ಮಾಗಡಿ: ತಾಲ್ಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲದೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಹಾಗೂ ಶಾಲೆ– ಕಾಲೇಜು ಕ್ರೀಡಾಕೂಟ ಆಯೋಜನೆಗೆ ಅಡ್ಡಿಯಾಗಿದೆ.
ಕೋಟೆ ಮೈದಾನ ಹಾಗೂ ಜೂನಿಯರ್ ಕಾಲೇಜು ಮೈದಾನವನ್ನು ಕ್ರೀಡಾಂಗಣವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕ್ರೀಡಾಕೂಟ ನಡೆಸಬೇಕಾದ ಸೌಕರ್ಯ ಇಲ್ಲದೆ ಇಲ್ಲಿ ಶಾಲಾ– ಕಾಲೇಜು ಕ್ರೀಡಾಕೂಟ ಆಯೋಜಿಸಲು ಸಾಧ್ಯವಾಗುತ್ತಿಲ್ಲ. ಮಳೆಗಾಲದಲ್ಲಂತೂ ಈ ಮೈದಾನ ಕೆಸರು ಗದ್ದೆಯಂತೆ ಆಗುತ್ತದೆ. ಆಗ ಮೈದಾನಕ್ಕೆ ಕಾಲಿಡುವುದು ಕಷ್ಟ.
ಜೂನಿಯರ್ ಕಾಲೇಜು ಮೈದಾನವನ್ನು ವೈಯಕ್ತಿಕ ಆಟಗಳಿಗೆ ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಟ್ರ್ಯಾಕ್ ಇಲ್ಲದೆ ಓಟದ ಅಭ್ಯಾಸಕ್ಕೆ ತೊಂದರೆಯಾಗಿದೆ.
ಇಲಾಖೆ ಜೂನಿಯರ್ ಕಾಲೇಜು ಮೈದಾನವನ್ನು ಸ್ವಚ್ಛಗೊಳಿಸಿ ಟ್ರ್ಯಾಕ್‌ಗೆ ಬಣ್ಣ ಹಾಕಿ ತಾತ್ಕಾಲಿಕವಾಗಿ 100, 200, 400, 800 ಮೀಟರ್ ಓಟಕ್ಕೆ ಕ್ರೀಡಾಂಗಣ ಸಿದ್ಧಪಡಿಸುತ್ತಿದೆ. ಮಳೆಯಿಂದ ಕ್ರೀಡಾಂಗಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಇದರಿಂದ ಕ್ರೀಡಾ ಚಟುವಟಿಕೆ ಸ್ಥಗಿತವಾಗಿದೆ.
ಇಲ್ಲಿ ಕಳೆದ ಎರಡು ವರ್ಷದ ಹಿಂದೆ ಟ್ರ್ಯಾಕ್ ನಿರ್ಮಾಣ ಮಾಡಲಾಯಿತು. ಆದರೆ ಸುಸಜ್ಜಿತವಾಗಿ ನಿಯಮಾನುಸಾರ ಟ್ರ್ಯಾಕ್ ನಿರ್ಮಾಣ, ಮಳೆ ನೀರು ಹೋಗಲು ಟ್ರಾಂಚ್ ನಿರ್ಮಾಣ ಮಾಡಿಲ್ಲ. ಹೀಗಾಗಿ ಮಳೆ ನೀರು ಮೈದಾನದಲ್ಲಿ ನಿಲ್ಲುತ್ತದೆ.
ಮೈದಾನದ ಮಧ್ಯಭಾಗದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಿರುವುದರಿಂದ ಕಬ್ಬಡಿ, ಕೊಕ್ಕೊ, ವಾಲಿಬಾಲ್ ಮತ್ತು ಫುಟ್‌ಬಾಲ್ ನಂತಹ ಆಟ ಆಡಲು ಸಾಧ್ಯವಾಗದೆ, ಕ್ರೀಡಾಪಟುಗಳು ಈ ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ.
ಹೋಬಳಿ ಮತ್ತು ತಾಲ್ಲೂಕು ಮಟ್ಟದ ಕ್ರೀಡಾಕೂಟ ವೇಳೆ ಕಬಡ್ಡಿ, ಕೊಕ್ಕೊ, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್, ಥ್ರೋಬಾಲ್ ಅನ್ನು ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಯ ಮೈದಾನದಲ್ಲೇ ಆಡಿಸಲಾಗುತ್ತಿದೆ.
‘ಉದ್ದ ಜಿಗಿತ ಎತ್ತರ ಜಿಗಿತಕ್ಕೆ ಪ್ರತ್ಯೇಕ ಜಾಗವಿಲ್ಲದೆ ಕ್ರೀಡಾಕೂಟ ಆರಂಭದ ಎರಡು ದಿನ ಮುನ್ನ ತಾತ್ಕಾಲಿಕವಾಗಿ ಮೈದಾನ ಸಿದ್ಧಪಡಿಸಬೇಕು. ನಂತರ ಅದನ್ನು ಮುಚ್ಚಬೇಕು. ಎತ್ತರ ಜಿಗಿತಕ್ಕೆ ಹಾಸಿಗೆ ವ್ಯವಸ್ಥೆ ಇಲ್ಲ ಉದ್ದ ಜಿಗಿತಕ್ಕೆ ಮರಳನ್ನು ಹಾಕಿದರೆ ಕ್ರೀಡಾಕೂಟ ಮುಗಿಯುತ್ತಿದ್ದಂತೆ ಮರಳನ್ನು ಕದ್ದುಕೊಂಡು ಹೋಗುತ್ತಾರೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕರು.
ಪಟ್ಟಣದಲ್ಲಿ ಸುಸಜ್ಜಿತ ತಾಲ್ಲೂಕು ಕ್ರೀಡಾಂಗಣವನ್ನು ನಿರ್ಮಿಸಬೇಕೆಂದು ಕ್ರೀಡಾಪಟುಗಳು, ಕ್ರೀಡಾಸಕ್ತರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕ್ರೀಡಾ ಇಲಾಖೆ ನಿರ್ಲಕ್ಷ್ಯ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದೆ. ಪಟ್ಟಣದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಇದುವರೆಗೆ ಯಾವುದೇ ಕ್ರಮ ವಹಿಸಿಲ್ಲ. ಕೋಟೆ ಮೈದಾನದಲ್ಲಿ ಕೆಲವು ವರ್ಷಗಳ ಹಿಂದೆ ಕಾಟಚಾರಕ್ಕೆ ಎಂಬಂತೆ ಪೆವಿಲಿನ್ ನಿರ್ಮಾಣ ಮಾಡಲಾಗಿದೆ. ಇದನ್ನು ಬಿಟ್ಟರೆ ಕ್ರೀಡೆಗೆ ಸಂಬಂಧಿಸಿದಂತೆ ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡಿಲ್ಲ ಎಂದು ಕ್ರೀಡಾಪಟುಗಳು ದೂರಿದ್ದಾರೆ. 400 ಮೀಟರ್ ಸಿಂಥಟಿಕ್ ಟ್ರ್ಯಾಕ್ ನಿರ್ಮಿಸಲಾಗುವುದು ಎಂದು ಭರವಸೆ ನೀಡಿ ವರ್ಷವೇ ಕಳೆದಿದೆ. ಆದರೆ ಯಾವ ಕೆಲಸವು ಆಗಿಲ್ಲ. ಒಟ್ಟಾರೆ ಯೋಜನಾ ಸೇವಾ ಕ್ರೀಡಾ ಇಲಾಖೆ ನಿಷ್ಕ್ರಿಯವಾಗಿದೆ ಎಂದು ಕ್ರೀಡಾಪಟುಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೌಚಕ್ಕೆ ಬಯಲೇ ಗತಿ ಜೂನಿಯರ್ ಕಾಲೇಜು ಮೈದಾನದಲ್ಲಿ ವೈಯಕ್ತಿಕ ಕ್ರೀಡೆಗಳನ್ನು ನಡೆಸಲಾಗುತ್ತಿದೆ. ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ನಡೆಯುತ್ತವೆ. ಇಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದೆ ಇರುವುದರಿಂದ ಕ್ರೀಡಾಪಟುಗಳು ಬಯಲನ್ನೇ ಶೌಚಕ್ಕೆ ಅವಲಂಭಿಸಬೇಕಿದೆ. ಮಹಿಳಾ ಕ್ರೀಡಾಪಟುಗಳು ಮತ್ತು ಮಹಿಳಾ ಶಿಕ್ಷಕರು ಜೂನಿಯರ್ ಕಾಲೇಜಿನ ಶೌಚಾಲಯ ಬಳಸುತ್ತಿದ್ದಾರೆ. ಕುಡಿವ ನೀರಿಗೂ ಪರದಾಟ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಪ್ರತಿ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಮತ್ತು ಶಿಕ್ಷಕರು ಪರದಾಡುವಂತಾಗಿದೆ. ಕ್ರೀಡೆ ನಡೆಯುವ ಸಮಯದಲ್ಲಿ ಆಯೋಜಕರು ಕ್ಯಾನ್ ಮೂಲಕ ನೀರು ತರಬೇಕು.
ಪ್ರತ್ಯೇಕ ಕ್ರೀಡಾಂಗಣ ಬೇಕು ಕೋಟೆ ಮೈದಾನದಲ್ಲಿ 400 ಮೀಟರ್ ಟ್ರ್ಯಾಕ್ ನಿರ್ಮಾಣ ಮಾಡಿದರೆ ಸಾಕಷ್ಟು ಅನುಕೂಲವಾಗುತ್ತದೆ. ಸಾರ್ವಜನಿಕಕೂ ಕೂಡ ಬೆಳಗ್ಗೆ ಮತ್ತು ಸಂಜೆ ವಾಯು ವಿಹಾರ ನಡೆಸಬಹುದು. ಟ್ರ್ಯಾಕ್ ನಿರ್ಮಾಣವಾದರೆ ತಾಲ್ಲೂಕು ಮಟ್ಟದ ಕ್ರೀಡಾಕೂಟ ನಡೆಸಲು ಅನುಕೂಲವಾಗುತ್ತದೆ. ಪ್ರತ್ಯೇಕ ಕ್ರೀಡಾಂಗಣ ಇಲ್ಲದೆ ಕ್ರೀಡಾಕೂಟ ನಡೆಸಲು ಸಮಸ್ಯೆಯಾಗಿದೆ. -ಮುನಿಯಪ್ಪ ಪ್ರಭಾರ ದೈಹಿಕ ಶಿಕ್ಷಣ ಪರಿವೀಕ್ಷಕ
ಅಭ್ಯಾಸಕ್ಕೂ ಅಡ್ಡಿ ತಾಲ್ಲೂಕಿನಲ್ಲಿ ಕಬ್ಬಡಿ ಆಟ ಆಡಲು ಪ್ರತ್ಯೇಕ ಕ್ರೀಡಾಂಗಣ ಇಲ್ಲದೆ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ. ಕಬ್ಬಡಿ ಪಂದ್ಯಾವಳಿ ಆಯೋಜಿಸಿದರೆ ಇಲ್ಲಿ ಸೌಕರ್ಯ ಇಲ್ಲದೆ ಕ್ರೀಡಾಪಟುಗಳು ಪರದಾಡುವ ಸ್ಥಿತಿ ಇದೆ. ತಾಲ್ಲೂಕಿನಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ರೀಡಾಪಟುಗಳಿದ್ದಾರೆ. ಅವರ ಅಭ್ಯಾಸಕ್ಕೂ ಸಸಜ್ಜಿತ ಕ್ರೀಡಾಂಗಣ ಇಲ್ಲ.
-ವಿನೋದ್ ಜೂನಿಯರ್ ಕಬ್ಬಡಿ ಆಟಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.