ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ: ಕೋಡಂಬಹಳ್ಳಿ ಶಾಲೆ ಅವ್ಯವಸ್ಥೆಯ ಆಗರ

ಸೌಕರ್ಯ ಇಲ್ಲದೆ ವಿದ್ಯಾರ್ಥಿಗಳ ಪರದಾಟ l ಅಧಿಕಾರಶಾಹಿ–ಜನಪ್ರತಿನಿಧಿಗಳ ನಿರ್ಲಕ್ಷ್ಯ
Last Updated 27 ಜುಲೈ 2022, 4:01 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಸೋರುವ ಕಟ್ಟಡ, ಕಳಚಿ ಬೀಳುವ ಮೇಲ್ಚಾವಣಿ, ಬಿರುಕು ಬಿಟ್ಟ ಗೋಡೆಗಳು, ಗೆದ್ದಲು ಹಿಡಿದ ಬಾಗಿಲುಗಳು, ಶಿಕ್ಷಕರ ಕೊರತೆ, ಅಗತ್ಯವಿ ರುವಷ್ಟು ಶೌಚಾಲಯವಿಲ್ಲದೆ ಬಯಲನ್ನು ಆಶ್ರಯಿಸಿರುವ ಮಕ್ಕಳು...’

ಇದು ತಾಲ್ಲೂಕಿನ ಕೋಡಂಬ ಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಥೆ–ವ್ಯಥೆ.

75ಕ್ಕೂ ಹೆಚ್ಚು ವರ್ಷಗಳ ಹಿಂದೆ ಕಟ್ಟಿರುವ ಶಾಲಾ ಕಟ್ಟಡವು ಕುಸಿಯುವ ಹಂತ ತಲುಪಿದೆ. ಇಂತಹ ಕಟ್ಟಡದಲ್ಲಿಯೇ ಮಕ್ಕಳು ಪಾಠ ಕಲಿಯುವ ಅನಿವಾರ್ಯ ಇದೆ. ಎಲ್‌ಕೆಜಿಯಿಂದ 7ನೇ ತರಗತಿವರೆಗೆ 356 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಈ ಶಾಲೆ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ದಿವ್ಯನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ತೀರಾ ಹಳೆಯದಾದ ಕಟ್ಟಡದಲ್ಲಿ ಸುಮಾರು 12 ಕೊಠಡಿಗಳಿವೆ. ಇದರಲ್ಲಿ ಒಂದು ಕೊಠಡಿ ಬೀಳುವ ಹಂತ ತಲುಪಿರುವ ಕಾರಣ ಅದರ ಬಾಗಿಲು ಮುಚ್ಚಲಾಗಿದೆ. ಇನ್ನುಳಿದ ಕೊಠಡಿಗಳಲ್ಲಿ ಮಳೆ ಬಂದರೆ ಮೇಲ್ಚಾವಣಿಯಿಂದ ನೀರು ಸೋರುತ್ತದೆ. ಚುರುಕಿ ಹಾಳಾ ಗಿದ್ದು, ಇದನ್ನು ತೇಪೆ ಹಾಕಲಾಗಿದ್ದರೂ ಸೋರುವ ಸಮಸ್ಯೆ ಮಾತ್ರ ನಿಂತಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ.

ಶಿಕ್ಷಕರಿಲ್ಲ: ಶಾಲೆಯಲ್ಲಿ ಎಲ್‌ಕೆಜಿ ಯಿಂದ 7ನೇ ತರಗತಿವರೆಗೆ ಇರುವ ತರಗತಿಗಳಿಗೆ ಕಾರ್ಯ ನಿರ್ವಹಿಸುತ್ತಿರುವುದು ಮುಖ್ಯಶಿಕ್ಷಕರೂ ಸೇರಿ ದಂತೆ ಕೇವಲ 9 ಶಿಕ್ಷಕರು ಮಾತ್ರ. ಮಂಜೂ ರಾಗಿರುವ 13 ಶಿಕ್ಷಕರ ಪೈಕಿ 4 ಶಿಕ್ಷಕರ ಕೊರತೆಯಿದೆ. ಅದರಲ್ಲಿಯೂ ಒಬ್ಬ ಶಿಕ್ಷಕರು ಇದೇ ತಿಂಗಳು ನಿವೃತ್ತಿಯಾಗಲಿದ್ದಾರೆ.

‘ಸರ್ಕಾರ ಇಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಿದೆ. ಆದರೂ, ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಗೆ ಬಹಳ ತೊಂದರೆಯಾಗುತ್ತಿದೆ. ಮುಖ್ಯವಾಗಿ ವಿಜ್ಞಾನ, ಗಣಿತ, ಆಂಗ್ಲ ಭಾಷಾ ಶಿಕ್ಷಕರ ಕೊರತೆಯಿದೆ. ಇದನ್ನು ಶೀಘ್ರವಾಗಿ ಪರಿಹರಿಸಬೇಕು’ ಎಂದು ಮುಖ್ಯಶಿಕ್ಷಕ ಚಲುವರಾಜು ಮನವಿ ಮಾಡಿದರು.

ಶಾಲೆಯಲ್ಲಿ ಇರುವ ಶೌಚಾಲಯದಲ್ಲಿ ಕೇವಲ 6 ಕೊಠಡಿಗಳಿದ್ದು, 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಕಾರಣ ಇದು ಸಾಕಾಗುತ್ತಿಲ್ಲ. ಕನಿಷ್ಠ 20 ಕೊಠಡಿಗಳಾದರೂ ಬೇಕು. ಶೌಚಾಲಯಕ್ಕೆ ನೀರಿನ ಕೊರತೆ ಇಲ್ಲ. ಆದರೆ, ಕಡಿಮೆ ಶೌಚಾಲಯಗಳು ಇವೆ. ಇದರಿಂದ ಮಕ್ಕಳು ಬಯಲು ಶೌಚಾಲಯವನ್ನು ಅವಲಂಬಿಸುವಂತಾಗಿದೆ ಎಂಬುದು ಶಿಕ್ಷಕರ ಅಳಲು.

ಶಾಲೆಯಲ್ಲಿ 350ಕ್ಕೂ ಹೆಚ್ಚು ದಾಖಲಾತಿ ಇದ್ದರೂ ಮಕ್ಕಳಿಗೆ ಕುಡಿ ಯುವ ನೀರಿನ ವ್ಯವಸ್ಥೆ ಇಲ್ಲ. ಮಕ್ಕಳಿಗಾಗಿ ಮುಖ್ಯಶಿಕ್ಷಕರು ಕ್ಯಾನ್‌ಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ.

ಹಲವಾರು ಸರ್ಕಾರಿ ಶಾಲೆಗಳಿಗೆ ಸರ್ಕಾರ ಫಿಲ್ಟರ್ ನೀರಿನ ವ್ಯವಸ್ಥೆ ಮಾಡಿದೆ. ಆದರೆ, ನಮ್ಮ ಶಾಲೆಗೆ ಈ ವ್ಯವಸ್ಥೆ ಮಾಡಿಲ್ಲ. ಇದರ ಬಗ್ಗೆ ಅಧಿಕಾರಿಗಳ ಗಮನ ಸೆಳೆದಿದ್ದರೂ ಪ್ರಯೋಜನವಾಗಿಲ್ಲ ಎಂದು ಶಿಕ್ಷಕರೊಬ್ಬರು ತಿಳಿಸಿದರು.

‘ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ ಶಾಲೆ ಉಳಿಸಿ ಎಂದು ಸರ್ಕಾರ ಬೊಬ್ಬೆ ಹೊಡೆಯುತ್ತದೆ. ಆದರೆ, ಸರ್ಕಾರಿ ಶಾಲೆಗಳಿಗೆ ಮಾತ್ರ ಸೌಲಭ್ಯ ನೀಡುವುದಿಲ್ಲ. ಕಳಚಿ ಬೀಳುತ್ತಿರುವ ಕಟ್ಟಡದಲ್ಲಿ ಮಕ್ಕಳು ಹೇಗೆ ತಾನೆ ಶಿಕ್ಷಣ ಕಲಿಯಲು ಸಾಧ್ಯ. ಪೋಷಕರು ಮಕ್ಕಳನ್ನು ಇಂತಹ ಭೀತಿಯುಂಟು ಮಾಡುವ ಶಾಲೆಗಳಿಗೆ ಹೇಗೆ ತಾನೇ ಸೇರಿಸುತ್ತಾರೆ’ ಎಂದು ಪೋಷಕರಾದ ಜಯರಾಮು, ಸಿದ್ದೇಗೌಡ ಆಕ್ರೋಶ ವ್ಯಕ್ತಪಡಿಸಿದರು.

‘ನೂತನ ಶಾಲಾ ಕಟ್ಟಡ ನಿರ್ಮಾಣ ಮಾಡಲು ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಂಪನಿ ಭರವಸೆ ನೀಡಿದೆ. ಆದರೆ, ಅದು ಇನ್ನೂ ಕಾರ್ಯಗತವಾಗಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕಟ್ಟಡದ ದುಃಸ್ಥಿತಿ ಬಗ್ಗೆ ಮನವಿ ಪತ್ರ ನೀಡಿದ್ದೇವೆ. ನೂತನ ಕಟ್ಟಡದ ನಿರೀಕ್ಷೆಯಲ್ಲಿದ್ದೇವೆ’ ಎಂದು ಮುಖ್ಯಶಿಕ್ಷಕ ಚಲುವರಾಜು ತಿಳಿಸಿದರು.

ಸರ್ಕಾರ ಆದಷ್ಟು ಶೀಘ್ರ ಹಳೆಯ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಮಾಡಬೇಕು. ಕಟ್ಟಡ ಕುಸಿದು ಅನಾಹುತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕು ಎಂಬುದು ಗ್ರಾಮಸ್ಥರು, ಪೋಷಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT