ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರರ ಕ್ಷೇತ್ರದಲ್ಲಿ ಬದಲಾವಣೆ ಖಚಿತ: ರಾಮಲಿಂಗಾ ರೆಡ್ಡಿ

ಸಚಿವ ರಾಮಲಿಂಗಾ ರೆಡ್ಡಿ ವಿಶ್ವಾಸ: ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ
Published 22 ಮೇ 2024, 5:07 IST
Last Updated 22 ಮೇ 2024, 5:07 IST
ಅಕ್ಷರ ಗಾತ್ರ

ರಾಮನಗರ: ‘ವಿಧಾನ ಪರಿಷತ್‌ನ ಬೆಂಗಳೂರು ಪದವೀಧರರ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಈ ಸಲ ಕ್ಷೇತ್ರದಲ್ಲಿ ಕಾಂಗ್ರೆಸ್ ಖಚಿತವಾಗಿ ಗೆಲುವು ಸಾಧಿಸಲಿದೆ. ಪರಿಷತ್‌ 6 ಸ್ಥಾನಗಳ ಪೈಕಿ 5ರಲ್ಲಿ ಪಕ್ಷ ಗೆಲುವು ಸಾಧಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್ ಕಚೇರಿ ಬಳಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಏನಾದರೂ ಮಾಡಿಕೊಳ್ಳಲಿ. ಆ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ರಾಮೋಜಿ ಗೌಡ ಈಗಾಗಲೇ ಎರಡು ಸಲ ಕಡಿಮೆ ಮತಗಳ ಅಂತರದಿಂದ ಸೋತಿದ್ದಾರೆ. ಆದರೂ ಸುಮ್ಮನೆ ಕೂರದೆ ಚುನಾವಣೆಗೆ ತಯಾರಿ ನಡೆಸಿಕೊಂಡು ಬಂದಿದ್ದಾರೆ’ ಎಂದರು. 

‘ಶಿಕ್ಷಕರ ಕ್ಷೇತ್ರದಿಂದ ಗೆದ್ದಿರುವ ಪುಟ್ಟಣ್ಣ ಅವರು ನಮ್ಮಲ್ಲಿರುವುದರಿಂದ ಈ ಚುನಾವಣೆಗೆ ನಮಗೆ ಆನೆ ಬಲ ಬಂದಿದೆ. ಕ್ಷೇತ್ರದ ಎಲ್ಲಾ ಕಡೆಯೂ ಕಾಂಗ್ರೆಸ್ ಅಭ್ಯರ್ಥಿ ಪರವಾದ ವಾತಾವರಣವಿದೆ. ಹಾಗಾಗಿ, ಈ ಸಲ ನಾವು ಗೆಲ್ಲುವುದರಲ್ಲಿ ಅನುಮಾನವಿಲ್ಲ. ಮುಂಚೆ ಪರಿಷತ್ ಚುನಾವಣೆ ಬಗ್ಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅಷ್ಟಾಗಿ ತಲೆ ಹಾಕುತ್ತಿರಲಿಲ್ಲ. ಈ ಸಲ ಎಲ್ಲರೂ ಸಕ್ರಿಯವಾಗಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ’ ಎಂದರು.

ವಿಪಕ್ಷಗಳಿಗೆ ಕಣ್ಣು–ಕಿವಿ ಇಲ್ಲ: ‘ಒಂದು ವರ್ಷ ಪೂರೈಸಿದ ರಾಜ್ಯ ಸರ್ಕಾರದ ಶೂನ್ಯ ಸಾಧನೆ ಮಾಡಿದೆ’ ಎಂಬ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ರೆಡ್ಡಿ, ‘ಅವರಿಗೆ ಕಣ್ಣು ಮತ್ತು ಕಿವಿ ಇಲ್ಲ. ಬಾಯಿಗೆ ಬಂದಂತೆ ಮಾತನಾಡುವುದೇ ಅವರ ಚಾಳಿಯಾಗಿದೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಯಶಸ್ವಿ ಜಾರಿ ಸೇರಿದಂತೆ ವಿವಿಧ ಸಾಧನೆಗಳನ್ನು ಕಂಡು ಅಸೂಯೆಯಿಂದ ಏನೇನೊ ಮಾತನಾಡುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಹಿಂದೆ ಬಿಜೆಪಿ ಸರ್ಕಾರವಿದ್ದಾಗ ರಾಜ್ಯದ ಸ್ಥಿತಿ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ನೇಮಕಾತಿಗಳಲ್ಲಿ ಅಕ್ರಮ, ನೈತಿಕ ಪೊಲೀಸ್‌ಗಿರಿ, ಹದಗೆಟ್ಟಿದ್ದ ಕಾನೂನು ಮತ್ತು ಸುವ್ಯವಸ್ಥೆ, ಹಲಾಲ್, ಹಿಜಾಬ್ ಸೇರಿದಂತೆ ಜನರ ನೆಮ್ಮದಿ ಹಾಳುವ ವಿಷಯಗಳೇ ಹೆಚ್ಚು ಸದ್ದು ಮಾಡಿದ್ದವು. ನಮ್ಮ ಸರ್ಕಾರ ಅದಕ್ಕೆ ತದ್ವಿರುದ್ಧವಾಗಿ ಜನಪರ ಆಡಳಿತ ನೀಡುತ್ತಿದೆ’ ಎಂದರು.

‘ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ಹಿಂದೆ ಪೂರ್ಣಾವಧಿ ಸರ್ಕಾರವಿದ್ದಾಗಲೂ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ. ಈ ಸಲವೂ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರದ ಬೆಳವಣಿಗೆ ಸಹಿಸದ ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ’ ಎಂದು ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಪದವೀಧರರ ಕ್ಷೇತ್ರದ ಅಭ್ಯರ್ಥಿ ರಾಮೋಜಿ ಗೌಡ ಹಾಗೂ ಪಕ್ಷದ ಮುಖಂಡರು ಇದ್ದರು. ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರೊಂದಿಗೆ ಸಭೆ ನಡೆಯಿತು. 

ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಕೇಂದ್ರ ಸರ್ಕಾರ ಫೋನ್‌ ಕದ್ದಾಲಿಕೆ ಮಾಡುತ್ತಿದೆ ಎಂದು ಆರೋಪಿಸಿದ್ದರು. ಈಗ ನಾವು ಅಧಿಕಾರದಲ್ಲಿರುವಾಗ ನಮ್ಮ ಮೇಲೂ ಆರೋಪ ಮಾಡಿದ್ದಾರೆ. ಅವರ ಮಾತಲ್ಲಿ ಹುರುಳಿಲ್ಲ
– ರಾಮಲಿಂಗಾ ರೆಡ್ಡಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜ್ವಲ್ ಪ್ರಕರಣದಿಂದ ರಾಜ್ಯಕ್ಕೆ ಕೆಟ್ಟ ಹೆಸರು

‘ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪ್ರಕರಣದಿಂದ ಅವರ ಕುಟುಂಬಕ್ಕಷ್ಟೇ ಅಲ್ಲ ಕರ್ನಾಟಕಕ್ಕೂ ಕೆಟ್ಟ ಹೆಸರು ಬಂದಿದೆ. ಅವರ ಪ್ರಕರಣಕ್ಕೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರ ವೈಯಕ್ತಿಕ ವಿಚಾರ. ತಪ್ಪು ಮಾಡಿದ್ದಲ್ಲದೆ ಅದನ್ನು ರೆಕಾರ್ಡ್ ಮಾಡಿಕೊಳ್ಳಿ ಅಂತ ಸರ್ಕಾರ ಹೇಳಿತ್ತೇ. ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಲಾಗಿದ್ದು ತಪ್ಪಿತಸ್ಥರು ಯಾರೆಂದು ಗೊತ್ತಾಗಲಿದೆ. ವಿರೋಧ ಪಕ್ಷದವರು ಹೇಳುವಂತೆ ಪ್ರಕರಣವನ್ನು ವಿರೋಧ ಪಕ್ಷಕ್ಕೆ ವಹಿಸುವ ಅಗತ್ಯವಿಲ್ಲ. ನಮ್ಮ ಪೊಲೀಸರೇ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿದ್ದಾರೆ. 2013–18ರ ಅವಧಿಯಲ್ಲಿ ನಮ್ಮ ಸರ್ಕಾರವಿದ್ದಾಗ ಕೆಲ ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೆವು. ಎಲ್ಲವೂ ಮುಗಿದ ಅಧ್ಯಾಯವಾಗಿವೆ. ಡಿ.ಕೆ. ರವಿ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಅಂತಿಮವಾಗಿ ಸತ್ಯಾಂಶ ಏನೆಂಬುದು ಎಲ್ಲರಿಗೂ ಗೊತ್ತಾಯಿತು. ಪ್ರಜ್ವಲ್ ಪ್ರಕರಣದಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗುವ ಜೊತೆಗೆ ಸಂತ್ರಸ್ತರಿಗೆ ನ್ಯಾಯ ಸಿಗಲಿದೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರಜ್ವಲ್ ಪ್ರಕರಣ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT