ಮಂಗಳವಾರ, ಮಾರ್ಚ್ 31, 2020
19 °C
ನಾಲ್ಕರಲ್ಲಿ ಮೂರು ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯ; ‘ಮೈತ್ರಿ’ ಮುರಿದು ಪಕ್ಷ ಸಂಘಟನೆ ಮಾಡುತ್ತಾರಾ ಡಿಕೆಶಿ 

ಕೆಪಿಸಿಸಿ ಸಾರಥಿ ಡಿ.ಕೆ.ಶಿವಕುಮಾರ್‌ಗೆ ತವರಿನಲ್ಲೇ ಸವಾಲು!

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರಾಗಿ ರಾಜ್ಯದಲ್ಲಿಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿರುವ ಡಿ.ಕೆ.ಶಿವಕುಮಾರ್ ಅವರಿಗೆ ತವರು ಜಿಲ್ಲೆಯಲ್ಲೇ ಪಕ್ಷ ಸಂಘಟನೆಯ ಸವಾಲು ಇದೆ.

ಹಳೆಯ ಬೆಂಗಳೂರು ಗ್ರಾಮಾಂತರ ಅವಿಭಜಿತ ಹಾಗೂ ಈಗಿನ ರಾಮನಗರ ಜಿಲ್ಲೆಯು ದಶಕಗಳಿಂದಲೂ ಕಾಂಗ್ರೆಸ್‌–ಜೆಡಿಎಸ್‌ ನಡುವಿನ ಗುದ್ದಾಟಕ್ಕೆ ಸಾಕ್ಷಿಯಾಗುತ್ತಲೇ ಬಂದಿದೆ. ಇಲ್ಲಿ ಒಂದೊಮ್ಮೆ ಕೈ ಪಾಳಯ, ಮತ್ತೊಮ್ಮೆ ಜೆಡಿಎಸ್‌ ಕೈ ಮೇಲಾಗುವುದು ಸಾಮಾನ್ಯ.

ಸದ್ಯಕ್ಕೆ ಇಲ್ಲಿನ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಜೆಡಿಎಸ್‌ ಶಾಸಕರೇ ಇದ್ದಾರೆ. ಡಿಕೆಶಿ ಜಿಲ್ಲೆಯಲ್ಲಿ ತಮ್ಮ ಪಕ್ಷವನ್ನು ಪ್ರತಿನಿಧಿಸುವ ಏಕೈಕ ಶಾಸಕರಾಗಿದ್ದಾರೆ. ಕನಕಪುರದಲ್ಲಿ (ಹಿಂದಿನ ಸಾತನೂರು ಕ್ಷೇತ್ರ ಒಳಗೊಂಡು) ಶಿವಕುಮಾರ್ ಸತತ ಏಳು ಬಾರಿ ಗೆಲ್ಲುವ ಮೂಲಕ ಸೋಲಿಲ್ಲದ ಸರದಾರರಾಗಿದ್ದಾರೆ. ಇನ್ನಷ್ಟು ವರ್ಷವೂ ಅವರ ಖುರ್ಚಿ ಅಲುಗಾಡುವ ಯಾವ ಲಕ್ಷಣಗಳೂ ಇಲ್ಲ. ಸ್ಥಳೀಯ ನಗರಸಭೆಯಲ್ಲೂ ಕಾಂಗ್ರೆಸ್ ಕ್ಲೀನ್‌ ಸ್ವೀಪ್‌ ಮಾಡಿಕೊಂಡಿದೆ. ಮೈತ್ರಿಗೆ ಶರಣಾದ ಜೆಡಿಎಸ್‌ ಕೇವಲ ನಾಲ್ಕು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲೂ ಕಾಂಗ್ರೆಸ್ ಅಧಿಕಾರದಲ್ಲಿ ಇದೆ.

ರಾಮನಗರದಲ್ಲಿ ಈಚೆಗೆ ಕಾಂಗ್ರೆಸ್‌ ಶಕ್ತಿ ಕುಂದುತ್ತಾ ಇದೆ. ಜೆಡಿಎಸ್ ಜೊತೆಗಿನ ಮೈತ್ರಿ ರಾಜಕಾರಣ ಇದಕ್ಕೆ ಕಾರಣ ಎನ್ನುವುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯ. ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪ್ರಚಂಡ ಗೆಲುವಿನಲ್ಲಿ ಕಾಂಗ್ರೆಸ್‌ ಪಾಲು ಹೆಚ್ಚಿತ್ತು. ಆದರೆ ಅದರಿಂದ ಪಕ್ಷಕ್ಕೆ ಹೆಚ್ಚಿನ ಲಾಭ ಆಗಿಲ್ಲ. ಕಾಂಗ್ರೆಸ್ ಮುಖಂಡರಿಗೆ ಯಾವ ವೇದಿಕೆಗಳಲ್ಲೂ ಜಾಗ ದೊರೆಯುತ್ತಿಲ್ಲ.

ನಗರಸಭೆ ಆಡಳಿತಾವಧಿ ಮುಗಿದು ವರ್ಷವಾಗುತ್ತಲಿದ್ದು, ಅಲ್ಲಿಯೂ ಪಕ್ಷ ಅಧಿಕಾರದಲ್ಲಿಲ್ಲ. ತಾಲ್ಲೂಕು ಪಂಚಾಯಿತಿಯಲ್ಲಿ ಮಾತ್ರ ಕಾಂಗ್ರೆಸ್‌ನ ಅಧ್ಯಕ್ಷರು ಇದ್ದಾರೆ. ಬಿಡದಿ ಪುರಸಭೆಯ ಸ್ಥಿತಿಯೂ ಡೋಲಾಯಮಾನವಾಗಿದ್ದು, ಸದ್ಯ ಅಧ್ಯಕ್ಷರು ಇಲ್ಲ.

‘ಮೈತ್ರಿ’ ರಾಜಕಾರಣದ ಸಲುವಾಗಿ ಕಳೆದ ಉಪಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನೇ ಹಾಕಲಿಲ್ಲ. ಹೀಗಾಗಿ ಮುಂದಿನ ಚುನಾವಣೆಗೆ ಈಗಿನಿಂದ ಆದರೂ ಸಿದ್ಧತೆ ನಡೆಸಿ, ಪಕ್ಷವನ್ನು ಮತ್ತೆ ಸಂಘಟಿಸುವ ಕೆಲಸ ಆಗಬೇಕಿದೆ. ಮಾಗಡಿಯಲ್ಲಿ ಸದ್ಯಕ್ಕೆ ಜೆಡಿಎಸ್‌ನದ್ದೇ ಮೈಲುಗೈ. ಈಚೆಗೆ ನಡೆದ ಪುರಸಭೆಯಲ್ಲಿ ಕೈ ಪಾಳಯ ಹಿನ್ನಡೆ ಅನುಭವಿಸಿದೆ. ಇಲ್ಲಿಯೂ ಜೆಡಿಎಸ್‌ನ ಶಾಸಕರು ಇದ್ದಾರೆ. ತಾಲ್ಲೂಕು ಪಂಚಾಯಿತಿಯಲ್ಲಿ ಮೈತ್ರಿ ರಾಜಕಾರಣದ ಫಲವಾಗಿ ಅಧ್ಯಕ್ಷ ಹುದ್ದೆ ಸಿಕ್ಕಿದೆ. ಎಚ್‌.ಸಿ.ಬಾಲಕೃಷ್ಣ, ಎಚ್‌.ಎಂ. ರೇವಣ್ಣರಂಥ ನಾಯಕರು ಇದ್ದರೂ ಕಾಂಗ್ರೆಸ್ ಇಲ್ಲಿ ನಿರೀಕ್ಷಿತ ಸಾಧನೆ ಮಾಡಲು ಆಗಿಲ್ಲ.

ಜಿ.ಪಂ.ನಲ್ಲಿ ಪ್ರಾಬಲ್ಯ: ಜಿಲ್ಲಾ ಪಂಚಾಯಿತಿಯಲ್ಲಿ ಮಾತ್ರ ಕಾಂಗ್ರೆಸ್‌ ಸಂಪೂರ್ಣ ಅಧಿಕಾರಹೊಂದುವ ಮೂಲಕ ಸಮಾಧಾನ ಪಟ್ಟುಕೊಳ್ಳುತ್ತಿದೆ. ಇಲ್ಲಿ ಪಕ್ಷಕ್ಕೆ ಸ್ಪಷ್ಟ ಬಹುಮತ ಇದ್ದು, ಕಳೆದ ನಾಲ್ಕು ವರ್ಷದಿಂದಲೂ ಕಾಂಗ್ರೆಸ್‌ನವರೇ ಅಧ್ಯಕ್ಷ–ಉಪಾಧ್ಯಕ್ಷರಾಗಿದ್ದಾರೆ.

ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಪಾಡೇನು?
ಕಳೆದ ವಿಧಾನಸಭೆ ಚುನಾವಣೆಯ ಬಳಿಕ ರಾಜ್ಯ ರಾಜಕಾರಣದಲ್ಲಿ ಆದ ಬದಲಾವಣೆಯಂತೆ ಜಿಲ್ಲೆಯಲ್ಲೂ ಕಾಂಗ್ರೆಸ್–ಜೆಡಿಎಸ್ ಮೈತ್ರಿ ಆಗಿತ್ತು. ಅದರಲ್ಲೂ ಎರಡು ಬದ್ಧ ರಾಜಕೀಯ ವೈರಿ ಕುಟುಂಬಗಳು ಕೈ ಜೋಡಿಸಿದ್ದು ಎಲ್ಲರ ಹುಬ್ಬೇರಿಸಿತ್ತು. ನಂತರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕೆಲವು ಕಡೆ ಜೆಡಿಎಸ್ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಅಧಿಕಾರ ಹಂಚಿಕೊಂಡಿದೆ.

ಪಕ್ಷದ ಹಿತದೃಷ್ಟಿಯಿಂದ ಮೈತ್ರಿ ಮುರಿದುಕೊಂಡು ಸ್ವತಂತ್ರವಾಗಿ ಸಂಘಟನೆ ಮಾಡಲು ಇದು ಸಕಾಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ಮೊದಲಾದವರು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ವಿಚಾರದಲ್ಲಿ ಡಿಕೆಶಿ ಯಾವ ರೀತಿ ದಿಟ್ಟ ಹೆಜ್ಜೆ ಇಡುತ್ತಾರೆ ಎಂಬ ಕುತೂಹಲ ಅವರ ಪಕ್ಷದ ಕಾರ್ಯಕರ್ತರದ್ದು.

ಚನ್ನಪಟ್ಟಣದಲ್ಲಿ ಸಿಗುತ್ತಾ ನೆಲೆ?
ಕುಮಾರಸ್ವಾಮಿ ಪ್ರವೇಶದಿಂದಾಗಿ ಸದ್ಯ ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಪಾಲಾಗಿದ್ದು, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ತಮ್ಮ ಕ್ಷೇತ್ರದಲ್ಲಿ ಕಮಲಕ್ಕೆ ನೆಲೆ ಒದಗಿಸುವ ಪ್ರಯತ್ನದಲ್ಲಿ ಇದ್ದಾರೆ. ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಪಕ್ಷಾಂತರ ಪರ್ವ ನಡೆದಿದ್ದು, ಇದರಿಂದ ಕಾಂಗ್ರೆಸ್‌ಗೆ ನಷ್ಟವೇ ಆಗಿದೆ. ಕ್ಷೇತ್ರದಲ್ಲಿ ಕೈ ಪಾಳಯಕ್ಕೆ ಸದ್ಯ ಸಮರ್ಥ ನಾಯಕರೇ ಕಾಣುತ್ತಿಲ್ಲ. ಹೀಗಾಗಿ ಇಲ್ಲಿ ಪಕ್ಷ ಸಂಘಟನೆಯ ಜೊತೆಗೆ ನಾಯಕರನ್ನು ಬೆಳೆಸುವ ಜವಾಬ್ದಾರಿಯೂ ಡಿಕೆಶಿ ಹೆಗಲ ಮೇಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು