ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮನಗರ: ವಾಡಿಕೆ ತಪ್ಪಿದ ಮಳೆ; ಬಿಸಿಲಿಗೆ ಬಾಯಾರಿದ ಇಳೆ

Published 17 ಮೇ 2024, 6:21 IST
Last Updated 17 ಮೇ 2024, 6:21 IST
ಅಕ್ಷರ ಗಾತ್ರ

ರಾಮನಗರ: ವರ್ಷದಿಂದ ಮಳೆ ಕಾಣದ ಜಿಲ್ಲೆಯು ಈ ವರ್ಷಾರಂಭದಿಂದಲೂ ಮಳೆ ಕೊರತೆ ಎದುರಿಸಿದೆ. ಅಪರೂಪಕ್ಕೊಮ್ಮೆ ಅಲ್ಲಲ್ಲಿ ಸಣ್ಣದಾಗಿ ಮಳೆ ಸುರಿದರೂ ಅದು ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿಲ್ಲ. ನಿರೀಕ್ಷಿತ ವಾಡಿಕೆ ಮಳೆಯು ಕೈ ಕೊಟ್ಟಿರುವುದರಿಂದ ಈ ಸಲವೂ ಮಳೆರಾಯನ ಕಣ್ಣಾಮುಚ್ಚಾಲೆ ಆಡುವನೇ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ವರ್ಷಾರಂಭದ ಜನವರಿಯಿಂದ ಮೇ 15ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 117 ಮಿ.ಮೀ. ನಿರೀಕ್ಷಿಸಲಾಗಿತ್ತು. ಆದರೆ, ವಾಸ್ತವವಾಗಿ ಬಂದಿರುವುದು ಕೇವಲ 82 ಮಿ.ಮೀ. ಮಾತ್ರ. ಈ ಅವಧಿಯಲ್ಲಿ ಜಿಲ್ಲೆ ಶೇ 29ರಷ್ಟು ಮಳೆ ಕೊರತೆ ಎದುರಿಸಿದೆ. ಭೂಮಿ ಹದಗೊಳಿಸಿ ಕೃಷಿಗೆ ಅಣಿಗೊಳಿಸಲು ಬೇಕಾದಂತಹ ಮಳೆ ಒಂದು ದಿನವೂ ಮಳೆ ಸುರಿದಿಲ್ಲ.

ಫೆಬ್ರುವರಿ, ಮಾರ್ಚ್‌ನಲ್ಲಿ ಶೂನ್ಯ: ‘ಜಿಲ್ಲೆಯಲ್ಲಿ ಫೆಬ್ರುವರಿ ಮತ್ತು ಮಾರ್ಚ್ ತಿಂಗಳಲ್ಲಿ ಜಿಲ್ಲೆಯ ಐದೂ ತಾಲ್ಲೂಕುಗಳಲ್ಲಿ ಒಂದು ಹನಿ ಮಳೆಯೂ ಬಂದಿಲ್ಲ. ಏಪ್ರಿಲ್ ತಿಂಗಳಲ್ಲಿ ಚನ್ನಪಟ್ಟಣದಲ್ಲಿ 19 ಮಿ.ಮೀ., ಕನಕಪುರದಲ್ಲಿ 12 ಮಿ.ಮೀ., ಮಾಗಡಿಯಲ್ಲಿ 17 ಮಿ.ಮೀ., ರಾಮನಗರದಲ್ಲಿ 15 ಮಿ.ಮೀ., ಹಾಗೂ ಹಾರೋಹಳ್ಳಿಯಲ್ಲಿ 45 ಮಿ.ಮೀ. ಮಳೆ ವಾಡಿಕೆಯಂತೆ ಮಳೆ ಸುರಿಯುತ್ತಿತ್ತು. ಆದರೆ, ಈ ಸಲ ಎಲ್ಲಿಯೂ ಮಳೆಯಾಗಿಲ್ಲ’ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಏಪ್ರಿಲ್ ತಿಂಗಳಲ್ಲಿ ವಾಡಿಕೆ ಮಳೆ 47 ಮಿ.ಮೀ. ಇದ್ದು, ವಾಸ್ತವದಲ್ಲಿ 3 ಮಿ.ಮೀ. ಮಾತ್ರ ಸುರಿದಿದ್ದು, ಶೇ 93ರಷ್ಟು ಕೊರತೆ ಕಂಡುಬಂದಿದೆ. ಮೇ ತಿಂಗಳಲ್ಲಿ (15ರವರೆಗೆ) ಸರಾಸರಿ ವಾಡಿಕೆ ಮಳೆ 76 ಮಿ.ಮೀ. ನಿರೀಕ್ಷಿಸಲಾಗಿತ್ತು. ಆದರೆ, ವಾಸ್ತವದಲ್ಲಿ 48 ಮಿ.ಮೀ. ಮಾತ್ರ ಸುರಿದಿದೆ. ಈ ತಿಂಗಳಾಂತ್ಯದೊಳಗೆ ಮತ್ತಷ್ಟು ಮಳೆ ಸುರಿಯುವ ಸಾಧ್ಯತೆ ಇದೆ’ ಎಂದು ಹೇಳಿದರು.

ಬಿತ್ತನೆಗೆ ಹಿನ್ನಡೆ: ‘ಮುಂಗಾರು ಪೂರ್ವದಲ್ಲಿ ಎಳ್ಳು, ತೊಗರಿ ಹಾಗೂ ಅಲಸಂದೆ ಬೆಳೆಗಳನ್ನು ಜಿಲ್ಲೆಯಲ್ಲಿ ಬಿತ್ತನೆ ಮಾಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ಏಪ್ರಿಲ್ ತಿಂಗಳಲ್ಲಾದ ಮಳೆ ಕೊರತೆಯಿಂದ ಈ ಬೆಳೆಗಳ ಬಿತ್ತನೆಗೆ ತೀವ್ರ ಹಿನ್ನಡೆಯಾಗಿದೆ. ನಿಗದಿತ ಅವಧಿಯಲ್ಲಿ ಬಿತ್ತನೆ ಚಟುವಟಿಕೆ ನಡೆಯದಿದ್ದರೆ ಇಳುವರಿಯಲ್ಲೂ ವ್ಯತ್ಯಾಸವಾಗಲಿದೆ’ ಎಂದು ತಿಳಿಸಿದರು.

‘ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಹಾಯಧನದಲ್ಲಿ ರೈತರಿಗೆ ತೊಗರಿ ಬಿಆರ್‌ಜಿ-1, ಬಿಆರ್‌ಜಿ-5, ಅಲಸಂದೆ-ಡಿ.ಸಿ-15 ತಳಿಯ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿ, ನಿಗದಿತ ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ. ಉಳಿದಂತೆ, ಬಿತ್ತನೆ ಸಮಯದ ಅನುಗುಣವಾಗಿ ರಾಗಿ, ಭತ್ತ, ಮುಸುಕಿನ ಜೋಳ, ನೆಲಗಡಲೆ ಬಿತ್ತನೆ ಬೀಜಗಳನ್ನು ಸಹ ದಾಸ್ತಾನು ಮಾಡಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘91108 ಹೆಕ್ಟೇರ್‌ನಲ್ಲಿ ಬಿತ್ತನೆ ಗುರಿ’

‘ಜಿಲ್ಲೆಯಲ್ಲಿ ರಾಗಿ ಭತ್ತ ಮುಸುಕಿನ ಜೋಳ ತೊಗರಿ ಅಲಸಂದೆ ಅವರೆ ಎಳ್ಳು ನೆಲಗಡಲೆಯನ್ನು ಪ್ರಮುಖವಾಗಿ ಬೆಳೆಯಲಾಗುತ್ತಿದೆ. ಈ ಸಲದ ಮುಂಗಾರು ಹಂಗಾಮಿನಲ್ಲಿ 91108 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಅಗತ್ಯವಿರುವ ರಸಗೊಬ್ಬರ ದಾಸ್ತಾನಿಗೂ ಕ್ರಮ ಕೈಗೊಳ್ಳಲಾಗಿದೆ.

ಈ ಸಲದ ಮುಂಗಾರು ಹಂಗಾಮಿಗೆ ಅಂದಾಜು 28047 ಮೆಟ್ರಿಕ್ ಟನ್ ರಸಗೊಬ್ಬರ ಅಗತ್ಯವಿದೆ. ಸದ್ಯ ಜಿಲ್ಲೆಯಲ್ಲಿ 9462 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಇದೆ. ಬಿತ್ತನೆ ಸಮಯಕ್ಕೆ ಅನುಗುಣವಾಗಿ ರಸಗೊಬ್ಬರ ಸರಬರಾಜು ಮತ್ತು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ ತಿಳಿಸಿದರು. ‘ಮಳೆಗಿಂತ ಗಾಳಿ ಅಬ್ಬರವೇ ಹೆಚ್ಚು’ ‘ಕಳೆದ ಹದಿನೈದು ದಿನಗಳಿಂದ ಆಗೊಮ್ಮೆ ಹೀಗೊಮ್ಮೆ ಮಳೆ ಸುರಿಯುತ್ತಿದೆ. ಆದರೆ ಎಲ್ಲಿಯೂ ಧಾರಾಕಾರವಾಗಿ ಸುರಿಯದೆ ಅಲ್ಲಲ್ಲಿ ಸಾಧಾರಣವಾಗಿ ಬಂದಿದೆ. ಮಳೆಗಿಂತ ಗಾಳಿ ಮತ್ತು ಗುಡುಗು ಸಿಡಿಲಿನ ಅಬ್ಬರವೇ ಜೋರಾಗಿದೆ. ಉಳುಮೆ ಮತ್ತು ಬಿತ್ತನೆ ಕಾರ್ಯಗಳಿಗೆ ಪೂರಕವಾಗುವಂತೆ ಹದವಾದ ಮಳೆ ಇನ್ನೂ ಬರಬೇಕಿದೆ. ವರ್ಷದಿಂದ ಮಳೆ ಇಲ್ಲದೆ ಎದುರಾದ ಭೀಕರ ಬರದಿಂದ ರೈತರು ಈಗಾಗಲೇ ಕಂಗಾಲಾಗಿದ್ದಾರೆ. ಈ ಸಲವೂ ಮಳೆ ಕೈ ಕೊಟ್ಟರೆ ರೈತರ ಪಾಡು ಹೇಳತೀರದು’ ಎಂದು ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT