ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಾಯಕರು ಪಕ್ಷ ಬಿಡುವಾಗ ಎಲ್ಲೋಗಿತ್ತು ಬಿಜೆಪಿ ನಾಯಕತ್ವ?: ಸಚಿವ ರಾಮಲಿಂಗಾ ರೆಡ್ಡಿ

ಬಿಜೆಪಿ ನಾಯಕರಿಗೆ ಜಿಲ್ಲಾ ಉಸ್ತುವಾರಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ
Published 26 ಜನವರಿ 2024, 15:26 IST
Last Updated 26 ಜನವರಿ 2024, 15:26 IST
ಅಕ್ಷರ ಗಾತ್ರ

ರಾಮನಗರ: ‘ವಿಧಾನಸಭಾ ಚುನಾವಣೆಗೂ ಮುಂಚೆ ಹಲವು ನಾಯಕರು ಬಿಜೆಪಿ ತೊರೆದರು. ಆಗ ಅವರಲ್ಲಿ ನಾಯಕತ್ವ ಎಲ್ಲೋಗಿತ್ತು? ನಾಯಕರು ಎಲ್ಲಿದ್ದರು? ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಕೊರತೆ ಇದೆ ಎನ್ನುವವರು ಈ ಬಗ್ಗೆ ಆಲೋಚಿಸಬೇಕು...’

– ಕಾಂಗ್ರೆಸ್‌ನಲ್ಲಿ ನಾಯಕತ್ವ ಕೊರತೆ ಮತ್ತು ಬಿಜೆಪಿಗೆ ಮತ್ತಷ್ಟು ಮಂದಿ ಸೇರ್ಪಡೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿಯೂ ಆಗಿರುವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯಿಸಿದ್ದು ಹೀಗೆ.

‘ಕೆಲ ತಿಂಗಳ ಹಿಂದೆ ನಡೆದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಗೆ 4.80 ಕೋಟಿ ಹಾಗೂ ಕಾಂಗ್ರೆಸ್‌ಗೆ 4.90 ಕೋಟಿ ಮತಗಳು ಬಂದವು. ಬಿಜೆಪಿಗೆ ಗೆಲುವು ಸಿಕ್ಕರೂ ಅವರಿಗಿಂತಲೂ ನಮಗೆ ಹೆಚ್ಚು ಮತ ಸಿಕ್ಕಿವೆ. ಅಂದರೆ, ದೇಶದ ಜನ ನಮ್ಮ ಪರವಾಗಿದ್ದಾರೆ ಅಲ್ಲವೆ?’ ಎಂದರು.

‘ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. 2018ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಅಸ್ತಿತ್ವದಲ್ಲಿದ್ದಾಗ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನದಲ್ಲಷ್ಟೇ ಗೆದ್ದಿತ್ತು. ಆಗ ನಮ್ಮ ಸರ್ಕಾರ ಬಿದ್ದೋಗಿತ್ತಾ’ ಎಂದು ತಿರುಗೇಟು ನೀಡಿದರು.

‘ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದ ಜೀವಹಾನಿ ಆಗುತ್ತಿರುವುದನ್ನು ತಡೆಯಲು ರೈಲ್ವೆ ಬ್ಯಾರಿಕೇಡ್ ಹಾಕಲು ₹45 ಕೋಟಿ ಕೊಟ್ಟಿದ್ದೇವೆ. ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT