ಬುಧವಾರ, ಆಗಸ್ಟ್ 10, 2022
20 °C
ನೊಂದ ಮನಸ್ಸುಗಳ ಗಟ್ಟಿ ಧ್ವನಿಯಾಗಿದ್ದ ಕವಿಗೆ ಜಿಲ್ಲೆಯ ಜನರ ಅಶ್ರುತರ್ಪಣ

ಮಾಗಡಿ ಮಣ್ಣಿನ ಹೆಮ್ಮೆ ಕನ್ನಡದ ಕವಿ ಡಾ. ಸಿದ್ದಲಿಂಗಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ/ಮಾಗಡಿ: ನಾಡಿನ ಸಾಹಿತ್ಯ ಮತ್ತು ಸಾಮಾಜಿಕ ವಲಯದಲ್ಲಿ ಸಮಾನತೆಗಾಗಿ ನಡೆದ ಹೋರಾಟದ ಮುಂಚೂಣಿ ನಾಯಕರಾಗಿದ್ದ ಡಾ.ಸಿದ್ದಲಿಂಗಯ್ಯ ಮಾಗಡಿ ಮಣ್ಣಿನ ವಿಶಿಷ್ಟ ಪ್ರತಿಭಾವಂತರು.

ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ (ತಾಯಿಯ ತವರೂರು) 1954ರ ಫೆಬ್ರುವರಿ 2ರಂದು ಸಿದ್ದಲಿಂಗಯ್ಯ ಜನಿಸಿದರು. ತಂದೆ ದೇವಯ್ಯ ಮತ್ತು ತಾಯಿ ವೆಂಕಟಮ್ಮ ಅವರ ಮೂವರು ಪುತ್ರರ ಪೈಕಿ ಇವರೇ ಹಿರಿಯ ಮಗ. ತಂದೆ ದೇವಯ್ಯ ಮಾಗಡಿ ಪಟ್ಟಣದ ಊರುಹಳ್ಳಿ (ಇಂದಿನ ಹೊಸಪೇಟೆ) ನಿವಾಸಿಗಳು.

ಹೊಸಪೇಟೆ ಬಿಸಿಲು ಮಾರಮ್ಮ ದೇವಾಲಯದ ಚಾವಡಿಯಲ್ಲಿ ಗುರುಗಳಾದ ಚಿನ್ನಾಭೋವಿ ಮತ್ತು ನಾಗಪ್ಪಾಚಾರ್ ಅವರಿಂದ ಬಾಲ್ಯದ ಶಿಕ್ಷಣ ಪಡೆದರು. ಮಾಜಿ ಸಚಿವ.ಎಚ್.ಎಂ.ರೇವಣ್ಣ, ನಾಗಯ್ಯ, ಸೀನಯ್ಯ, ಗಂಗಣ್ಣ ಆಚಾರ್ ಅವರ ಬಾಲ್ಯದ ಗೆಳೆಯರು. ನಂತರ ಸಿದ್ದಲಿಂಗಯ್ಯ ಬೆಂಗಳೂರಿನ ಶ್ರೀರಾಮಪುರಕ್ಕೆ ತೆರಳಿದರು.

ಬೆಂಗಳೂರಿನಲ್ಲಿ ವಾಸವಿದ್ದರೂ ಸಿದ್ದಲಿಂಗಯ್ಯ ಹುಟ್ಟಿದ ಊರಿನ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದರು. ಆಗಾಗ್ಗೆ ಬಂದು ಇಲ್ಲಿ ಸಂತಸದಿಂದ ಕಾಲ ಕಳೆದು ಹೋಗುತ್ತಿದ್ದರು. ಸಾವನದುರ್ಗ, ಮಂಚನಬೆಲೆ, ಸಿದ್ದೇದೇವರ ಬೆಟ್ಟ, ಕಲ್ಯಾ ಬೆಟ್ಟದಲ್ಲಿನ ಬಹುಭಾಷಾ ವಿಶಾರದ ಪಾಲ್ಕುರಿಕೆ ಸೋಮನಾಥನ ಸಮಾಧಿ ಮತ್ತು ಅಕ್ಬರೀಯ ಕಾಳಿದಾಸ ಸಂಗೀತಕಲಾನಿಧಿ ಪಂಡರೀಕ ವಿಠ್ಠಲನ ಜನ್ಮಸ್ಥಳ ಸಾತನೂರು ಅವರ ನೆಚ್ಚಿನ ಸ್ಥಳಗಳು. ಬೆಟ್ಟಗುಡ್ಡಗಳಿಂದ ಆವೃತ್ತವಾಗಿರುವ ಪಣಕನಕಲ್ಲು ಗ್ರಾಮದ ಸಮೀಪ ಇರುವ ಪಿತ್ರಾರ್ಜಿತ ಭೂಮಿಯಲ್ಲಿ ಸಹೋದರ ಕೃಷಿ ಅಧಿಕಾರಿ ಶಿವಶಂಕರ್ ಸಹಯೋಗದಲ್ಲಿ ವ್ಯವಸಾಯ ಮಾಡುತ್ತಿದ್ದರು.

‘ಮಾಗಡಿಗೆ ಬಂದಾಗಲೆಲ್ಲ ಅವರೊಟ್ಟಿಗೆ ಗೆಳೆಯರ ಗುಂಪು ಇರುತ್ತಿತ್ತು. ಆದರೂ ಅವರು ತಮ್ಮ ಸಾಹಿತ್ಯ ರಚನೆಗೆ ಏಕಾಂತದ ಸ್ಥಳವನ್ನು ಆಯ್ದುಕೊಳ್ಳುತ್ತಿದ್ದರು. ಸಾವನದುರ್ಗದಲ್ಲಿನ ಅರಣ್ಯ ಇಲಾಖೆ ಪ್ರವಾಸಿ ಮಂದಿರ ಬಲು ಪ್ರಶಾಂತವಾಗಿದ್ದು, ಅಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದರು. ಕೆಲವೊಮ್ಮೆ ವಾರಗಟ್ಟಲೆ ಉಳಿದು ಬರವಣಿಗೆ ಮಾಡುತ್ತಿದ್ದರು. ಸಿದ್ದಲಿಂಗಯ್ಯ ಭೋಜನ ಪ್ರಿಯರು ಹೌದು. ನಾಟಿ ಕೋಳಿ ಅವರ ಬಲು ಇಷ್ಟದ ಊಟ’ ಎಂದು ಮಾಗಡಿಯಲ್ಲಿನ ಸಿದ್ದಲಿಂಗಯ್ಯರ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ.

ಸನ್ಮಾನ: ಎಚ್.ಎಂ. ರೇವಣ್ಣ ಸಚಿವರಾಗಿದ್ದ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಆಯ್ಕೆಯಾದರು. ಆಗ ಅಂದಿನ ಶಾಸಕ ಎಚ್.ಸಿ.ಬಾಲಕೃಷ್ಣ ಮಾಗಡಿಯಲ್ಲಿ ಅದ್ದೂರಿ ಸಮಾರಂಭ ನಡೆಸಿ, ತವರಿನಿಂದ ಪ್ರೀತಿಯ ಸನ್ಮಾನ ನೆರವೇರಿಸಿದರು.

ತೋಟದಮನೆ ಗಿರೀಶ್ ಅವರ ಕವನ ಸಂಕಲನ ಬಿಡುಗಡೆ, ಪತ್ರಕರ್ತ ಗಂಗಾಧರ್ ಶ್ರದ್ಧಾಂಜಲಿ ಸಭೆ ಸೇರಿದಂತೆ ಇಲ್ಲಿನ ಅನೇಕ ಕಾರ್ಯಕ್ರಮಗಳಲ್ಲಿ ಸಿದ್ದಲಿಂಗಯ್ಯ ಭಾಗಿಯಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು