ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮನುಜಮತ ತತ್ವ ಸಾರಿದ ಕುವೆಂಪು: ಚನ್ನಕೇಶವ

Published 2 ಜನವರಿ 2024, 14:48 IST
Last Updated 2 ಜನವರಿ 2024, 14:48 IST
ಅಕ್ಷರ ಗಾತ್ರ

ರಾಮನಗರ: ‘ಯುಗದ ಕವಿ, ಜಗದ ಕವಿ, ರಸ ಋಷಿ, ಮಾನವತಾವಾದಿ, ಆಧುನಿಕ ವಾಲ್ಮೀಕಿ, ಸಂತಕವಿ ಹಾಗೂ ಪ್ರಕೃತಿ ಕವಿ ಎಂದು ಕುವೆಂಪು ಅವರನ್ನು ಕರೆಯಲಾಗುತ್ತದೆ. ಮನುಜಮತ ವಿಶ್ವಪಥವನ್ನು ಜಗತ್ತಿಗೆ ಸಾರಿದ ಅವರು 20ನೇ ಶತಮಾನದ ಮಹಾಕವಿಯಾಗಿದ್ದಾರೆ’ ಎಂದು ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಚನ್ನಕೇಶವ ಬಣ್ಣಿಸಿದರು.

ತಾಲ್ಲೂಕಿನ ಬಿಳಗುಂಬದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಲೇಖಕರ ವೇದಿಕೆಯು ಇತ್ತಿಚೆಗೆ ಹಮ್ಮಿಕೊಂಡಿದ್ದ ಕುವೆಂಪು ಅವರ 119ನೇ ಜನ್ಮ ದಿನಾಚರಣೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದವರು.

‘ಕುವೆಂಪು ಅವರು ತಮ್ಮ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ಕೃತಿಗಾಗಿ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಆ ಮೂಲಕ ಕರ್ನಾಟಕದ ಸಾಹಿತ್ಯ ಕ್ಷೇತ್ರದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿದರು. ಅವರ ಕೃತಿಗಳಲ್ಲಿರುವ ಪ್ರಕೃತಿ ವರ್ಣನೆಯನ್ನು ಬಣ್ಣಿಸಲು ಅಸಾಧ್ಯ. ಹಾಗಾಗಿಯೇ, ಅವರನ್ನು ಕನ್ನಡದ ವರ್ಡ್ಸ್‌ವರ್ತ್ ಎಂದೂ ವಿಮರ್ಶಕರು ಕರೆದರು’ ಎಂದರು.

ಸ್ನೇಹ ಕೂಟದ ಅಧ್ಯಕ್ಷ ಎಚ್.ಪಿ. ನಂಜೇಗೌಡ ಮಾತನಾಡಿ, ‘ಕುವೆಂಪು ಅವರು ತಮ್ಮ ಸಾಹಿತ್ಯದಲ್ಲಿ ವೈಚಾರಿಕ ಪ್ರಜ್ಞೆಯನ್ನು ಬಿತ್ತಿದ್ದಾರೆ. ಅವರ ವಿಚಾರಕ್ರಾಂತಿಗೆ ಆಹ್ವಾನ ಸೇರಿದಂತೆ ವಿವಿಧ ಪುಸ್ತಕಗಳು ವಿಶ್ವಮಾನವನಾಗುತ್ತ ನಾವು ಹೇಗೆ ಅಣಿಯಾಗಬೇಕೆಂಬುದನ್ನು ಹೇಳುತ್ತವೆ. ನಾಡಗೀತೆ ಮತ್ತು ರೈತಗೀತೆ ನೀಡಿದ ಅವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದುದು’ ಎಂದು ಹೇಳಿದರು.

ಉಕ್ತಲೇಖನ ಸ್ಪರ್ಧೆಯಲ್ಲಿ ಉತ್ತೀರ್ಣರಾದವರಿಗೆ ಗಣ್ಯರು ನಗದು ಬಹುಮಾನ, ಅಭಿನಂದನಾಪತ್ರ ಹಾಗೂ ಸ್ಮರಣಿಕೆಯನ್ನು ವಿತರಿಸಿದರು. ಜಿಲ್ಲಾ ಲೇಖಕರ ವೇದಿಕೆ ಸಂಸ್ಥಾಪಕ ಅದ್ಯಕ್ಷ ಕೂ.ಗಿ. ಗಿರಿಯಪ್ಪ, ಶಾಲೆ ಮುಖ್ಯಶಿಕ್ಷಕ ನಾಗಬೈರಯ್ಯ, ಪರಿಸರವಾದಿ ಬಿ.ಟಿ. ರಾಜೇಂದ್ರ, ಆಯಿಷಾ ಸುಲ್ತಾನ, ಶಿವಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT