ಗುರುವಾರ , ಜನವರಿ 21, 2021
17 °C
ಮಾಯಗಾನಹಳ್ಳಿ, ಸುಗ್ಗನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಶಾಸಕಿ ಅನಿತಾ ಭೇಟಿ

ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ: ಶಾಸಕಿ ಅನಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: "ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಬಾಕಿ ಇದ್ದರೂ ಆದ್ಯತೆ ಮೇರೆಗೆ ಅವುಗಳನ್ನು ಪೂರ್ಣಗೊಳಿಸಲಾಗುವುದು' ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.

ಸೋಮವಾರ ಮಾಯಗಾನಹಳ್ಳಿ ಹಾಗೂ ಸುಗ್ಗನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಮಾಯಗಾನಹಳ್ಳಿ ಸಮೀಪ ನೂತನವಾಗಿ ಜೀರ್ಣೋದ್ಧಾರಗೊಂಡ ಮಹದೇಶ್ವರ ದೇಗುಲಕ್ಕೆ ಭೇಟಿ ಕೊಟ್ಟು ಪತ್ರಕರ್ತರ ಜೊತೆ ಮಾತನಾಡಿದರು. "ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಿಡುಗಡೆಯಾಗಿತ್ತು. ಕ್ಷೇತ್ರದಲ್ಲಿ ಆಗಬೇಕಾಗಿದ್ದ ಕೆಲಸ ಕಾರ್ಯಗಳನ್ನು ಮುಗಿಸಿದ್ದೇವೆ. ಒಂದೆರಡು ಕಡೆ ರಸ್ತೆ, ದೇಗುಲ ಅಭಿವೃದ್ಧಿ ಈ ರೀತಿ ಸಣ್ಣಪುಟ್ಟ ಕಾರ್ಯಗಳ ಬಗ್ಗೆ ಹೇಳಿದ್ದಾರೆ. ಅವುಗಳನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಆ ಕಾರ್ಯಗಳನ್ನು ಕೈಗೊಳ್ಳಲಿದ್ದೇನೆ ಎಂದರು.
"ಆರ್‌ಡಿಪಿಐರ್‌ನಿಂದ ಗ್ರಾಮೀಣಾಭಿವೃದ್ಧಿಗೆ ಸುಮಾರು ರೂಪಾಯಿ15 ಕೋಟಿ, ಲೋಕೋಪಯೋಗಿ, ಟಾಸ್ಕ್‍ಪೋರ್ಸ್, ಗಣಿಗಾರಿಕೆ ಇಲಾಖೆ.. ಹೀಗೆ ವಿವಿಧ ಇಲಾಖೆಗಳಿಂದ ಸಾಕಷ್ಟು ಅನುದಾನ ಬಂದಿದೆ. ಮತ್ತೆ ಈಗ ಡಿಸೆಂಬರ್‌ನಲ್ಲೂ ಅನುದಾನ ಬಿಡುಗಡೆ ಆಗಲಿದೆ. ಕ್ಷೇತ್ರದಲ್ಲಿ ಏನೇ ಬಾಕಿ ಕೆಲಸಗಳಿದ್ದರೂ ಅವುಗಳನ್ನು ಪೂರ್ಣಗೊಳಿಸಲಾಗುವುದು" ಎಂದರು.

"ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಕ್ಷೇತ್ರದ ಕಡೆ ಬರಲಿಲ್ಲ" ಎಂಬ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿ "ಜುಲೈನಲ್ಲಿ ನಮ್ಮ ಇಡೀ ಕುಟುಂಬ ಬಂದು ದವಸ ಧಾನ್ಯ ವಿತರಣೆ ಮಾಡಿದ್ದೇವೆ. 45 ದಿನ ಊಟದ ವ್ಯವಸ್ಥೆ ಕೈಗೊಂಡಿದ್ದೆವು. ತಾಲ್ಲೂಕು ಆರೋಗ್ಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆ" ಎಂದರು.

"ಕ್ಷೇತ್ರದಲ್ಲಿ ಇನ್ನೂ ನಿರಂತರ ಸಂಪರ್ಕದಲ್ಲಿ ಇರುತ್ತೇನೆ. ಕಾರ್ಯಕರ್ತರು ಬೇಸರ ಪಟ್ಟುಕೊಳ್ಳುವುದು ಬೇಡ. ಅವರ ಸಮಸ್ಯೆಗಳಿಗೆ ನಾನು, ನನ್ನ ಮಗ ನಿಖಿಲ್ ಹಾಗೂ ಕುಮಾರಸ್ವಾಮಿ ಸ್ಪಂದಿಸುತ್ತೇವೆ. ಕಾರ್ಯಕರ್ತರೊಂದಿಗೆ ನಾವು ಇದ್ದೇ ಇದ್ದೇವೆ. ಅದು ನಮ್ಮ ಜವಾಬ್ದಾರಿ ಕೂಡ" ಎಂದರು.
ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ಮಾಯಗಾನಹಳ್ಳಿ ಸತೀಶ್, ತಾ.ಪಂ. ಮಾಜಿ ಸದಸ್ಯ ಶಂಕರಪ್ಪ, ಅಜಯ್‍ಗೌಡ, ಜಯಕುಮಾರ್, ಗುತ್ತಿಗೆದಾರ ಪ್ರಕಾಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.