ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಡೆ–ನುಡಿ ನಡುವಿನ ಕಂದಕ ಹೋಗಲಿ’

‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶಯ
Last Updated 9 ಆಗಸ್ಟ್ 2019, 15:36 IST
ಅಕ್ಷರ ಗಾತ್ರ

ರಾಮನಗರ: ‘ಸಮಾಜದಲ್ಲಿನ ಏರುಪೇರುಗಳನ್ನು ಹೋಗಲಾಡಿಸುವುದೇ ಮತ್ತೆ ಕಲ್ಯಾಣ ಕಾರ್ಯಕ್ರಮದ ಆಶಯವಾಗಿದೆ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಹಮತ ವೇದಿಕೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ 'ಮತ್ತೆ ಕಲ್ಯಾಣ' ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಸಮಾನತೆಯನ್ನು ತರಲು ವಚನ ಸಾಹಿತ್ಯ ಸಹಕಾರಿಯಾಗಲಿದೆ. ಜನರಲ್ಲಿನ ದ್ವೇಷ, ಅಸೂಯೆ, ಮತ್ಸರಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

12ನೇ ಶತಮಾನದ ಶರಣರು ಅನುಭವ ಮಂಟಪ ಎನ್ನುವ ಚಾವಡಿಯಲ್ಲಿ ಕುಳಿತು ಸಂವಾದ ಮಾಡುತ್ತಿದ್ದರು. ಅದರ ಫಲವೇ ವಚನಗಳು. ರೋಗಪೀಡಿತವಾಗಿರುವ ಇಂದಿನ ಸಮಾಜಕ್ಕೆ ಚಿಕಿತ್ಸೆ ನೀಡುವ ಶಕ್ತಿ ವಚನಗಳಿಗೆ ಇದೆ ಎಂದರು.

ಅರಿವಿಗೆ ತಕ್ಕ ಆಚಾರ ಬದುಕಿನಲ್ಲಿ ಬಂದರೆ ಸಾಮಾನ್ಯರೂ ಅಸಾಮಾನ್ಯರಾಗಲು ಸಾಧ್ಯ. ನಡೆ ಮತ್ತು ನುಡಿಯಲ್ಲಿನ ಕಂದಕವನ್ನು ಹೋಗಲಾಡಿಸುವುದೇ ಮತ್ತೆ ಕಲ್ಯಾಣದ ಉದ್ದೇಶವಾಗಿದೆ. ಅಭಿಯಾನದಲ್ಲಿ ಎಷ್ಟು ಜನ ಸೇರುವರು ಎನ್ನುವುದು ಮುಖ್ಯವಲ್ಲ; ಎಷ್ಟ ಜನ ತಮ್ಮನ್ನು ತಾವು ಪರಿವರ್ತನೆಗೆ ಒಳಗಾಗಿದ್ದಾರೆ ಎನ್ನುವುದು ಮುಖ್ಯ. ವ್ಯಕ್ತಿಗತ ವಿಕಾಸವಾಯಿತು ಅಂದ್ರೆ ಸಮಸಮಾಜ ಕಟ್ಟಲಿಕ್ಕೆ ಸಾಧ್ಯ. ಇಂದು ಸಣ್ಣ ಸಣ್ಣ ಪ್ರಸಂಗಗಳಿಗೆ ದುರ್ಬಲರಾಗುತ್ತಿದ್ದೇವೆ ಎಂದು ತಿಳಿಸಿದರು.

ಸಾಹಿತಿ ಡಾ. ಲತಾ ಮೈಸೂರು ಮಾತನಾಡಿ ವಚನಕಾರರು ಆತ್ಮ ಸಾಕ್ಷಿಯನ್ನೇ ಪರಮಾತ್ಮನ ರೂಪದಲ್ಲಿ ಕಂಡರು. ಅವರಿಗೆ ಇಹವೇ ಕೈಲಾಸ. ಸತ್ಯ ಶುದ್ಧ ಕಾಯಕಗಳೆಲ್ಲವೂ ಸಮಾನ. ಆತ್ಮ ಶೋಧನೆಯಿಂದ ಮಾತ್ರ ವ್ಯಕ್ತಿ ಎತ್ತರಕ್ಕೆ ಏರಲು ಸಾಧ್ಯ. ಅಹಂಕಾರದ ಕೋಟೆಯನ್ನು ನುಚ್ಚುನೂರು ಮಾಡಲು, ವಿಶ್ವಮಾನವನಾಗಲು ಇರುವ ಏಕೈಕ ಮಾರ್ಗ ಆತ್ಮಾವಲೋಕನವಾಗಿದೆ ಎಂದರು.

ನಮ್ಮ ಮನಸ್ಸಿನ ಕೊಳೆಯನ್ನು ತೊಳೆಯಲು ನಮ್ಮಿಂದ ಮಾತ್ರ ಸಾಧ್ಯ. ತನ್ನೊಳಗಿನ ಅರಿವೇ ಎಲ್ಲ ಚಳವಳಿಗಳ ಬೀಜ. ನಮ್ಮ ತಿಳುವಳಿಕೆ ನಮ್ಮೊಳಗಿದೆಯೇ ಹೊರತು ಹೊರಗಿನ ಗುಡಿಗುಂಡಾರಗಳಲ್ಲಿಲ್ಲ. ಏನೆಂದರಿಯರು, ಯಾಕಂದರಿಯರು ಕೇವಲ ಆಚರಣಗೆ ಜನ ಮುಗಿಬೀಳುತ್ತಿರುವರು. ದೇಹ ಭೋಗದ ಮಾಧ್ಯಮವಲ್ಲ; ಆತ್ಮದರ್ಶನಕ್ಕೆ ಸಾಧನ ಎಂದರು.

ಚಿಂತಕ ಡಾ.ಎಚ್.ವಿ. ವಾಸು ಮಾತನಾಡಿ, ಆಧ್ಯಾತ್ಮ ಯಾವುದೇ ಒಂದು ಧರ್ಮದ ಸ್ವತ್ತಲ್ಲ. ಇಹದ ಸಮಸ್ಯೆಗಳನ್ನು ಕುರಿತು ಮಾತನಾಡಿದ ಮೊದಲ ಧರ್ಮ ವಚನ ಧರ್ಮ. ವಚನ ಚಳುವಳಿಯ ನಾಯಕರಾದ ಬಸವಣ್ಣ, ಅಲ್ಲಮರನ್ನೂ ಪ್ರಶ್ನೆಗೆ ಒಳಗು ಮಾಡಿದ ಪರಂಪರೆ ನಮ್ಮದು. ವಚನ ಚಳವಳಿಯ ಬಗ್ಗೆ ಕರ್ನಾಟಕಕ್ಕೆ ತುಂಬ ಹೆಮ್ಮೆ ಇರಬೇಕಾಗಿತ್ತು. ಆದರೆ ವಚನಕಾರರನ್ನೂ ಒಂದೊಂದು ಜಾತಿಗೆ ಸೀಮಿತಗೊಳಿಸಿದುದರಿಂದ ಕರ್ನಾಟಕವನ್ನು ಬಿಟ್ಟು ವಚನಕಾರರ ಆಶಯಗಳು ಹೊರಗೆ ಹೋಗಲಿಲ್ಲ ಎಂದರು.

ನಮ್ಮ ವೃತ್ತಿಯನ್ನು ಘನವಾಗಿ ಪ್ರೀತಿಸುವುದೇ ದೇವರನ್ನು ಕಾಣುವ ದಾರಿ. ವರಮಹಾಲಕ್ಷ್ಮಿ ಹಬ್ಬದ ಮೌಢ್ಯವನ್ನು ತಿಳಿಸಲೆಂದೇ ಮತ್ತೆ ಕಲ್ಯಾಣ ಕಾರ್ಯಕ್ರಮವಾಗಿದೆ. ಕಾಫಿ ಡೇ ಮಾಲಿಕ ಸಿದ್ಧಾರ್ಥ ವಚನಗಳನ್ನು ಓದಿದ್ದರೆ, ಅರ್ಥಮಾಡಿಕೊಂಡಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಕತ್ತಲೆಯಲ್ಲಿದ್ದ ಬದುಕಿಗೆ ಶರಣರು ಬೆಳಕು ಚೆಲ್ಲಿದವರು. ಇಂಥ ಅಪರೂಪದ ಪರಂಪರೆಯನ್ನು ನಮ್ಮದಾಗಿಸಿಕೊಳ್ಳಬೇಕು. ಸರ್ವೋದ್ಧಾರವನ್ನು ಮುನ್ನಲೆಗೆ ತರಬೇಕು. ಎಡ-ಬಲ ಚಿಂತನೆಗಳಲ್ಲಿ ಸಾಮಾಜಿಕ ಜಾಲತಾಣಗಳು ವಿಭಜನೆಗೊಂಡಿರುವುದು ವಿಪರ್ಯಾಸ ಎಂದರು.

ವಿರಕ್ತಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ಜಾನಪದ ವಿದ್ವಾಂಸ ಡಾ. ಕುರುವ ಬಸವರಾಜ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್ ಮಾತನಾಡಿದರು. ರೈತ ಹೋರಾಟಗಾರ್ತಿ ಅನಸೂಯಮ್ಮ ಸ್ವಾಗತಿಸಿದರು. ಶಿಕ್ಷಕ ಎಂ.ಎಸ್. ಚನ್ನವೀರಪ್ಪ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕ ಶ್ರೀನಿವಾಸ ಕರಿಯಪ್ಪ ವಂದಿಸಿದರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರೊಂದಿಗೆ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಶಿವಸಂಚಾರ ತಂಡದವರು 'ಮೋಳಿಗೆ ಮಾರಯ್ಯ' ನಾಟಕವನ್ನು ಪ್ರದರ್ಶಿಸಿದರು.

ಸಾಮರಸ್ಯ ನಡಿಗೆ
ಮಿನಿ ವಿಧಾನ ಸೌಧದಿಂದ ಡಾ.ಬಿ.ಆರ್. ಅಂಬೇಡ್ಕರ್ ಭವನದವರೆಗೆ ನಡೆದ ಸಾಮರಸ್ಯ ನಡಿಗೆಗೆ ಲೇಖಕ ಬಿ. ಚಂದ್ರೇಗೌಡ ಚಾಲನೆ ನೀಡಿದರು. ನಡಿಗೆಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಮಲ್ಲಿಗೆ, ಉಪನ್ಯಾಸಕರಾದ ಎಸ್. ನರಸಿಂಹಮೂರ್ತಿ, ಡಿ.ಆರ್. ದೇವರಾಜ್, ಸಾಂಸ್ಕೃತಿಕ ಸಂಘಟಕಿ ಕವಿತಾರಾವ್, ಮುಖಂಡ ರಾಜಶೇಖರ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಶಂಕರಪ್ಪ, ಮಾಜಿ ಸಂಸದ ಚಂದ್ರಪ್ಪ, ಮುಖಂಡ ಷಣ್ಮುಗಪ್ಪ ಇದ್ದರು.

*
ಸಂವಾದದಿಂದ ಅಕ್ಷರದ ಅರಿವಿಲ್ಲದಿದ್ದರೂ ಸುಜ್ಞಾನಿಗಳಾಗಲು ಸಾಧ್ಯ. ಅನಕ್ಷರಸ್ಥರಿಗೂ ವಿವೇಕ ಹೇಳುವುದೇ ಮತ್ತೆ ಕಲ್ಯಾಣ.
-ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸಾಣೇಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT