ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಪಾದಯಾತ್ರೆ: ಇಮ್ಮಡಿಗೊಂಡ ಕಾಂಗ್ರೆಸ್‌ ಉತ್ಸಾಹ, 10 ಸಾವಿರ ಮಂದಿ ಭಾಗಿ

ಪಾದಯಾತ್ರೆಗೆ ಅಡ್ಡಿಯಾಗದ ಕೋವಿಡ್‌ ನಿಯಮ l ಸುಮ್ಮನಾದ ಸರ್ಕಾರ
Last Updated 9 ಜನವರಿ 2022, 19:31 IST
ಅಕ್ಷರ ಗಾತ್ರ

ಸಂಗಮ (ರಾಮನಗರ): ಹಲವು ಅಡ್ಡಿ ಆತಂಕಗಳನ್ನೂ ಮೀರಿ ಭಾನುವಾರ ಮೇಕೆದಾಟು ಪಾದಯಾತ್ರೆಯು ಮೊದಲ ದಿನ ಸುಸೂತ್ರವಾಗಿ ನಡೆದಿದ್ದು, ಕಾಂಗ್ರೆಸ್ ಪಾಳೆಯದ ಉತ್ಸಾಹ ಇಮ್ಮಡಿಗೊಂಡಿದೆ.

ಬೆಳಿಗ್ಗೆ 11.30ಕ್ಕೆ ವೇದಿಕೆ ಕಾರ್ಯಕ್ರಮ ಮುಕ್ತಾಯದ ಬಳಿಕ ಪಾದಯಾತ್ರೆ ಆರಂಭಗೊಂಡಿದ್ದು, ಕಾಂಗ್ರೆಸ್ ನಾಯಕರು ಉತ್ಸಾಹದಿಂದಲೇ ಹೆಜ್ಜೆ ಹಾಕಿದರು. ಆದರೆ ನಂತರದಲ್ಲಿ ಏರುಮುಖವಾದ ಹಾದಿ, ನೆತ್ತಿ ಸುಡುವ ಬಿಸಿಲಿನ ಕಾರಣಕ್ಕೆ ಪಾದಯಾತ್ರಿಕರು ಬಳಲಿದ್ದು ಕಂಡುಬಂದಿತು. ಅಲ್ಲಲ್ಲಿ ಪಾನೀಯ, ನೀರು ಕುಡಿಯುತ್ತಲೇ ‘ನೀರಿಗಾಗಿ ನಡಿಗೆ’ ಮುಂದುವರಿಯಿತು. ಡಿ.ಕೆ. ಶಿವಕುಮಾರ್ ಜೊತೆಗೆ ಆರ್‌.ವಿ. ದೇಶಪಾಂಡೆ, ಎಚ್‌.ಕೆ. ಪಾಟೀಲ, ಎಂ.ಬಿ. ಪಾಟೀಲ, ಜಿ. ಪರಮೇಶ್ವರ, ಡಿ.ಕೆ. ಸುರೇಶ್‌, ಪ್ರಿಯಾಂಕ್‌ ಖರ್ಗೆ ಸೇರಿದಂತೆ ಹಲವು ನಾಯಕರು ಒಂದಿಷ್ಟು ದೂರ ನಡೆದರು.

ಮಧ್ಯಾಹ್ನ 2.50ರ ಸುಮಾರಿಗೆ ಏಳು ಕಿ.ಮೀ. ಕ್ರಮಿಸಿ ಹೆಗ್ಗನೂರಿಗೆ ತಲುಪಿದ ಪಾದಯಾತ್ರಿಗಳು ಅಲ್ಲಿ ಕೆಲ ಕಾಲ ವಿಶ್ರಾಂತಿ ಪಡೆದರು. ಶಿವಕುಮಾರ್‌ ಸ್ವಲ್ಪ ಬಳಲಿದಂತೆ ಕಂಡುಬಂದಿದ್ದು, ಕಣ್ಣುಗಳು ಅದಾಗಲೇ ಕೆಂಪಾಗಿದ್ದವು. ಹೀಗಾಗಿ ಊಟದ ಬಳಿಕ ಕೆಲ ಹೊತ್ತು ನಿದ್ರೆಯ ಮೊರೆ ಹೋದರು. ಸಂಜೆ 5ರ ನಂತರ ಮತ್ತೆ ಪಾದಯಾತ್ರೆ ಆರಂಭಗೊಂಡಿದ್ದು, ರಾತ್ರಿ ಹೊತ್ತಿಗೆ ಶಿವಕುಮಾರ್ ಅವರ ತವರೂರು ದೊಡ್ಡಾಲಹಳ್ಳಿ ತಲುಪಿತು. ಅಲ್ಲಿ ಗ್ರಾಮಸ್ಥರು ಅವರಿಗೆ ಭವ್ಯ ಸ್ವಾಗತ ಕೋರಿದರು. ಮೊದಲ ದಿನ 14 ಕಿ.ಮೀ. ವರೆಗೆ ಪಾದಯಾತ್ರಿಗಳು ಹೆಜ್ಜೆ ಹಾಕಿದರು. ಅಲ್ಲಲ್ಲಿ ಗ್ರಾಮಸ್ಥರು ಪುಷ್ಪಾರ್ಚನೆ ಮೂಲಕ ಪಾದಯಾತ್ರಿಗಳನ್ನು ಬರಮಾಡಿಕೊಂಡಿದ್ದು, ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು.

ಪಾದಯಾತ್ರೆ ನಿಲ್ಲಿಸುವಂತೆ ರಾಮನಗರ ಜಿಲ್ಲಾಧಿಕಾರಿ ಕೆಪಿಸಿಸಿ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದ್ದರು. ನಿಯಮ ಉಲ್ಲಂಘಿಸಿ ಪಾದಯಾತ್ರೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದರು. ಹೀಗಾಗಿ ಭಾನುವಾರದ ಕಾರ್ಯಕ್ರಮದ ಕುರಿತು ಅನಿಶ್ಚಿತತೆ ಇತ್ತು. ಆದರೆ ಅಂತಹ ಯಾವುದೇ ಅನಿರೀಕ್ಷಿತ ಘಟನೆಗಳು ನಡೆಯಲಿಲ್ಲ.

10 ಸಾವಿರ ಮಂದಿ ಭಾಗಿ:ಮೊದಲ ದಿನವೇ ಕಾರ್ಯಕ್ರಮಕ್ಕೆ ಸುಮಾರು 10 ಸಾವಿರದಷ್ಟು ಜನರು ಬಂದಿದ್ದರು. ಹೊರ ಜಿಲ್ಲೆಗಳಿಂದಲೂ ಸಾಕಷ್ಟು ಮಂದಿ ಭಾಗಿಯಾಗಿದ್ದರು. ಆದರೆ ರಸ್ತೆಯಲ್ಲಿ ಹೆಜ್ಜೆ ಹಾಕುವವರಿಗಿಂತ ಕುತೂಹಲಕ್ಕೆ ಬಂದು ಹೋದವರ ಸಂಖ್ಯೆಯೇ ದುಪ್ಪಟ್ಟು ಇತ್ತು. ಆಯೋಜಕರು ಮಾಸ್ಕ್‌ ಹಾಗೂ ಸ್ಯಾನಿಟೈಸರ್ ವಿತರಿಸಿದರು. ತಪ್ಪದೇ ಮಾಸ್ಕ್‌ ಧರಿಸಿ ಓಡಾಡಿ ಎಂದು ಸಿದ್ದರಾಮಯ್ಯ ಮನವಿ ಮಾಡಿದರು. ಆದರೆ ಸ್ವತಃ ಡಿ.ಕೆ. ಶಿವಕುಮಾರ್‌ ಸೇರಿದಂತೆ ಸಾಕಷ್ಟು ಮಂದಿ ಮಾಸ್ಕ್‌ ಧರಿಸದೇ ಓಡಾಡಿದರು. ಪೊಲೀಸರು ಈ ಬಗ್ಗೆ ಮೌನವಾಗಿದ್ದರು. ವಾಹನಗಳ ಸಂಚಾರ ನಿಯಂತ್ರಣವಷ್ಟೇ ಅವರ ಕೆಲಸವಾಗಿತ್ತು.

ರಾಗಿಮುದ್ದೆ, ಮೈಸೂರು ಪಾಕ್ ಆತಿಥ್ಯ: ಪಾದಯಾತ್ರೆಗೆ ಬಂದ ಅಷ್ಟೂ ಜನರಿಗೆ ಕಾಂಗ್ರೆಸ್ ಊಟೋಪಚಾರದ ವ್ಯವಸ್ಥೆ ಮಾಡಿತ್ತು. ಬೆಳಿಗ್ಗೆ ಕಾರ್ಯಕ್ರಮದ ವೇದಿಕೆ ಬಳಿ ಉಪ್ಪಿಟ್ಟು, ಕೇಸರಿಬಾತ್‌, ರೈಸ್ ಬಾತ್‌ ಉಪಾಹಾರ ದೊರೆ
ಯಿತು. ಮಧ್ಯಾಹ್ನ ಹೆಗ್ಗನೂರಿನಲ್ಲಿ ರಾಗಿಮುದ್ದೆ, ಕಾಳು ಸಾಂಬಾರ್‌, ಪೂರಿ, ರೈಸ್ ಪಲಾವ್‌ ಜೊತೆಗೆ ವಡೆ ಹಾಗೂ ಮೈಸೂರು ಪಾಕ್‌ ಉಣಬಡಿಸಲಾಯಿತು. ಇದಲ್ಲದೆ ದಾರಿಯುದ್ದಕ್ಕೂ ಜನರಿಗೆ ಬೆಲ್ಲದ ಪಾನಕ, ನಿಂಬೆ ಷರಬತ್ತು, ಕಬ್ಬಿನ ಜ್ಯೂಸ್, ಕಿತ್ತಳೆ ಹಣ್ಣು ನೀಡಲಾಯಿತು.

ಪರಿಸರ ಸೂಕ್ಷ್ಮ ವಲಯದಲ್ಲಿ ಧ್ವನಿವರ್ಧಕದ ಸದ್ದು:ಪಾದಯಾತ್ರೆ ಆರಂಭಗೊಂಡ ಸಂಗಮ ಪ್ರದೇಶವು ಕಾವೇರಿ ವನ್ಯಜೀವಿ ಧಾಮಕ್ಕೆ ಸೇರಿದ್ದು, ಪರಿಸರ ಸೂಕ್ಷ್ಮ ವಲಯದಲ್ಲಿ ಧ್ವನಿವರ್ಧಕ ಹಾಗೂ ವಾದ್ಯವೃಂದದ ಬಳಕೆಗೆ ಆಕ್ಷೇಪ ವ್ಯಕ್ತವಾಗಿದೆ. ಕಾರ್ಯಕ್ರಮದಲ್ಲಿ ಬೆಳಿಗ್ಗೆಯಿಂದಲೇ ದೊಡ್ಡ ಮಟ್ಟದಲ್ಲಿ ಧ್ವನಿವರ್ಧಕಗಳನ್ನು ಬಳಕೆ ಮಾಡಲಾಗಿತ್ತು. ಕಾವೇರಿ ವನ್ಯಜೀವಿ ಧಾಮವು ಕೆಲವು ಅಪರೂಪದ ವನ್ಯಸಂಕುಲಗಳ ಆವಾಸಸ್ಥಾನವಾಗಿದೆ.

‘ಕಾರ್ಯಕ್ರಮದ ವೇದಿಕೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸದ್ಯಕ್ಕೆ ಯಾವ ರೀತಿಯ ನಿಯಮ ಉಲ್ಲಂಘನೆ ಕಂಡುಬಂದಿಲ್ಲ. ಅರಣ್ಯ ಪ್ರದೇಶದಲ್ಲಿ ನಿರ್ಬಂಧಿತ ಚಟುವಟಿಕೆಗಳು ನಡೆದಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಕಾವೇರಿ ವನ್ಯಜೀವಿ ಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್‌ ತಿಳಿಸಿದರು.

ಪಾದಯಾತ್ರೆಗೆ ಬಂದವರಿಗೆ ಉಚಿತ ಪೆಟ್ರೋಲ್:ಮೇಕೆದಾಟು ಪಾದಯಾತ್ರೆಗೆ ಬರುವವರಿಗೆ ಕನಕಪುರ ತಾಲ್ಲೂಕಿನಾದ್ಯಂತ ಉಚಿತ ಪೆಟ್ರೋಲ್ ವ್ಯವಸ್ಥೆ‌‌ ಮಾಡಲಾಗಿತ್ತು. ಪೆಟ್ರೋಲ್ ತುಂಬಿಸಿಕೊಳ್ಳಲು‌ ಜನರು‌ ಬಂಕ್‌ಗಳಿಗೆ ಮುಗಿಬಿದ್ದರು. ಗ್ರಾಮ ಪಂಚಾಯಿತಿಗಳಲ್ಲಿ ಈ‌ ಮೊದಲೇ ಕೂಪನ್ ಗಳನ್ನು ವಿತರಿಸಲಾಗಿತ್ತು. ಆ ಕೂಪನ್ ತಂದವರಿಗೆ ಬಂಕ್ ಗಳಲ್ಲಿ ₹300 ಮೊತ್ತದ ಪೆಟ್ರೋಲ್ ನೀಡಲಾಯಿತು. ಕನಕಪುರ-ಸಂಗಮ‌ ರಸ್ತೆಯಲ್ಲಿನ ಬಹುತೇಕ‌ ಪೆಟ್ರೋಲ್ ಬಂಕ್ ಗಳು ಗ್ರಾಹಕರಿಂದ ತುಂಬಿದ್ದವು.

ಅರ್ಧದಲ್ಲೇ ನಿರ್ಗಮಿಸಿದ ಸಿದ್ದರಾಮಯ್ಯ:ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅನಾರೋಗ್ಯದ ಕಾರಣಕ್ಕೆ ಅರ್ಧದಲ್ಲೇ ಪಾದಯಾತ್ರೆ ಮೊಟಕುಗೊಳಿಸಿ ಹಿಂತಿರುಗಿದರು. ಸಂಗಮದಿಂದ ನಡಿಗೆ ಆರಂಭಿಸಿದ ಸಿದ್ದರಾಮಯ್ಯ ನಂತರ ಎತ್ತರದಿಂದ ಕೂಡಿದ್ದ ರಸ್ತೆ ಏರಲು ಬೆವರು ಹರಿಸಿದರು. ಹೆಗ್ಗನೂರಿನವರೆಗೂ ಸುಮಾರು 7 ಕಿ.ಮೀ. ದೂರವನ್ನು ಪ್ರಯಾಸದಿಂದಲೇ ಕ್ರಮಿಸಿದರು. ಸುಸ್ತು, ಜ್ವರದಿಂದ ಬಳಲಿದಂತೆ ಕಂಡುಬಂದ ಅವರು ಕೊಂಚ ವಿಶ್ರಾಂತಿ ಪಡೆದು ಅಲ್ಲಿಂದ ಬೆಂಗಳೂರಿನತ್ತ ನಿರ್ಗಮಿಸಿದರು. ‘ಕೋವಿಡ್ ಬೂಸ್ಟರ್ ಲಸಿಕೆ ಪಡೆದಿದ್ದು, ಸುಸ್ತಾಗಿರುವ ಅವರು ನಿರ್ಗಮಿಸಿದ್ದಾರೆ’ ಎಂದು ಕಾಂಗ್ರೆಸ್ ಮುಖಂಡರು ಮಾಹಿತಿ ನೀಡಿದರು.

‘ಸಿದ್ದರಾಮಯ್ಯ ಅವರಿಗೆ 75 ವರ್ಷ ಆಗಿದ್ದು, ಸ್ಟೆಂಟ್‌ ಸಹ ಅಳವಡಿಸಲಾಗಿದೆ. ಅವರು ಗುಡ್ಡ ಹತ್ತುವುದು ಬೇಡ ಎಂದು ನಾವೇ ವಿಶ್ರಾಂತಿಗೆ ಕಳುಹಿಸಿದ್ದೇವೆ’ ಎಂದು ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT