ಭಾನುವಾರ, ಜನವರಿ 23, 2022
27 °C
11 ದಿನದ ಕಾಂಗ್ರೆಸ್‌ ಪಾದಯಾತ್ರೆ ನಾಲ್ಕೇ ದಿನಕ್ಕೆ ಮೊಟಕು

ಪಾದಯಾತ್ರೆ ಕೈಬಿಡಲು ಹೈಕಮಾಂಡ್‌ ಸೂಚನೆ: ಡಿಕೆಶಿಗೆ ಕರೆ ಮಾಡಿದ್ದ ರಾಹುಲ್‌ ಗಾಂಧಿ?

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ರಾಮನಗರ: ನಾಲ್ಕು ದಿನಗಳ ಕಾಲ ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಮೇಕೆದಾಟು ಪಾದಯಾತ್ರೆಗೆ ಗುರುವಾರ ಅಲ್ಪವಿರಾಮ ಬಿದ್ದಿದೆ. ಮುಂದೊಂದು ದಿನ ರಾಮನಗರದಿಂದಲೇ ನಡಿಗೆ ಮುಂದುವರಿಸುವ ಘೋಷಣೆಯನ್ನೂ ಮಾಡಲಾಗಿದೆ. 

ಹೈಕೋರ್ಟ್‌ ಆಕ್ಷೇಪ ಮತ್ತು ಹೈಕಮಾಂಡ್ ಸೂಚನೆ ಮೇರೆಗೆ ಪಾದಯಾತ್ರೆಯನ್ನು ಅನಿವಾರ್ಯವಾಗಿ ಅರ್ಧಕ್ಕೆ ಮೊಟಕುಗೊಳಿಸುವ ತೀರ್ಮಾನಕ್ಕೆ ಬರಲಾಯಿತು ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.  

ರಾಮನಗರ ಕಾಂಗ್ರೆಸ್ ಕಚೇರಿ ಮುಂಭಾಗ ಬೆಳಿಗ್ಗೆಯಿಂದಲೇ ನಾಟಕೀಯ ಬೆಳವಣಿಗೆಗಳು ನಡೆದವು. ಸರ್ಕಾರದ ಜೊತೆಗೆ ಕಾಂಗ್ರೆಸ್ ಸಂಘರ್ಷಕ್ಕೆ ಇಳಿಯಬಹುದು ಎನ್ನುವ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಮಧ್ಯಾಹ್ನ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ‘ಜನರ ಆರೋಗ್ಯದ ಹಿತದೃಷ್ಟಿಯಿಂದ ಮೇಕೆದಾಟು ಪಾದಯಾತ್ರೆಗೆ ಸದ್ಯ ವಿರಾಮ ನೀಡುತ್ತಿದ್ದೇವೆ’ ಎಂದು ಘೋಷಿಸಿದರು. ಬಳಿಕ ಕಾಂಗ್ರೆಸ್‌ ಕಚೇರಿಯ ಹೊರಗೆ ಬಂದು, ಪಾದಯಾತ್ರೆಗೆ ಸಹಕರಿಸಿದ ಜನರಿಗೆ, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.

ಹೈಕಮಾಂಡ್‌ ಸೂಚನೆ: ಕೋವಿಡ್ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಕುರಿತು ಕಾಂಗ್ರೆಸ್ ದೇಶದಾದ್ಯಂತ ಅಭಿಯಾನ ನಡೆಸುತ್ತಿದೆ. ಹೀಗಿರುವಾಗ ಕರ್ನಾಟಕದಲ್ಲಿ ಹಮ್ಮಿಕೊಂಡಿರುವ ಪಾದಯಾತ್ರೆಯಿಂದ ಸೋಂಕು ಹೆಚ್ಚಾದಲ್ಲಿ ಪಕ್ಷಕ್ಕೆ ಅಪಕೀರ್ತಿ. ಹೀಗಾಗಿ, ಸದ್ಯ ಪಾದಯಾತ್ರೆ ಕೈಬಿಡುವುದು ಒಳಿತು ಎಂದು ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿತ್ತು. ಸ್ವತಃ ರಾಹುಲ್ ಗಾಂಧಿ ಅವರೇ, ಶಿವಕುಮಾರ್ ಅವರಿಗೆ ಕರೆ ಮಾಡಿ ಈ ಬಗ್ಗೆ ಮಾತನಾಡಿದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಬೆಳಿಗ್ಗೆ 11ರ ವೇಳೆಗೆ ಕಾಂಗ್ರೆಸ್‌ ಕಚೇರಿಗೆ ಧಾವಿಸಿದ ಸಿದ್ದರಾಮಯ್ಯ, ಡಿಕೆಶಿ ಜೊತೆಗೂಡಿ ಪಕ್ಷದ ಇತರೇ ಮುಖಂಡರ ಜತೆ ಸಾಧಕ–ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿದರು.

‘ರಾಜ್ಯದಲ್ಲಿ ಸದ್ಯ ಕೋವಿಡ್ ಸೋಂಕು ಮಿತಿಮೀರಿದೆ. ಒಂದು ವೇಳೆ ಇದು ಇನ್ನಷ್ಟು ಉಲ್ಬಣ ಆದಲ್ಲಿ ಅದಕ್ಕೆ ಸರ್ಕಾರ ಕಾಂಗ್ರೆಸ್ ಪಕ್ಷವನ್ನೇ ಹೊಣೆಯಾಗಿಸಲಿದೆ. ಹೀಗಾಗಿ ಸದ್ಯಕ್ಕೆ ಪಾದಯಾತ್ರೆ ನಿಲ್ಲಿಸೋಣ’ ಎಂದು ಸಲಹೆ ನೀಡಿದರು. ಆದರೆ, ಇದಕ್ಕೆ ಬೇಸರ ವ್ಯಕ್ತಪಡಿಸಿದ ಶಿವಕುಮಾರ್, ‘ಜನರನ್ನು ಸೇರಿಸದಿದ್ದರೆ ಬೇಡ. ನಾವು ಐದು ಮಂದಿಯಾದರೂ ನಡಿಗೆ ಮುಂದುವರಿಸೋಣ’ ಎಂದರು. ನ್ಯಾಯಾಲಯದಲ್ಲಿ ಶುಕ್ರವಾರ ನಡೆಯಲಿರುವ ಪಿಐಎಲ್‌ ವಿಚಾರಣೆ ಬಗ್ಗೆಯೂ ಚರ್ಚಿಸಲಾಯಿತು. ಅಂತಿಮವಾಗಿ, ಸದ್ಯಕ್ಕೆ ಪಾದ ಯಾತ್ರೆ ಕೈಬಿಡುವ ನಿರ್ಧಾರಕ್ಕೆ ಬರಲಾಯಿತು.

4 ದಿನ, 60 ಕಿ.ಮೀ ಹೆಜ್ಜೆ

ಇದೇ 9ರಂದು ಆರಂಭವಾದ ಪಾದಯಾತ್ರೆಯು 12ರವರೆಗೆ ಪೂರ್ಣ ಪ್ರಮಾಣದಲ್ಲಿ ನಡೆಯಿತು. ಒಟ್ಟಾರೆ 60.5 ಕಿಲೊಮೀಟರ್‌ಗಳಷ್ಟು ಪಾದಯಾತ್ರೆ ನಡೆಯಿತು. ಮೊದಲ ದಿನ ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಪಾದಯಾತ್ರೆ ಆರಂಭಗೊಂಡು ಡಿಕೆಶಿ ಸ್ವಗ್ರಾಮವಾದ ದೊಡ್ಡಾಲಹಳ್ಳಿವರೆಗೆ 15 ಕಿ.ಮೀ ಸಾಗಿ ಬಂತು.

ಎರಡನೇ ದಿನದಂದು ದೊಡ್ಡಾಲಹಳ್ಳಿಯಿಂದ ಕನಕಪುರ ನಗರದವರೆಗೆ 16 ಕಿ.ಮೀ, ಮೂರನೇ ದಿನ ಕನಕಪುರದಿಂದ ಚಿಕ್ಕೇನಹಳ್ಳಿವರೆಗೆ 14.5 ಕಿ.ಮೀ ಹಾಗೂ ನಾಲ್ಕನೇ ದಿನ ಚಿಕ್ಕೇನಹಳ್ಳಿಯಿಂದ ರಾಮನಗರ ಟೌನ್‌ವರೆಗೆ 15 ಕಿ.ಮೀ. ಕ್ರಮಿಸಿತು. ಸಂಗಮದಿಂದ ಆರಂಭವಾದ 11 ದಿನದ ಪಾದಯಾತ್ರೆಯನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಒಟ್ಟಾರೆ 123 ಕಿ.ಮೀ. ಕ್ರಮಿಸಬೇಕಾಗಿತ್ತು. 

ಡಿಕೆಶಿಗೆ ಮಧ್ಯರಾತ್ರಿ ನೋಟಿಸ್‌

ಪಾದಯಾತ್ರೆ ನಿಲ್ಲಿಸುವಂತೆ ರಾಮನಗರ ಜಿಲ್ಲಾಧಿಕಾರಿ ಆದೇಶಿಸಿದ್ದ ನೋಟಿಸ್ ಹಿಡಿದು ಬುಧವಾರ ಮಧ್ಯರಾತ್ರಿ 12.30ರ ಸುಮಾರಿಗೆ ರಾಮನಗರ ಅಧಿಕಾರಿಗಳ ತಂಡವು ಕನಕಪುರದ ಡಿ.ಕೆ. ಶಿವಕುಮಾರ್ ಮನೆ ಪ್ರವೇಶಿಸಿತು. ಈ ವೇಳೆ ಮನೆಯಲ್ಲೇ ಇದ್ದ ಶಿವಕುಮಾರ್ ನೋಟಿಸ್ ಪಡೆಯಲು ನಿರಾಕರಿಸಿದರು. ಹೀಗಾಗಿ, ಅಧಿಕಾರಿಗಳು ಅವರ ಮನೆ ಬಾಗಿಲಿಗೇ ನೋಟಿಸ್ ಅಂಟಿಸಿ ವಾಪಸ್‌ ಆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು