ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಸ್ವಾಧೀನ; ದರ ನಿಗದಿಗೆ ವಿರೋಧ, ಸಭೆ ಮುಂದೂಡಿಕೆ

ಟೌನ್‌ಶಿಪ್‌ ಯೋಜನೆಯ ಎಲ್ಲ ಭೂಮಿ ಡಿನೋಟಿಫೈಗೆ ಒತ್ತಾಯ:
Last Updated 12 ಆಗಸ್ಟ್ 2020, 16:41 IST
ಅಕ್ಷರ ಗಾತ್ರ

ರಾಮನಗರ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಐದನೇ ಹಂತದ ಅಭಿವೃದ್ಧಿವಾಗಿ ವಶಪಡಿಸಿಕೊಳ್ಳುತ್ತಿರುವ ಭೂಮಿಗೆ ದರ ನಿಗದಿ ಸಂಬಂಧ ಬುಧವಾರ ಕರೆಯಲಾಗಿದ್ದ ಸಭೆಯು ಒಮ್ಮತದ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಯಿತು.

ಬಿಡದಿಯ ಹೋಬಳಿಯ ಕಂಚುಗಾರನಹಳ್ಳಿ, ಕಂಚುಗಾರನಹಳ್ಳಿ ಕಾವಲ್, ಕನಕಪುರ ತಾಲ್ಲೂಕಿನ ಹಾರೋಹಳ್ಳಿಯ ಮುಡೇನಹಳ್ಳಿ, ಯರೇಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸುಮಾರು 734 ಎಕರೆ ಜಮೀನನ್ನು ಈ ಯೋಜನೆಗಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ದರ ನಿಗದಿ ಮಾಡುವ ಸಂಬಂಧ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್‌ ಭವನದಲ್ಲಿ ಸಭೆ ಆಯೋಜಿಸಲಾಗಿತ್ತು.

ಕಾಂಗ್ರೆಸ್ ಮುಖಂಡ ಎಚ್.ಸಿ. ಬಾಲಕೃಷ್ಣ ಸಭೆಯಲ್ಲಿ ಮಾತನಾಡಿ "ಈಗಾಗಲೇ ಬಿಡದಿ ಟೌನ್‌ಶಿಪ್‌ ನಿರ್ಮಾಣಕ್ಕೆಂದು ರಾಜ್ಯ ಸರ್ಕಾರವು 9173 ಎಕರೆ ಜಮೀನನ್ನು ಗುರುತಿಸಿ ಕೆಂಪು ವಲಯಕ್ಕೆ ಸೇರಿಸಿದೆ. ಆದರೆ ಟೌನ್‌ಶಿಪ್‌ ನಿರ್ಮಾಣ ಯೋಜನೆ ನನೆಗುದಿಗೆ ಬಿದ್ದಿದೆ. ಇದರಿಂದಾಗಿ ಈ ಭಾಗದ ಜಮೀನು ಅಭಿವೃದ್ಧಿ ಕಾರ್ಯಗಳಿಗೂ ಬಳಕೆ ಆಗದೇ, ಮಾರಾಟ ಮಾಡಲೂ ಆಗದೇ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಲ್ಲಿ ಕೇವಲ 734 ಎಕರೆ ಜಮೀನನ್ನು ಮಾತ್ರ ಕೆ ಐಎಡಿಬಿ ವಶಪಡಿಸಿಕೊಂಡು ಇದಕ್ಕೆ ಬೆಲೆ ನಿಗಧಿ ಮಾಡಲು ಮುಂದಾಗಿರುವುದು ಎಷ್ಟು ಸರಿ?’ ಎಂದು ಪ್ರಶ್ನಿಸಿದರು. ಒಂದು ಸರ್ಕಾರ 734 ಎಕರೆ ಜಮೀನನ್ನು ವಶಪಡಿಸಿಕೊಳ್ಳುವುದೇ ಆದರೆ, ಉಳಿಕೆ ಎಲ್ಲಾ ಜಮೀನನ್ನು ವಶಕ್ಕೆ ಪಡೆಯಬೇಕು. ಸರ್ಕಾರದ ನಿಯಮದಂತೆ ಬೆಲೆಯನ್ನು ನೀಡಬೇಕು. ಇಲ್ಲವಾದರೆ ಉಳಿಕೆ ಭೂಮಿಯನ್ನು ಕೆಂಪು ವಲಯದಿಂದ ಹೊರಕ್ಕೆ ತರಬೇಕು’ ಎಂದು ಆಗ್ರಹಿಸಿದರು.

ಇದಕ್ಕೆ ಕೆಐಎಡಿಬಿ ಅಧಿಕಾರಿಗಳು ಸಮಜಾಯಿಷಿ ನೀಡಿ "ಉಳಿಕೆ ಭೂಮಿಯಲ್ಲಿ ಟೌನ್‌ಶಿಪ್‌ ನಿರ್ಮಾಣ ಸಂಬಂಧ ಈಗಾಗಲೇ ಯೋಜನೆ ರೂಪಿಸಲಾಗುತ್ತಿದೆ. ಹಲವು ಅಂತರರಾಷ್ಟ್ರೀಯ ಕಂಪನಿಗಳು ಈ ಭಾಗದಲ್ಲಿ ಕೈಗಾರಿಕೆ ಸ್ಥಾಪನೆಗೆ ಮುಂದಾಗಿರುವುದರಿಂದ ಭೂಸ್ವಾಧೀನ ಅತ್ಯಗತ್ಯವಾಗಿದೆ’ ಎಂದರು.

ಇದಕ್ಕೆ ಒಪ್ಪದ ಬಾಲಕೃಷ್ಣ "ಕೇವಲ 734 ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ಸರ್ಕಾರ ಡಿನೋಟಿಫೈ ಮಾಡಿ ಕೆಐಎಡಿಬಿಗೆ ನೀಡಿದೆಯೇ, ಹಾಗಿದ್ದರೆ ಅದರ ದಾಖಲೆಗಳನ್ನು ನೀಡಿ’ ಎಂದು ಪ್ರಶ್ನಿಸಿದರು. ಎಲ್ಲ ಜಮೀನನ್ನೂ ವಶಪಡಿಸಿಕೊಳ್ಳಿ. ಇಲ್ಲವಾದರೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ರೈತರ ಸಭೆ ಕರೆದು, ಉಳಿಕೆ ಜಮೀನನ್ನು ಮುಂದಿನ 6 ತಿಂಗಳಲ್ಲಿ ಟೌನ್‌ಶಿಪ್, ಇಲ್ಲವೇ ಕೈಗಾರಿಕೆ ಉದ್ದೇಶಕ್ಕೆ ವಶಪಡಿಸಿಕೊಳ್ಳಲಾಗುವುದು. ಒಂದು ವೇಳೆ ಇದು ಸಾಧ್ಯವಾಗದೇ ಹೋದರೆ ಜಮೀನನ್ನು ಕೆಂಪು ವಲಯದಿಂದ ತೆಗೆದು ಹಾಕಲಾಗುವುದು ಎನ್ನುವ ಭರವಸೆಯನ್ನು ಕೊಡಿಸಿ. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಭೂಮಿಗೆ ದರ ನಿಗದಿ ಮಾಡಬೇಡಿ ಎಂದು ಪಟ್ಟುಹಿಡಿದರು.

ಸಭೆಯಲ್ಲಿದ್ದ ಇತರ ಕೆಲವು ಮುಖಂಡರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು. ಅಂತಿಮವಾಗಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಸಭೆ ಮುಂದೂಡುವ ನಿರ್ಧಾರ ಪ್ರಕಟಿಸಿದರು. ಮುಖಂಡ ಕೆ.ರಾಜು, ತಾ.ಪಂ. ಸದಸ್ಯ ಗಾಣಕಲ್‌ ನಟರಾಜು, ಕಂದಾಯ ಇಲಾಖೆ ಮತ್ತು ಕೆಐಎಡಿಬಿ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

***

ಕೆಂಪು ವಲಯದಲ್ಲಿರುವ ಜಮೀನುಗಳ ಯಾವ ರೈತರಿಗೂ ಅನ್ಯಾಯ ಆಗಬಾರದು. ಎಲ್ಲ ಜಮೀನಿಗೆ ಒಮ್ಮಲೆ ದರ ನಿಗದಿಪಡಿಸಿ ವಶಪಡಿಸಿಕೊಳ್ಳಿ

-ಎಚ್‌.ಸಿ. ಬಾಲಕೃಷ್ಣ,ಕಾಂಗ್ರೆಸ್ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT