ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪತ್ನಿ, ಮಕ್ಕಳು ಸೇರಿ 8 ಮಂದಿಗೆ ಜೀವಾವಧಿ ಶಿಕ್ಷೆ

ಆಸ್ತಿಗಾಗಿ ಪತಿಯನ್ನು ಅಪಹರಿಸಿ ಕೊಲೆ; ಶವ ಸುಟ್ಟು ಹಾಕಿದ್ದ ಅಪರಾಧಿಗಳು
Published 7 ಮಾರ್ಚ್ 2024, 6:26 IST
Last Updated 7 ಮಾರ್ಚ್ 2024, 6:26 IST
ಅಕ್ಷರ ಗಾತ್ರ

ಕನಕಪುರ: ಆಸ್ತಿಗಾಗಿ ನಿಂಗಪ್ಪ ಎಂಬುವರನ್ನು ಅಪಹರಿಸಿ ಕೊಲೆ ಮಾಡಿ, ಶವವನ್ನು ಸುಟ್ಟು ಹಾಕಿದ್ದ ಆತನ ಪತ್ನಿ, ಮೂವರು ಮಕ್ಕಳು, ನಾಲ್ವರು ಸುಪಾರಿ ಹಂತಕರು ಸೇರಿದಂತೆ 8 ಅಪರಾಧಿಗಳಿಗೆ ಇಲ್ಲಿನ ಎರಡನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿದೆ.

ಅಪರಾಧಿಗಳಾದ ಆತನ ಪತ್ನಿ ರತ್ನಮ್ಮ, ಪುತ್ರ ಅಬಿಷೇಕ್ ಅಲಿಯಾಸ್ ಅಭಿ, ಪುತ್ರಿಯರಾದ ಶಿಲ್ಪಾ, ಪುಷ್ಪಾ ಹಾಗೂ ಸುಪಾರಿ ಹಂತಕರಾದ ರೌಡಿ ಶೀಟರ್ ಕೇಶವಮೂರ್ತಿ ಅಲಿಯಾಸ್ ಕೇಸಿ, ವಡ್ಡರದೊಡ್ಡಿಯ ಮುತ್ತುರಾಜ್ ಅಲಿಯಾಸ್ ಪಪ್ಪಿ, ವೆಂಕಟೇಶ್ ಹಾಗೂ ರವಿ ಶಿಕ್ಷೆಗೊಳಗಾದವರು. 

ಮೂಲತಃ ತಾಲ್ಲೂಕಿನ ಕೆಮ್ಮಾಳೆಯವರಾದ ಗಡಸಳ್ಳಿಯಲ್ಲಿ ನೆಲೆಸಿದ್ದ ನಿಂಗಪ್ಪ ಅವರನ್ನು ಅಪರಾಧಿಗಳು 2015ರ ಡಿ. 4ರಂದು ಕೊಲೆ ಮಾಡಿದ್ದರು. ಕೆಲ ವರ್ಷಗಳ ಹಿಂದೆ ರತ್ನಮ್ಮ ಪತಿಯನ್ನು ಮನೆಯಿಂದ ಹೊರಹಾಕಿದ್ದರು. ಆಗ ನಿಂಗಪ್ಪ ಗಡಸಳ್ಳಿಯಲ್ಲಿರುವ ಸಹೋದರನ ಮನೆಯಲ್ಲಿ ವಾಸವಾಗಿದ್ದರು. ಕನಕಪುರದ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದರು.

ಸಹಕರಿಸದಿದ್ದಕ್ಕೆ ಸಂಚು: ಕೆಮ್ಮಾಳೆಯಲ್ಲಿ ನಿಂಗಪ್ಪ ಅವರ ಹೆಸರಿನಲ್ಲಿದ್ದ ಬೆಲೆಬಾಳುವ ಆಸ್ತಿ ಮೇಲೆ ರತ್ನಮ್ಮ ಕಣ್ಣಿಟ್ಟಿದ್ದಳು. ಆಸ್ತಿ ಲಪಟಾಯಿಸುವ ಸಂಚಿಗೆ ನಿಂಗಪ್ಪ ಸಹಕರಿಸಿರಲಿಲ್ಲ. ಪತಿಯೇ ಇಲ್ಲವಾದರೆ ಆಸ್ತಿ ಸುಲಭವಾಗಿ ಕೈವಶವಾಗುತ್ತದೆ ಎಂದುಕೊಂಡಿದ್ದ ರತ್ನಮ್ಮ, ತನ್ನ ಮಕ್ಕಳು ಮತ್ತು ಗೆಳೆಯ ತೌಟಹಳ್ಳಿಯ ಕೇಶವಮೂರ್ತಿಯೊಂದಿಗೆ ಸಂಚು ರೂಪಿಸಿದ್ದಳು ಎಂದು ಕನಕಪುರ ಪುರ ಠಾಣೆ ಪೊಲೀಸರು ತಿಳಿಸಿದರು.

ಪೂರ್ವಯೋಜನೆಯಂತೆ 2015ರ ಡಿ.3ರಂದು ಕನಕಪುರದ ಎಂಎಚ್‌ಎಸ್ ಮೈದಾನದ ಬಳಿ ನಿಂಗಪ್ಪ ಅವರನ್ನು ವಾಹನದಲ್ಲಿ ಅಪಹರಿಸಿದ್ದರು. ಹೊಂಗನೂರು ಕೆರೆ ಬಳಿ ದುಪ್ಪಟದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದರು. ನಂತರ ಬಿ.ವಿ. ಹಳ್ಳಿ ಕೆರೆಗೆ ಶವವನ್ನು ತಂದು ಕಲ್ಲು ಕಟ್ಟಿ ಮುಳುಗಿಸಿದ್ದರು ಎಂದು ಹೇಳಿದರು.

ನೀರಿನಲ್ಲಿ ತೇಲಿದ ಶವ: ಡಿ. 9ರಂದು ಹಂತಕರು ಕೆರೆ ಬಳಿಗೆ ಬಂದಾಗ, ಶವ ನೀರ ಮೇಲೆ ತೇಲುತ್ತಿತ್ತು. ಶವವನ್ನು ಮೇಲಕ್ಕೆತ್ತಿ ತೋಟಳ್ಳಿ ಮತ್ತು ಕಚ್ಚುವನಹಳ್ಳಿ ಮಧ್ಯದ ಹಳ್ಳದ ಬಳಿ ರಾತ್ರಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು. ಶವ ಪೂರ್ತಿಯಾಗಿ ಸುಟ್ಟು ಹೋಗದಿದ್ದರಿಂದ ಅರ್ಧಂಬರ್ಧ ಸುಟ್ಟು ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು, ಬೆಳಗ್ಗಿನ ಜಾವ, ಸತ್ತೇಗಾಲ ಬಳಿಯ ಕಾವೇರಿ ನದಿಗೆ ಎಸೆದಿದ್ದರು ಎಂದು ತಿಳಿಸಿದರು.

ಸಹೋದರ ಮನೆಗೆ ಬಾರದಿದ್ದರಿಂದ ಅನುಮಾನಗೊಂಡ ನಿಂಗಪ್ಪ ಸಹೋದರ ಸಾವಂದಯ್ಯ, ಕನಕಪುರ ಪುರ ಠಾಣೆಗೆ ದೂರು ಕೊಟ್ಟಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡು, ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ನಿಂಗಪ್ಪ ಪತ್ನಿ ಮತ್ತು ಮಕ್ಕಳನ್ನು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಬಾಯ್ಬಿಟ್ಟರು. ನಂತರ ಆರೋಪಿಗಳನ್ನು ಬಂಧಿಸಿ, ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿದ್ದೆವು ಎಂದು ಮಾಹಿತಿ ನೀಡಿದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ಎನ್. ಕುಮಾರ್, ಕೊಲೆ ಆರೋಪ ಸಾಬೀತಾಗಿದ್ದರಿಂದ ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು. ಪ್ರಾಸಿಕ್ಯೂಷನ್ ಪರವಾಗಿ ರಘು, ಬಿ.ಇ. ಯೋಗೇಶ್ವರ ಹಾಗೂ  ಎಂ.ಕೆ. ರೂಪಲಕ್ಷ್ಮಿ ವಾದ ಮಂಡಿಸಿದ್ದರು.

ತನಿಖೆಗೆ ಪುಷ್ಟಿ ಕೊಟ್ಟಿದ್ದ ಹಲ್ಲು

ಕೊಲೆಯಾಗಿದ್ದ ನಿಂಗಪ್ಪ ಅವರ ಅರ್ಧಂಬರ್ಧ ಸುಟ್ಟ ಶವವನ್ನು ಹಂತಕರು ನದಿಗೆ ಎಸೆದಿದ್ದರಿಂದ ಶವ ದೊರತಿರಲಿಲ್ಲ. ಆದರೆ ಶವವನ್ನು ಸುಟ್ಟು ಹಾಕಿದ್ದ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ನಿಂಗಪ್ಪ ಅವರ ಹಲ್ಲುಗಳು ದೊರೆತಿದ್ದವು. ಇದು ಪ್ರಕರಣದ ತನಿಖೆಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಹಂತಕರ ವಿರುದ್ಧ ಪೂರಕ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದ ತನಿಖಾಧಿಕಾರಿ ಸಿಪಿಐ ಸಿದ್ದೇಗೌಡ ಅವರು ಆರೋಪಿಗಳ ವಿರುದ್ಧ ಕೋರ್ಟ್‌ಗೆ ದೋಷಾರೋಪಪಟ್ಟಿ ಸಲ್ಲಿಸಿತ್ತು. ನಂತರ ಪ್ರಕರಣವು ರಾಮನಗರದ ಎರಡನೇ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ಗೆ ವರ್ಗಾವಣೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 9 ಆರೋಪಿಗಳ ವಿರುದ್ದ ಆರೋಪಪಟ್ಟಿ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸದ್ಯ 8 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 9ನೇ ಆರೋಪಿಯ ವಿಚಾರಣೆ ಪ್ರತ್ಯೇಕವಾಗಿ ನಡೆಯುತ್ತಿದ್ದು ಆದೇಶ ಬಾಕಿ ಇದೆ ಎಂದು ಪೊಲೀಸರು ತಿಳಿಸಿದರು. ತನಿಖಾಧಿಕಾರಿ ತಂಡಕ್ಕೆ ಬಹುಮಾನ ಪ್ರಕರಣವನ್ನು ಪತ್ತೆಹಚ್ಚಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಿದ ತನಿಖಾಧಿಕಾರಿ ಸಿದ್ದೇಗೌಡ ನೇತೃತ್ವದ ಪಿಎಸ್‌ಐಗಳಾದ ಕೆ. ಮಲ್ಲೇಶ್ ನಟರಾಜು ಬಿ ಸಿಬ್ಬಂದಿ ಎಚ್‌.ಎಸ್. ಮೋಹನ್ ರಾಮಕೃಷ್ಣ ರಾವ್ ಉಷಾ ನಂದಿನಿ ಪ್ರಕಾಶ್ ವಿ ಲಿಂಗರಾಜು ಗೋಪಿನಾಥ್ ಜಯಶಂಕರ್ ಜವರೇಗೌಡ ದೇವೇಗೌಡ ಸುದರ್ಶನ್ ಹಾಗೂ ಉಮಾಕಾಂತ್ ಅವರನ್ನೊಳಗೊಂಡ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಅವರು ಬಹುಮಾನ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT