ರೈತರಿಗೆ ಫಸಲು ಕೊಡುವ ಆರ್ಥಿಕವಾಗಿ ಶಕ್ತಿ ತುಂಬುವ ತೆಂಗು ಮತ್ತು ಮಾವಿನ ಮರಗಳು ಕಾಡಾನೆ ದಾಳಿಗೆ ಬಲಿಯಾಗುತ್ತಿವೆ. ಕಾಡು ಪ್ರಾಣಿಗಳ ದಾಳಿಗೆ ಕೇವಲ ರೈತರ ಫಸಲು ನಾಶವಾಗದೆ, ರೈತರೂ ಬಲಿಯಾಗುತ್ತಿದ್ದಾರೆ. ರೈತ ಸಂಘವು ಕಾಡಾನೆ ದಾಳಿ ತಡೆಗಟ್ಟುವಂತೆ ಹಲವು ಬಾರಿ ಒತ್ತಾಯಿಸಿ ಇಲಾಖೆಗೆ ಮನವಿ ಮಾಡಿದ್ದರೂ ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸುತ್ತಿಲ್ಲ, ಕಾಡಾನೆಗಳನ್ನು ತಡೆಗಟ್ಟುತ್ತಿಲ್ಲ ಎಂದು ದೂರಿದರು.

ಪ್ರಗತಿಪರ ಸಂಘಟನೆ ಕುಮಾರಸ್ವಾಮಿ, ವಕೀಲ ಜೈರಾಮೇಗೌಡ ಮಾತನಾಡಿ, ಕಾಡು ಪ್ರಾಣಿಗಳು ಮತ್ತು ಕಾಡಾನೆಗಳು ದಾಳಿ ನಡೆಸಿ  ಬೆಳೆಗಳನ್ನು ನಾಶ ಮಾಡಿ, ರೈತರ ಬದುಕನ್ನು ಕಿತ್ತುಕೊಳ್ಳುತ್ತಿವೆ. ಅರಣ್ಯ ಇಲಾಖೆಯ ಹಿರಿಯ ಮತ್ತು ಉನ್ನತ ಅಧಿಕಾರಿಗಳು ತಾಲ್ಲೂಕಿಗೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಕಾಡಾನೆ ದಾಳಿಗೆ ಶಾಶ್ವತ ಪರಿಹಾರವನ್ನು ದೊರಕಿಸಬೇಕು. ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತವು ಕ್ರಮಕ್ಕೆ ಮುಂದಾಗಿ ರೈತರ ರಕ್ಷಣೆಗೆ ಧಾವಿಸಬೇಕು. ಆ ಕೆಲಸವನ್ನು ಇಂದೇ ಮಾಡಬೇಕು ಎಂದು ಪಟ್ಟು ಹಿಡಿದರು.

ಪ್ರತಿಭಟನಕಾರರ ಮನವಿ  ಸ್ವೀಕರಿಸಿದ ತಹಶೀಲ್ದಾರ್‌ ಡಾ.ಸ್ಮಿತಾ ರಾಮ್‌ ಮಾತನಾಡಿ, ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ರೈತರಿಗೆ ಆಗುತ್ತಿರುವ ಸಮಸ್ಯೆಯು ತಮ್ಮ ಅರಿವಿಗೆ ಬಂದಿದ್ದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಲಾಗುವುದು. ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯ ನಂತರ ತಮ್ಮ ಒತ್ತಾಯದ ಮನವಿ ಪತ್ರವನ್ನು ತಹಶೀಲ್ದಾರ್‌ ಡಾ.ಸ್ಮಿತಾರಾಮ್‌ ಗೆ ಸಲ್ಲಿಸಿದರು
ಪ್ರತಿಭಟನೆಯ ನಂತರ ತಮ್ಮ ಒತ್ತಾಯದ ಮನವಿ ಪತ್ರವನ್ನು ತಹಶೀಲ್ದಾರ್‌ ಡಾ.ಸ್ಮಿತಾರಾಮ್‌ ಗೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT