ಸೋಮವಾರ, ಆಗಸ್ಟ್ 15, 2022
20 °C
ಮರಾಠಾ ಅಭಿವೃದ್ದಿ ಪ್ರಾಧಿಕಾರ ರಚನೆ ಖಂಡಿಸಿ ಕರ್ನಾಟಕ ಬಂದ್

ಸರಣಿ ಪ್ರತಿಭಟನೆ; ಸರ್ಕಾರಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಶನಿವಾರ ಕನ್ನಡಪರ ಸಂಘಟನೆಗಳ ಒಕ್ಕೂಟವು ಕರೆ ನೀಡಿದ್ದ ಕರ್ನಾಟಕ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ
ನಡೆಸಿದವು.

ಮುಂಜಾನೆ 5.30ಕ್ಕೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ, ಕನ್ನಡಪರ ಹೋರಾಟಗಾರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಕಾಳಿಸ್ವಾಮಿ, ಶಾಸಕ ಬಸವನಗೌಡ ಪಾಟೀಲ ಯತ್ನಾಳರ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹನ ಮಾಡಿದರು.

ಈ ಸಂದರ್ಭ ರಮೇಶ್‌ ಗೌಡ ಮಾತನಾಡಿ ‘ರಾಜ್ಯ ಸರ್ಕಾರವು ಮರಾಠಾ ನಿಗಮದ ಮೂಲಕ ನಾಡ ವಿರೋಧಿ ನೀತಿ ಅನುಸರಿಸುತ್ತಿದ್ದು, ಇದನ್ನು ಕೂಡಲೇ ಕೈಬಿಡಬೇಕು. ಈ ಬಗ್ಗೆ ಸಚಿವರು ಉದ್ದಟತನದ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಮಾತುಕತೆಗೆ ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.
ಟೊಯೊಟಾ ಕಂಪನಿಯ ನೌಕರರ ಮುಷ್ಕರ ವಿಚಾರದಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೇಶ್‌ಗೌಡ, ರಾಜ್ಯ ಉಪಾಧ್ಯಕ್ಷರಾದ ಬೆಂಕಿ ಶ್ರೀಧರ್, ರಂಜಿತ್‍ಗೌಡ, ಪದಾಧಿಕಾರಿಗಳಾದ ನಾಗರತ್ನ, ನಿಂಗೇಗೌಡ, ಚಂದ್ರೇಗೌಡ, ದಿಲೀಪ್, ಮೆಣಸಿಗನಹಳ್ಳಿ ಮಹೇಶ್ ಮತ್ತಿತರರು ಇದ್ದರು.

ಕದಂಬ ಸೈನ್ಯ: ಸಂಘಟನೆಯ ಪದಾಧಿಕಾರಿಗಳು ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪ್ರಾಧಿಕಾರವನ್ನು ಕೂಡಲೇ ರದ್ದು ಮಾಡಬೇಕು. ಕನ್ನಡಿಗರಿಗೆ ಮೊದಲ ಆದ್ಯತೆ ಹಾಗೂ ಈ ಸಮುದಾಯದ ಅಭಿವೃದ್ಧಿಗೆ  ಅವಕಾಶ ಮಾಡಿಕೊಡಬೇಕು. ಅನ್ಯ ರಾಜ್ಯದವರಿಗೆ ಮಣೆ ಹಾಕುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಹಾಗೂ ಜೆಡಿಎಸ್‌ ಪಕ್ಷಗಳು ಈ ಬಗ್ಗೆ ಹೋರಾಟದಲ್ಲಿ ಕೈಜೋಡಿಸಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ಮುಖಂಡರಾದ ಬೇಕ್ರಿ ರಮೇಶ, ಎಸ್. ಶಿವಕುಮಾರ್, ಉಮೇಶ್‌ ರಾಂಪುರ ಮತ್ತಿತರರು ಇದ್ದರು.

ಕರುನಾಡ ಸೇನೆ: ಸಂಘಟನೆಯ ಪದಾಧಿಕಾರಿಗಳು ರಾಜ್ಯ ಉಪಾಧ್ಯಕ್ಷ ಜಗದೀಶ ನೇತೃತ್ವದಲ್ಲಿ ಐಜೂರು ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ಹಾಗೂ ಮಂತ್ರಿಗಳ ಪ್ರತಿಕೃತಿ ದಹಿಸಿದ ಕಾರ್ಯಕರ್ತರು
ಪ್ರಾಧಿಕಾರ ರಚನೆ ನಿರ್ಣಯವನ್ನು ಕೈಬಿಡುವಂತೆ ಒತ್ತಾಯಿಸಿದರು.

ಕರವೇ ಪದಾಧಿಕಾರಿಗಳು ಪೊಲೀಸ್‌ ವಶಕ್ಕೆ
ಕರ್ನಾಟಕ ಬಂದ್‌ ಬೆಂಬಲಿಸಿ ಬೆಳಗ್ಗೆ ಐಜೂರು ವೃತ್ತದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ತಡೆಗೆ ಮುಂದಾದ ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣಗೌಡ ಬಣ) 20ಕ್ಕೂ ಹೆಚ್ಚು ಕಾರ್ಯಕರ್ತರನ್ನು
ಪೊಲೀಸರು ವಶಕ್ಕೆ ಪಡೆದರು.

ಈ ಸಂದರ್ಭ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಕಬ್ಬಾಳೇಗೌಡ ಮಾತನಾಡಿ ‘ಯಾವುದೇ ಪೂರ್ವಯೋಜಿತ ಅಧ್ಯಯನ ಇಲ್ಲವೇ ಆಯೋಗಗಳ ಶಿಫಾರಸು ಇಲ್ಲದೇ ರಾಜ್ಯ ಸರ್ಕಾರವು ಏಕಾಏಕಿ ಒಂದು ಭಾಷಿಕ ಸಮುದಾಯಕ್ಕೆ ಪ್ರಾಧಿಕಾರ ರಚನೆ ಮಾಡಿರುವುದು ಅಪ್ಪಟ ರಾಜಕೀಯ ತಂತ್ರಗಾರಿಕೆಯಾಗಿದೆ. ಕರ್ನಾಟಕದ ಗಡಿಭಾಗದಲ್ಲಿ ಎಂಇಎಸ್‌, ಶಿವಸೇನೆ ಮೊದಲಾದ ಸಂಘಟನೆಗಳು ಕನ್ನಡಿಗರು ಮತ್ತು ಮರಾಠಿಗರ ನಡುವೆ ವೈಷಮ್ಯ ಹುಟ್ಟಿಸುವ ಕೆಲಸ ಮಾಡುತ್ತಿವೆ. ಮೊದಲು ಅದಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ಕನ್ನಡಿಗರು ಮತ್ತು ಮರಾಠರು ಅನ್ಯೋನ್ಯತೆಯಿಂದ ಬಾಳುತ್ತಿದ್ದು, ಪ್ರತ್ಯೇಕ ಪ್ರಾಧಿಕಾರದ ಮೂಲಕ ರಾಜ್ಯ ಸರ್ಕಾರವು ಇಬ್ಬರ ನಡುವೆ ದ್ವೇಷ ಬೆಳೆಸಲು ಹೊರಟಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪ್ರಾಧಿಕಾರ ರಚನೆ ನಿರ್ಣಯ ಕೈಬಿಡಬೇಕು. ಕನ್ನಡಪರ ಹೋರಾಟಗಾರರ ಮೇಲೆ ಲಘುವಾಗಿ ಮಾತನಾಡುವ
ಶಾಸಕರಿಗೆ ಕಡಿವಾಣ ಹಾಕಬೇಕು ಎಂದು ಅವರು ಕೋರಿದರು.

ಸಂಘಟನೆ ಪದಾಧಿಕಾರಿಗಳಾದ ಎಂ.ಎಸ್. ಸತ್ಯನಾರಾಯಣ, ಪುಟ್ಟಸ್ವಾಮಿ, ಸಾಗರ್‌, ದೇವರಾಜು, ಜಗದೀಶ್‌, ರಘುರಾಂ, ಶಂಭುಗೌಡ, ಜಯಕೃಷ್ಣಪ್ಪ, ಚನ್ನಕೇಶವ, ರವಿಕುಮಾರ್, ಮಾರೇಗೌಡ ಮತ್ತಿತರರು
ಇದ್ದರು.

ಪರಿಣಾಮ ಬೀರದ ಬಂದ್‌
ರಾಮನಗರ: ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಜನಜೀವನ ಎಂದಿನಂತೆ ಇತ್ತು.

ಕೆಎಸ್‌ಆರ್‌ಟಿಸಿ ಬಸ್‌ಗಳು ಮುಂಜಾನೆ ಎಂದಿನಂತೆ ಸಂಚಾರ ಆರಂಭಿಸಿದವು. ದಿನವಿಡೀ ಬಸ್‌ಗಳ ಓಡಾಟ ಸಹಜವಾಗಿದ್ದು, ಪ್ರಯಾಣಿಕರು ಸಾಕಷ್ಟು ಸಂಖ್ಯೆಯಲ್ಲಿ ಇದ್ದರು. ಖಾಸಗಿ ವಾಹನಗಳು ಎಂದಿನಂತೆ ಸಂಚಾರ ಕೈಗೊಂಡವು. ಆಟೊಗಳ ಸಂಚಾರದಲ್ಲೂ ಯಾವುದೇ ವ್ಯತ್ಯಯ ಆಗಲಿಲ್ಲ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಓಡಾಟ ಎಂದಿನಂತೆ ಇತ್ತು. ಅಂಗಡಿ–ಮುಂಗಟ್ಟುಗಳು ವ್ಯಾಪಾರ ನಡೆಸಿದವು. ರೇಷ್ಮೆಗೂಡು ಮಾರುಕಟ್ಟೆ ಹಾಗೂ ಎಪಿಎಂಸಿಯಲ್ಲೂ ಜನಸಂದಣಿ ಇತ್ತು. ಆಸ್ಪತ್ರೆ, ಪೆಟ್ರೋಲ್‌ ಬಂಕ್‌, ಬ್ಯಾಂಕುಗಳು, ಸರ್ಕಾರಿ ಕಚೇರಿಗಳು ತೆರೆದಿದ್ದವು.

ಪೊಲೀಸ್ ಕಾವಲು: ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಎಲ್ಲೆಡೆ ಬಿಗಿ ಭದ್ರತೆ ಭದ್ರತೆ ಒದಗಿಸಿದ್ದರು. ಐಜೂರು ವೃತ್ತ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಕೆಎಸ್‌ಆರ್‌ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು