ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 23ರವರೆಗೂ ಮಾಗಡಿ ಸಂಪೂರ್ಣ ಲಾಕ್‌ ಡೌನ್‌

Last Updated 11 ಜುಲೈ 2020, 14:47 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದಲ್ಲಿ ಕೋವಿಡ್‌ –19 ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಜುಲೈ 13ರ ಮಧ್ಯಾಹ್ನ 12.30 ರಿಂದ ಜುಲೈ 23 ರವರೆಗೆ ತಾಲ್ಲೂಕು ಆಡಳಿತ ಮತ್ತು ವರ್ತಕರ ಸಂಘ, ಹೋಟೆಲ್‌ ಮಾಲೀಕರ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ವಯಂಪ್ರೇರಣೆಯಿಂದ ಸಂಪೂರ್ಣಲಾಕ್‌ ಡೌನ್‌ ಮುಂದುವರಿಯಲಿದೆ ಎಂದು ಶಾಸಕ ಎ.ಮಂಜುನಾಥ ತಿಳಿಸಿದರು.

ಪುರಸಭೆ ಜವರಪ್ಪ ಸಭಾಂಗಣದಲ್ಲಿ ಶನಿವಾರ ನಡೆದ ಕೋವಿಡ್‌–19 ಸೋಂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಲಾಕ್‌ಡೌನ್‌ ಸಮಯದಲ್ಲಿ ಆಸ್ಪತ್ರೆ, ಔಷಧಿ ಮಳಿಗೆ ಹೊರತುಪಡಿಸಿದಂತೆ ವೈನ್‌ ಸ್ಟೋರ್‌ ಸೇರಿದಂತೆ ಎಲ್ಲಾ ವಹಿವಾಟು, ಬೀದಿಬದಿ ತರಕಾರಿ ಮಾರಾಟ ಮತ್ತು ಮಂಡಿಗಳು ಮುಚ್ಚಲಿವೆ. ಆಟೊ, ಟೆಂಪೊ, ಕಾರು ಇತರೆ ಬಾಡಿಗೆ ವಾಹನಗಳ ಸಂಚಾರ ಇರುವುದಿಲ್ಲ.

ಪಟ್ಟಣದ 23 ವಾರ್ಡ್‌ಗಳಲ್ಲಿ ಕಡುಬಡವರನ್ನು ಗುರುತಿಸಿ ಪಟ್ಟಿ ನೀಡಿದರೆ ವೈಯುಕ್ತಿಕವಾಗ ದಿನಸಿ ಕಿಟ್‌ ವಿತರಿಸಲಾಗುವುದು. ಲಾಕ್‌ ಡೌನ್‌‌ ಸಮಯದಲ್ಲಿ ದಿನಸಿ ವರ್ತಕರಿಗೆ ನಷ್ಟವಾಗಲಿದೆ ಎಂಬ ಅರಿವು ಇದೆ. ಜೀವ ಮೊದಲು ನಂತರ ಜೀವನ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದರು.

ಕ್ವಾರಂಟೈನ್‌ ಕೇಂದ್ರದಲ್ಲಿ ಇರುವವರು ಸಮಸ್ಯೆಗಳಿಗೆಲ್ಲ ಪೋನು ಮಾಡುತ್ತಿದ್ದಾರೆ. ಮನೆಯಲ್ಲಿ ಇದ್ದಂತೆ ಕ್ವಾರಂಟೈನ್‌ ಕೇಂದ್ರದಲ್ಲಿ ಇರಲು ಸಾಧ್ಯವಿಲ್ಲ. ಕೋವಿಡ್‌ ಸೋಂಕಿತರಿಗೆ ತಾಲ್ಲೂಕು ಆಡಳಿತ ಸಾಧ್ಯವಾದಷ್ಟು ಅನುಕೂಲ ಮಾಡಿಕೊಡುತ್ತಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸೌಜನ್ಯದಿಂದ ಮಾಹಿತಿ ಹಂಚಿಕೊಳ್ಳಬೇಕು ಎಂದರು.

ಎಚ್‌.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ರಾಮನಗರದ ಬಿಜಿಎಸ್‌ ಆಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಜಿಲ್ಲೆಯ ಸೋಂಕಿತರಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು. ತಾಲ್ಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಸ್ಯಾನಿಟೈಸರ್‌ ಮಾಡಿಸಲಾಗುವುದು. ಹುಲಿಕಟ್ಟೆ ಮತ್ತು ಯಲ್ಲಾಪುರದಲ್ಲಿನ ಕ್ವಾರಂಟೈನ್‌ ಕೇಂದ್ರಗಳನ್ನು ಆಸ್ಪತ್ರೆಯನ್ನಾಗಿ ಮಾಡಲಾಗುವುದು. ಪಟ್ಟಣದಲ್ಲಿ ಲಾಕ್‌ ಡೌನ್‌ ಉಲ್ಲಂಘಿಸಿದವರ ವಿರುದ್ಧ ಪೊ ಲೀಸರು ಕಠಿಣ ಕ್ರಮಕೈಗೊಳ್ಳಲಿದ್ದಾರೆ. ಖಾಸಗಿ ವೈದ್ಯರ ಸಭೆ ಕರೆದು ಲಾಕ್‌ ಡೌನ್‌ ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವಂತೆ ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ ಪ್ರಸಾದ್‌ ಅವರಿಗೆ ಸೂಚಿಸಿದರು. ಕೋವಿಡ್‌ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲರೂ ವೈಯಕ್ತಿಕವಾಗಿ ಮನೆಯಲ್ಲಿಯೇ ಉಳಿಯಬೇಕು ಎಂದರು.

‌ಪುರಸಭೆ ಹಿರಿಯ ಸದಸ್ಯ ರಂಗಹನುಮಯ್ಯ ಮಾತನಾಡಿ, ಲಾಕ್‌ಡೌನ್‌ ಮುಂದುವರೆಸಿ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದು ಕೋವಿಡ್‌ ಸೋಂಕು ತಡೆಗಟ್ಟಬೇಕಿದೆ ಎಂದರು.

ಶವ ಸಾಗಣೆ ವಾಹನ ಕೊಡಿಸುವಂತೆ ಪುರಸಭೆ ಸದಸ್ಯ ಎಂ.ಎನ್‌.ಮಂಜುನಾಥ ಮನವಿ ಮಾಡಿದರು.

ತಾ.ಪಂ.ಅಧ್ಯಕ್ಷ ನಾರಾಯಣಪ್ಪ, ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ ಪ್ರಸಾದ್‌, ಇಒ, ಟಿ.ಪ್ರದೀಪ್‌, ಪುರಸಭೆ ಮುಖ್ಯಾಧಿಕಾರಿ ಎಂ.ಎನ್‌.ಮಹೇಶ್‌, ಸಬ್‌ಇನ್‌ ಪೆಕ್ಟರ್‌ ಮಂಜುನಾಥ್‌, ಧಾನ್ಯ ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಜಿ.ಗೋಪಾಲ ಈಡಿಗ, ಸೋಂಕು ಹರಡದಂತೆ ತಡೆಗಟ್ಟುವ ಬಗ್ಗೆ ಮಾತನಾಡಿದರು.

ಹೋಟೆಲ್‌, ಬೇಕರಿ, ಕೋಳಿ ಮತ್ತು ಮಾಂಸ ಮಾರಾಟಗಾರರು, ಪುರಸಭೆ ಸದಸ್ಯರು, ಬೀದಿ ಬದಿ ವ್ಯಾಪಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT