ರಾಮನಗರ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ಟೋಲ್ ಉಳಿಸುವುದಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ಸೊಂದು ನಡುರಸ್ತೆಯಲ್ಲಿ ಯೂ-ಟರ್ನ್ ತೆಗೆದುಕೊಂಡು ಸಂಚರಿಸಿರುವ ಘಟನೆ ಬಿಡದಿ ಬಳಿ ಸೋಮವಾರ ನಡೆದಿದೆ.
ಕೆ.ಎ– 42, ಎಫ್– 2233 ಸಂಖ್ಯೆಯ ಬಸ್ ಚಾಲಕ ಟೋಲ್‌ಗೆ ಅನತಿ ದೂರದಲ್ಲಿ ಏಕಾಏಕಿ ಯೂ ಟರ್ನ್ ತೆಗೆದುಕೊಂಡು, ಸವಾರರಲ್ಲಿ ಆತಂಕ ಸೃಷ್ಟಿಸಿದ್ದಾನೆ. ಈ ದೃಶ್ಯವನ್ನು ಗಮನಿಸಿದ ಕಾರು ಚಾಲಕರೊಬ್ಬರು, ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ವಿಡಿಯೊವನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಾರಿಗೆ ಹಾಗೂ ಪೊಲೀಸ್ ಇಲಾಖೆ ಖಾತೆಗಳಿಗೆ ಟ್ಯಾಗ್ ಮಾಡಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಾಗಿಲ್ಲ.
ಕೆಲ ದಿನಗಳ ಹಿಂದೆಯೂ ಕೆಎಸ್ಆರ್‌ಟಿಸಿ ಬಸ್ಸೊಂದು ಎಕ್ಸ್‌ಪ್ರೆಸ್ ವೇಯ ವಿರುದ್ಧ ದಿಕ್ಕಿನಲ್ಲಿ ಚಲಿಸಿತ್ತು. ಪ್ರಯಾಣಿಕರೊಬ್ಬರನ್ನು ಆ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆ ಮೇರೆಗೆ, ಬಿಡದಿ ಪೊಲೀಸರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.