ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಕೇಂದ್ರದ ಮುಂದೆ ಜನರ ಸಾಲು

ಕಿರಿಯರಿಗೂ ಲಸಿಕೆ ಅಭಿಯಾನ ಆರಂಭ; ಎರಡನೇ ಡೋಸ್ ಪಡೆಯಲು ಹಿರಿಯರ ಪರದಾಟ
Last Updated 12 ಮೇ 2021, 4:21 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್ ಸೋಂಕು ಹೆಚ್ಚಾದಂತೆಲ್ಲ ಲಸಿಕೆ ಪಡೆಯುವವರ ಸಂಖ್ಯೆ ದುಪ್ಪಟ್ಟಾಗುತ್ತಿದೆ. ಆರೋಗ್ಯ ಕೇಂದ್ರಗಳಲ್ಲಿ ಉದ್ದನೆಯ ಸಾಲು ಇದ್ದು, ಸಾಕಷ್ಟು ಮಂದಿ ಲಸಿಕೆ ಸಿಗದೇ ವಾಪಸ್‌ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ.

ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿನ ಕೇಂದ್ರದಲ್ಲಿ ಮಂಗಳವಾರ ಕೋವಿಡ್ ಲಸಿಕೆ ಪಡೆಯಲು ಜನರು ಉದ್ದನೆಯ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂದಿತು. ಇತರ ತಾಲ್ಲೂಕು ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಸಾಕಷ್ಟು ಜನರು ನೆರೆದಿದ್ದರು. ಅದರಲ್ಲೂ ಹೊರಗಿನಿಂದ ಬಂದವರ ಸಂಖ್ಯೆ
ಹೆಚ್ಚಿತ್ತು.

ದಾಸ್ತಾನು ಕೊರತೆ: ಜಿಲ್ಲೆಗೆ ಬೇಕಾದಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯ ಇಲ್ಲ. ಹೀಗಾಗಿ 60 ವರ್ಷ ಮೇಲ್ಪಟ್ಟವರು, 45 ವರ್ಷ ಮೇಲ್ಪಟ್ಟ ಆರೋಗ್ಯ ಸಮಸ್ಯೆ ಉಳ್ಳವರಿಗೆ ಮೊದಲ ಮತ್ತು ಎರಡನೇ ಡೋಸ್ ಲಸಿಕೆಗೆ ಆದ್ಯತೆ ನೀಡಲಾಗುತ್ತಿದೆ. 18 ರಿಂದ 44 ವಯೋಮಾನದವರು ಕೋವಿನ್‌ ಅಥವಾ ಆರೋಗ್ಯ ಸೇತು ಆ್ಯಪ್‌ನಲ್ಲಿ ನೋಂದಾಯಿಸಿಕೊಂಡವರಿಗೆ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರ ಲಸಿಕೆ
ದೊರೆಯುತ್ತಿದೆ.

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟ 3.07 ಲಕ್ಷ ಮಂದಿ ಇದ್ದಾರೆ. ಇವರಲ್ಲಿ ಈವರೆಗೆ 1.70 ಲಕ್ಷ ಜನರು ಮಾತ್ರ ಲಸಿಕೆ ಪಡೆದಿದ್ದಾರೆ. ಒಟ್ಟಾರೆ ಶೇ 55ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದು, ಇನ್ನೂ ಅರ್ಧದಷ್ಟು ಜನರು ಲಸಿಕೆ ಪಡೆಯುವುದು ಬಾಕಿ ಇದೆ. ಅದರಲ್ಲೂ ಗ್ರಾಮೀಣ ಭಾಗದ ಜನರು ಈ ಪ್ರಕ್ರಿಯೆಯಿಂದ ಹಿಂದೆ ಉಳಿದಿದ್ದು, ಅವರ ಮನವೊಲಿಸುವ ಕಾರ್ಯ ಆಗಬೇಕಿದೆ.

ಕಳೆದ ಒಂದು ವಾರ ಪೂರ್ತಿ ಜಿಲ್ಲೆಯಲ್ಲಿ ಲಸಿಕೆ ಕೊರತೆ ಇದ್ದು, ನಿಗದಿತ ಗುರಿ ತಲುಪಲು ಸಾಧ್ಯ ಆಗಿಲ್ಲ. ಸಾಕಷ್ಟು ಮಂದಿ ಆಸ್ಪತ್ರೆಗಳಿಗೆ ಬಂದು ಹಿಂತಿರುಗಿದ್ದಾರೆ. ಈಗಲೂ ಜಿಲ್ಲೆಯಲ್ಲಿ ಸಾಕಾಗುವಷ್ಟು ದಾಸ್ತಾನು ಇಲ್ಲ. ಹೀಗಾಗಿ ನಿಗದಿತ ಅವಧಿಯೊಳಗೆ ಲಸಿಕೆ ಕಾರ್ಯ ನಡೆಸುವುದು ಸವಾಲಾಗಿದೆ.

ಎರಡನೇ ಡೋಸ್‌ಗೆ ಪರದಾಟ: ಮೊದಲ ಡೋಸ್ ಪಡೆದು ತಿಂಗಳು ತುಂಬಿದವರು ಎರಡನೇ ಸುತ್ತಿನ ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಲಸಿಕೆ ಕೊರತೆ ಕಾರಣಕ್ಕೆ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಲಸಿಕೆ ಹಾಕುವುದನ್ನು ನಿಲ್ಲಿಸಿದ್ದಾರೆ. ಎರಡು ಲಸಿಕೆಗಳ ನಡುವೆ ನಿಗದಿತ ದಿನಕ್ಕಿಂತ ಹೆಚ್ಚು ಅವಧಿ ಆದರೆ ಲಸಿಕೆ ಪರಿಣಾಮಕಾರಿ ಆಗದು ಎಂದು ತಜ್ಞರು ಹೇಳುತ್ತಾರೆ. ಹೀಗಾಗಿ ಸೀಮಿತ ದಿನಗಳ ಒಳಗೆ ಎರಡನೇ ಸುತ್ತಿನ ಲಸಿಕೆ ನೀಡಲು ಆರೋಗ್ಯ ಇಲಾಖೆ ಅಭಿಯಾನ ರೂಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT