ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಪಟ್ಟಣ | ಮಾವು ಗ್ರೇಡಿಂಗ್ ಘಟಕ ಸ್ಥಗಿತ: ಮಾವು ಬೆಳೆಗಾರರ ಗಾಯದ ಮೇಲೆ ಬರೆ

Published 1 ಮೇ 2024, 4:12 IST
Last Updated 1 ಮೇ 2024, 4:12 IST
ಅಕ್ಷರ ಗಾತ್ರ

ಚನ್ನಪಟ್ಟಣ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ (ಎಪಿಎಂಸಿ) ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಕಾರ್ಯಾರಂಭ ಮಾಡಿದ್ದ ಮಾವು ಗ್ರೇಡಿಂಗ್ ಘಟಕ ಕೇವಲ ಒಂದು ವರ್ಷದಲ್ಲೇ ಸ್ಥಗಿತಗೊಂಡಿದೆ. ಮಾವು ಇಳುವರಿ ಇಲ್ಲದೆ ಮೊದಲೇ ಸಂಕಷ್ಟಕ್ಕೆ ಸಿಲುಕಿದ್ದ ಮಾವು ಬೆಳೆಗಾರರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮಾವು ಅಭಿವೃದ್ಧಿ ಮಂಡಳಿ ಸಹಕಾರದೊಂದಿಗೆ ಜಿಲ್ಲಾ ಮಾವು ಮತ್ತು ತೆಂಗು ರೈತ ಉತ್ಪಾದಕ ಸಂಸ್ಥೆಯು ಈ ಘಟಕವನ್ನು ಖಾಸಗಿ ಕಂಪೆನಿಯೊಂದರ ಮುಖಾಂತರ ಸ್ಥಾಪನೆ ಮಾಡಿತ್ತು. ಈ ಘಟಕವನ್ನು 2023ರ ಏಪ್ರಿಲ್ 20ರಂದು ಉದ್ಘಾಟನೆ ಮಾಡಲಾಗಿತ್ತು. ಆದರೆ, ಕೇವಲ ಒಂದು ವರ್ಷದಲ್ಲೇ ಈ ಘಟಕ ಸ್ಥಗಿತಗೊಂಡಿದೆ. ಇದರಿಂದ ಮಾವು ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ.

ಮಾವಿನ ಕಾಯಿಗಳನ್ನು ಅದರ ಗಾತ್ರ ಹಾಗೂ ಬಣ್ಣದ ಆಧಾರದ ಮೇಲೆ ವಿವಿಧ ಬಗೆಯಲ್ಲಿ ವಿಂಗಡಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ. ಜತೆಗೆ ಮಾವಿನ ಕಾಯಿಗಳನ್ನು ಅದರ ತೂಕದ ಆಧಾರದ ಮೇಲೆ 100ಗ್ರಾಂ, 150ಗ್ರಾಂ, 200 ಗ್ರಾಂ, 250 ಗ್ರಾಂ ಹೀಗೆ ನಾಲ್ಕು ಗಾತ್ರಗಳಲ್ಲಿ ವಿಂಗಡಿಸುವುದು ಮಾತ್ರವಲ್ಲ ಮಾವಿನ ಬಣ್ಣ ಆಧರಿಸಿ ಅದು ಎಷ್ಟು ಮಾಗಿದೆ ಎಂಬುದನ್ನೂ ಅಳೆದು ಅದರ ಆಧಾರದ ಮೇಲೆ ಉತ್ಪನ್ನವನ್ನು ವರ್ಗೀಕರಿಸುವ ಸಾಮರ್ಥ್ಯ ಹೊಂದಿತ್ತು. ಇದರಿಂದ ಮಾವು ಬೆಳೆಗಾರರು ಫಸಲಿಗೆ ತಕ್ಕಂತೆ ಲಾಭ ಪಡೆಯಬಹುದಿತ್ತು. ಆದರೆ, ಈಗ ಘಟಕ ಸ್ಥಗಿತ ಮಾಡಿರುವುದರಿಂದ ಮಾವು ಬೆಳೆಗಾರರಿಗೆ ಲಾಭ ಕಡಿಮೆಯಾಗುವ ಸಂಭವ ಹೆಚ್ಚಾಗಿದೆ.

ಹಣ್ಣು ಮಾರುಕಟ್ಟೆಯಲ್ಲಿಯೇ ವಿಂಗಡಿಸಿ ಮಾರುವುದರಿಂದ ಅದಕ್ಕೆ ಉತ್ತಮ ಬೆಲೆ ಜತೆಗೆ ರಫ್ತಿನ ಅವಕಾಶ ಹೆಚ್ಚಾಗುತ್ತದೆ. ರಾಜ್ಯ ಹಾಗೂ ಹೊರ ರಾಜ್ಯಗಳ ವರ್ತಕರನ್ನು ಆಕರ್ಷಿಸಲು ಈ ವ್ಯವಸ್ಥೆ ಉತ್ತಮವಾಗಿತ್ತು. ಮಾವಿನ ಹಣ್ಣು ರಫ್ತು ಆಗಬೇಕಾದಲ್ಲಿ ಇಂತಹ ತಳಿ ಹಣ್ಣು ಕನಿಷ್ಠ ಮತ್ತು ಗರಿಷ್ಠ ಇಂತಿಷ್ಟೇ ತೂಕ ಇರಬೇಕು ಎನ್ನುವ ಲೆಕ್ಕಾಚಾರವಿರುವ ಕಾರಣ ವರ್ಗೀಕರಣ ಪ್ರಕ್ರಿಯೆ ಮಾಡುವುದು ಉತ್ತಮ. ಇದರಿಂದ ಮಾರುಕಟ್ಟೆಯಲ್ಲಿ ಗ್ರೇಡಿಂಗ್ ಗೆ ತಕ್ಕಂತೆ ಬೆಲೆ ಸಿಗುತ್ತದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಕಳೆದ ವರ್ಷ ರೈತರಿಗೆ ಅನುಕೂಲವಾಗಿದ್ದ ಈ ಘಟಕ ಈಗ ಸ್ಥಗಿತವಾಗಿರುವ ಕಾರಣ ಲಾಭಾಂಶ ನಿರೀಕ್ಷೆ ಮಾಡುವಂತಿಲ್ಲ ಎಂದು ರೈತರು ಅಭಿಪ್ರಾಯಪಡುತ್ತಾರೆ.

ಖಾಸಗಿ ಕಂಪನಿಯೊಂದು ಈ ಘಟಕಕ್ಕೆ ಬೇಕಾದ ಯಂತ್ರ ಪ್ರಾಯೋಗಿಕವಾಗಿ ಅಳವಡಿಸಿತ್ತು. ಟನ್‌ವೊಂದರ ಗ್ರೇಡಿಂಗ್ ಗೆ ಇಷ್ಟು ಎಂದು ಬೆಲೆ ನಿಗದಿ ಮಾಡಲಾಗಿತ್ತು. ಮಾವಿನ ಹಣ್ಣುಗಳ ಕಾಲ ಮುಗಿದ ನಂತರ ಘಟಕದಲ್ಲಿ ಅಳವಡಿಸಿದ್ದ ಯಂತ್ರ ತೆರವು ಮಾಡಲಾಯಿತು. ಈ ವರ್ಷ ಮತ್ತೆ ಘಟಕ ಪ್ರಾರಂಭಿಸುವ ಯೋಚನೆ ಇತ್ತು. ಆದರೆ, ಮಾವಿನಹಣ್ಣುಗಳ ಇಳುವರಿಯಲ್ಲಿ ಭಾರೀ ಪ್ರಮಾಣದ ಇಳಿಕೆ ಕಂಡು ಬಂದಿರುವ ಕಾರಣ ಘಟಕ ಪುನರಾರಂಭ ಯೋಚನೆ ಕೈಬಿಡಲಾಯಿತು ಎಂದು ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಚನ್ನಪಟ್ಟಣ ಎಪಿಎಂಸಿ ಮಾರುಕಟ್ಟೆಗೆ ಹಣ್ಣುಗಳ ಗ್ರೇಡಿಂಗ್ ಘಟಕದ ಅವಶ್ಯ ಇದೆ. ಇದು ಮಾವು ಜತೆಗೆ ಸೀಬೆ, ಸಪೋಟ ಸೇರಿದಂತೆ ವಿವಿಧ ಬಗೆ ಹಣ್ಣುಗಳನ್ನು ವರ್ಗೀಕರಿಸುವುದರಿಂದ ರೈತರಿಗೆ ಅನುಕೂಲವಾಗುತ್ತದೆ. ಕಳೆದ ವರ್ಷ ಘಟಕ ಪ್ರಾರಂಭಿಸಲಾಗಿತ್ತು. ಇದು ಶಾಶ್ವತ ಎಂದು ರೈತರು ತಿಳಿದು ಕೊಂಡಿದ್ದರು. ಆದರೆ, ಇದನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿದೆ ಎಂದು ನಂತರ ಅಧಿಕಾರಿಗಳು ಸಮಜಾಯಿಷಿ ನೀಡಿದರು. ಸರ್ಕಾರವೇ ಇದರ ಖರ್ಚು ವೆಚ್ಚ ಭರಿಸಿ ಘಟಕ ಪ್ರಾರಂಭಿಸಬೇಕು. ಇದರಿಂದ ಶಾಶ್ವತ ಘಟಕ ಪ್ರಾರಂಭಿಸಿದಂತಾಗುತ್ತದೆ ಎಂದು ಹಿರಿಯ ರೈತ ಮುಖಂಡ ಸಿ.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು.

ಮಾವು ಗ್ರೇಡಿಂಗ್ ಘಟಕ ಉದ್ಘಾಟನೆ ಸಂದರ್ಭದಲ್ಲಿ ಹಾಜರಿದ್ದ ಅಧಿಕಾರಿ ವರ್ಗ
ಮಾವು ಗ್ರೇಡಿಂಗ್ ಘಟಕ ಉದ್ಘಾಟನೆ ಸಂದರ್ಭದಲ್ಲಿ ಹಾಜರಿದ್ದ ಅಧಿಕಾರಿ ವರ್ಗ

ಪ್ರಾಯೋಗಿಕ ಘಟಕ

ಮಾವು ಹಣ್ಣುಗಳ ಗ್ರೇಡಿಂಗ್ ಘಟಕ ಸ್ಥಾಪನೆಯಾದ ನಂತರ ಮಾವು ಬೆಳೆಗಾರರು ಇದನ್ನು ವ್ಯವಸ್ಥಿತವಾಗಿ ಬಳಸಿಕೊಂಡಿಲ್ಲ. ಟನ್ ಗಟ್ಟಲೇ ಮಾವಿನ ಹಣ್ಣುಗಳು ಇದ್ದಾಗ ಈ ಘಟಕ ಉಪಯೋಗಕ್ಕೆ ಬರುತ್ತದೆ. ಮಾವು ಅಭಿವೃದ್ಧಿ ಮಂಡಳಿ ಸಹಕಾರದೊಂದಿಗೆ ಪ್ರಾಯೋಗಿಕವಾಗಿ ಘಟಕವನ್ನು ಪ್ರಾರಂಭಿಸಲಾಗಿತ್ತು. ಮಾವಿನ ಹಣ್ಣುಗಳ ಕಾಲ ಮುಗಿದ ನಂತರ ಖಾಸಗಿ ಕಂಪನಿಯು ಯಂತ್ರಗಳನ್ನು ತೆರವು ಮಾಡಿತು ಎಂದು ಚನ್ನಪಟ್ಟಣ ಎಪಿಎಂಸಿ ಕಾರ್ಯದರ್ಶಿ ಸುನೀಲ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT