ಶುಕ್ರವಾರ, ಫೆಬ್ರವರಿ 26, 2021
32 °C
26ರಂದು ಬೆಂಗಳೂರಿನಲ್ಲಿ ರೈತರ ಪರೇಡ್‌: ಬೆಂಬಲಕ್ಕೆ ಕುರುಬೂರು ಶಾಂತಕುಮಾರ್ ಮನವಿ

‘ರೈತರಿಂದಲೇ ಸರ್ಕಾರಗಳ ಸಮಾಧಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ರೈತರಿಗೆ ಸಮಾಧಿ ಕಟ್ಟಲು ಹೊರಟಿವೆ. ಅದಕ್ಕೆ ಪ್ರತಿಯಾಗಿ ರೈತರೂ ಹೋರಾಟಗಳ ಮೂಲಕ ಸರ್ಕಾರಗಳನ್ನು ಸಮಾಧಿ ಮಾಡುತ್ತಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

‘ಆರಂಭದಲ್ಲಿ ರೈತ ಚಳವಳಿಯನ್ನು ಕೇಂದ್ರ ಸರ್ಕಾರ ಹಗುರವಾಗಿ ಕಂಡಿತ್ತು. ಈಗ ಇದೇ ರೈತರ ಮುಂದೆ ಮಂಡಿಯೂರಿ ನಿಲ್ಲುತ್ತಿದೆ. ಕಂಪನಿ ಮಾಲೀಕರ ಹಿತರಕ್ಷಣೆಗಾಗಿ ಮಾಡಿದ ಕಾಯ್ದೆಗಳನ್ನು ಸರ್ಕಾರ ಇನ್ನಾದರೂ ಹಿಂಪಡೆಯಬೇಕು’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಹೋರಾಟದ ಭಾಗವಾಗಿ ಗಣರಾಜ್ಯೋತ್ಸವದ ದಿನ ಬೆಂಗಳೂರಿನಲ್ಲಿ ರೈತರು, ಶ್ರಮಿಕರಿಂದ ಪರೇಡ್‌ ಹಮ್ಮಿಕೊಳ್ಳಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಜನರು ಅಂದು ಟ್ರ್ಯಾಕ್ಟರ್, ಬೈಕ್, ಜೀಪ್‌ಗಳೊಂದಿಗೆ ಪರೇಡ್ ನಡೆಸಲಿದ್ದಾರೆ. ಒಂದು ವೇಳೆ ಪೊಲೀಸರು ರೈತರನ್ನು ತಡೆದಲ್ಲಿ ನಾವು ಇರುವ ಸ್ಥಳದಲ್ಲಿಯೇ ಧರಣಿ ಕೂರುತ್ತೇವೆ ಎಂದರು.

‘ಆರ್‌ಬಿಐ ನಿರ್ದೇಶನದ ಮೇರೆಗೆ ಎಸ್‌ಬಿಐ ಸೇರಿದಂತೆ ಕೆಲ ಬ್ಯಾಂಕುಗಳು ಒಡಿಎಫ್ ಸ್ಕೀಂನಲ್ಲಿ ರೈತರ ಬೆಳೆಸಾಲವನ್ನು ಅಲ್ಪ ಪಾವತಿಯೊಂದಿಗೆ ಮನ್ನಾ ಮಾಡುತ್ತಿವೆ. ಇದನ್ನು ಇತರ ಎಲ್ಲ ಬ್ಯಾಂಕುಗಳಿಗೂ ವಿಸ್ತರಿಸುವ ಜೊತೆಗೆ ಮನ್ನಾ ಅವಧಿಯನ್ನು ಇದೇ ಮಾರ್ಚ್‌ 31ರವರೆಗೆ ನೀಡಬೇಕು ಎಂದು ಕೋರಿದರು.

ಕರ್ನಾಟಕ ರೈತ ಸಂಘದ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಶಿವಕುಮಾರ್, ಖಜಾಂಚಿ ಎಂ.ಬಿ. ಚೇತನ್‌ ಹಾಗೂ ರೈತ ಮುಖಂಡರು ಇದ್ದರು.

ಸಚಿವರು ಅವಿವೇಕಿಗಳು

‘ರೈತ ಹೋರಾಟವನ್ನು ಕಾಂಗ್ರೆಸ್‌ ಬೆಂಬಲಿತ ಹೋರಾಟ ಎಂದು ಟೀಕಿಸುವ ಸಚಿವರು ಅವಿವೇಕಿಗಳು’ ಎಂದು ಶಾಂತಕುಮಾರ್ ಅಸಮಧಾನ ವ್ಯಕ್ತಪಡಿಸಿದರು. ‘ಹೋರಾಟಗಳಿಗೆ ವಿರೋಧ ಪಕ್ಷಗಳ ಬೆಂಬಲ ಸಹಜ. ಮಂತ್ರಿಗಳು ತಮ್ಮ ತೀಟೆ ತೀರಿಸಿಕೊಳ್ಳಲು ಮಾತನಾಡಬಾರದು’ ಎಂದರು.

‘ಮಾನಸಿಕವಾಗಿ ದುರ್ಬಲರಾದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವ ಕೃಷಿ ಸಚಿವರು, ರೈತರ ಆತ್ಮಬಲ ಹೆಚ್ಚಿಸಲು ಏನಾದರೂ ಕ್ರಮ ಕೈಗೊಂಡಿದ್ದಾರ’ ಎಂದು ಅವರು ಪ್ರಶ್ನಿಸಿದರು. ‘ಕೃಷಿ ಸಚಿವರು ಪ್ರಚಾರಕ್ಕಾಗಿ ಉಳುಮೆ, ನಾಟಿ ಮಾಡುವುದನ್ನು ಬಿಟ್ಟು ರೈತರ ಬಗ್ಗೆ ಕಾಳಜಿ ವಹಿಸಲಿ’ ಎಂದು ಸಲಹೆ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು