ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ಲೆಕ್ಕಾಚಾರ ಬಿಡಿ; ಮೊದಲು ನೀರು ಕೊಡಿ: ಸಂಸದ ಡಿ.ಕೆ. ಸುರೇಶ್

ನಗರಸಭೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಂಸದ ಡಿ.ಕೆ. ಸುರೇಶ್ ಸೂಚನೆ
Published 13 ಜನವರಿ 2024, 15:33 IST
Last Updated 13 ಜನವರಿ 2024, 15:33 IST
ಅಕ್ಷರ ಗಾತ್ರ

ರಾಮನಗರ: ‘ನೀರಿನಿಂದ ಬರುವ ಆದಾಯದ ಲೆಕ್ಕಾಚಾರ ಬದಿಗಿಡಿ; ಜನರಿಗೆ ಮೊದಲು ಕುಡಿಯಲು ನೀರು ಕೊಡಿ...’ – ನಗರದ ನಗರಸಭೆಯಲ್ಲಿ ಶನಿವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಡಿ.ಕೆ. ಸುರೇಶ್ ಅವರು, ಕರ್ನಾಟಕ ನಗರ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ (ಕೆಯುಡಬ್ಲ್ಯೂಎಸ್‌ಡಿಬಿ) ಅಧಿಕಾರಿಗಳಿಗೆ ನೀಡಿದ ಸೂಚನೆ ಇದು.

ಸಭೆಯ ಆರಂಭದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಂಚಿಕೊಂಡ ಸದಸ್ಯರು, ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಸಮಸ್ಯೆಗೆ ಬೇಗ ಶಾಶ್ವತ ಪರಿಹಾರ ಬೇಕಿದೆ. 24X7 ಯೋಜನೆ ಬೇಗ ಪೂರ್ಣಗೊಳ್ಳಬೇಕಿದೆ ಎಂದು ಒತ್ತಾಯಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮಂಡಳಿಯ ಎಇಇ ಕುಸುಮಾ, ‘ಡಿಸೆಂಬರ್‌ನಲ್ಲೇ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಕಾರಣಾಂತರಗಳಿಂದ ವಿಳಂಬವಾಗಿದೆ. ಮಾರ್ಚ್‌ ಹೊತ್ತಿಗೆ ಮುಗಿಯಲಿದೆ. ನೀರು ಪೂರೈಕೆ ಶುರುವಾದರೆ ತಿಂಗಳಿಗೆ ₹40 ಲಕ್ಷ ಆದಾಯ ಬರಲಿದೆ. ಸದ್ಯ ₹23 ಲಕ್ಷ ಮಾತ್ರ ಬರುತ್ತಿದೆ. ನಗರದಲ್ಲಿ 18,239 ಮನೆ ಮತ್ತು ಕಟ್ಟಡಗಳಿದ್ದು, ಇದುವರೆಗೆ 15 ಸಾವಿರ ನೀರಿನ ಸಂಪರ್ಕ ನೀಡಲಾಗಿದೆ’ ಎಂದು ಹೇಳಿದರು.

ಆಗ ಸುರೇಶ್, ‘ಮೊದಲು ನೀರು ಕೊಡಿ. ಆಮೇಲೆ ಆದಾಯದ ಬಗ್ಗೆ ಚಿಂತಿಸಿ. ಶಾಸಕ ಇಕ್ಬಾಲ್ ಹುಸೇನ್ ಅವರು ಡಿಸೆಂಬರ್‌ಗೆ ನೀರು ಕೊಡುತ್ತೇನೆ ಎಂದು ಜನರಿಗೆ ಭರವಸೆ ಕೊಟ್ಟಿದ್ದರು. ಆದರೆ, ಯಾಕಿನ್ನೂ ಕೆಲಸ ಮುಗಿಸಿಲ್ಲ. ನಿಮಗೆ ಬೇಕಾದ ನೆರವು ಮತ್ತು ಎಲ್ಲಾ ರೀತಿಯ ಅನುಮತಿ ಕೊಡಿಸುವ ಜವಾಬ್ದಾರಿ ನನ್ನದು. ಹೇಳಿದ ಸಮಯಕ್ಕೆ ನೀರು ಕೊಡಿ’ ಎಂದರು.

ಸಂಪರ್ಕ ಕೊಡುತ್ತಿಲ್ಲ: ‘ಸೈಟ್‌ವೊಂದರಲ್ಲಿ ಒಂದಂತಸ್ತಿನ ಮನೆಯಲ್ಲಿ ಎರಡು ಕುಟುಂಬ ವಾಸವಿದ್ದರೆ, ಒಬ್ಬರಿಗಷ್ಟೇ ನೀರಿನ ಸಂಪರ್ಕ ಕೊಟ್ಟಿದ್ದಾರೆ. ನಿಯಮದ ಪ್ರಕಾರ ಒಂದು ಸೈಟ್‌ಗೆ ಒಂದೇ ಸಂಪರ್ಕ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ’ ಎಂದು ವಾರ್ಡ್‌ 14ರ ಸದಸ್ಯ ನಿಜಾಮುದೀನ್ ಷರೀಫ್ ದೂರಿದರು. ಅವರ ಮಾತಿಗೆ ಕೆಲ ಸದಸ್ಯರು ದನಿಗೂಡಿಸಿದರು.

ಆಗ ಸುರೇಶ್, ‘ನಿಯಮದ ಹೆಸರಿನಲ್ಲಿ ನೀರು ಕೊಡುವುದಿಲ್ಲ ಎನ್ನಲಾಗದು. ಮೊದಲು ಎಲ್ಲಾ ಮನೆ ಮತ್ತು ಕಟ್ಟಡಗಳಿಗೆ ಸಂಪರ್ಕ ಕೊಡಿ. ಕಾಮಗಾರಿಗಾಗಿ ಅಗೆದಿರುವ ಗುಂಡಿ ಮುಚ್ಚಿ. ಆಗದಿದ್ದರೆ, ನಗರಸಭೆಗೆ ಆ ಹಣ ಕೊಡಿ. ಗುಂಡಿ ಮುಚ್ಚಿ ರಸ್ತೆ ಅಭಿವೃದ್ಧಿಪಡಿಸುತ್ತಾರೆ. ಈ ಬಗ್ಗೆ ಮಂಡಳಿ ನಿರ್ದೇಶಕರು ಮತ್ತು ಸಚಿವರ ಜೊತೆ ಮಾತನಾಡುವೆ’ ಎಂದರು.

ತರಾಟೆ: ಘನತ್ಯಾಜ್ಯ ನಿರ್ವಹಣೆ ಮತ್ತು ಸಿವಿಲ್ ಕಾಮಗಾರಿಗಳಿಗೆ ಸಂಬಂಧಿಸಿದ ಮಾಹಿತಿ ಪರಿಶೀಲಿಸಿದ ಸಂಸದ, ಕಾಮಗಾರಿ ಮೊತ್ತದ ಅಂಕಿಅಂಶಗಳು ತಾಳೆಯಾಗದಿರುವುದನ್ನು ಗಮನಿಸಿ ಪೌರಾಯುಕ್ತರು ಹಾಗೂ ಇತರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಕಾಟಾಚಾರಕ್ಕೆ ತಾಳಮೇಳ‌ವಿಲ್ಲದ ಅಂಕಿಅಂಶಗಳನ್ನು ಹೇಳ್ತಿರಾ. ನಿಮ್ಮನ್ನು ಕೇಳುವವರಿಲ್ಲವೇ? ಯಾರೂ ಗಮನಿಸುತ್ತಿಲ್ಲವೆಂದು ಕಳ್ಳ ಬಿಲ್ ಬರೆದು ಕ್ಲೋಸ್ ಮಾಡುತ್ತಿದ್ದೀರಾ?’ ಎಂದು ಹರಿಹಾಯ್ದರು. ‘ನಗರಸಭೆ ಸದಸ್ಯರು ಅಧಿಕಾರಿಗಳ ಲೆಕ್ಕದ ಮೇಲೆ ಕಣ್ಣಿಡಬೇಕು’ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಉಪಾಧ್ಯಕ್ಷ ಸಿ. ಸೋಮಶೇಖರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜ್ಮತ್ ಉಲ್ಲಾಖಾನ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ರಾಜಕೀಯ ಬಿಟ್ಟು ನಿಮ್ಮ ನಗರ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಿ. ರಾಜಕೀಯ ಮಾತನಾಡಲು ಬೇರೆ ವೇದಿಕೆಗಳಿವೆ

– ಡಿ.ಕೆ. ಸುರೇಶ್ ಸಂಸದ

ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಂಜೂರಾಗಿರುವ ಮನೆಗಳನ್ನು ಹಂಚಿಕೆ ಮಾಡುವಾಗ ಹಿಂದೆ ಮನೆಗಾಗಿ ₹5 ಸಾವಿರ ಕಟ್ಟಿದ್ದವರಿಗೆ ಮೊದಲು ಆದ್ಯತೆ ನೀಡಬೇಕು

– ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ

‘ಹೆಚ್ಚುವರಿ 10 ಟ್ಯಾಂಕರ್ ನೀರು ಕೊಡಿ’

‘ಕುಡಿಯುವ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿಸಲು ಇನ್ನೂ 10 ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಮಾಡಿ. ಒಂದು ಟ್ಯಾಂಕರ್‌ಗೆ ತಿಂಗಳಿಗೆ ₹45 ಸಾವಿರ ಬಾಡಿಗೆ ನಿಗದಿಪಡಿಸಿ. ಈ ಕುರಿತು ಪ್ರಸ್ತಾವ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಕಳಿಸಿ ಕೊಡಿ. ಶಾಸಕರು ಒದಗಿಸಿರುವ ಟ್ಯಾಂಕರ್‌ಗಳ ಜೊತೆಗೆ ಇವೂ ಇದ್ದರೆ ಸಮಸ್ಯೆ ತಗ್ಗಲಿದೆ. ಜೊತೆಗೆ ಕೊಳವೆಬಾವಿಗಳನ್ನು ತಕ್ಷಣ ರಿಪೇರಿ ಮಾಡಿ. ಕಾಮಗಾರಿಯಿಂದಾಗಿ ದೂಳು ಹಿಡಿದಿರುವ ರಸ್ತೆಗಳಲ್ಲಿ ನಿತ್ಯ ನೀರು ಹಾಯಿಸಿ’ ಎಂದು ಡಿ.ಕೆ. ಸುರೇಶ್ ಸೂಚನೆ ನೀಡಿದರು. ‘ಸಿಬ್ಬಂದಿ ಸಮಸ್ಯೆ ನೀಗಿಸಿ ಮೂಲಸೌಕರ್ಯ ಒದಗಿಸಿ’ ‘ನಗರಸಭೆಯ ಎಲ್ಲಾ ವಿಭಾಗದಲ್ಲೂ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಇದೆ. ಒಬ್ಬೊಬ್ಬರು ಎರಡು ಹುದ್ದೆ ನಿಭಾಯಿಸಬೇಕಿದ್ದು ಸಕಾಲದಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ. ಜಿಲ್ಲಾ ಕೇಂದ್ರವಾಗಿರುವ ನಗರ ಮೂಲಸೌಕರ್ಯದಿಂದ ಬಳಲುತ್ತಿದೆ. ಹೃದಯಭಾಗದಲ್ಲಿರುವ ರಸ್ತೆಗಳ ವಿಸ್ತರಣೆ ಅಭಿವೃದ್ಧಿ ಲೇಔಟ್‌ಗಳಿಗೆ ರಸ್ತೆ ನಿರ್ಮಾಣವಾಗಬೇಕಿದೆ. ತ್ಯಾಜ್ಯ ವಿಲೇವಾರಿಗೆ ಜಾಗವಿನ್ನೂ ಅಂತಿಮವಾಗಿಲ್ಲ. ನಗರಸಭೆಗೆ ಸ್ವಂತ ಆದಾಯವೂ ಕಡಿಮೆ ಇದೆ. ಈ ನಿಟ್ಟಿನಲ್ಲಿ ನಗರಕ್ಕೆ ಮೂಲಸೌಕರ್ಯ ಒದಗಿಸಿ ಆದಾಯ ಹೆಚ್ಚಿಸಿ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ’ ಎಂದು ನಗರಸಭೆ ಸದಸ್ಯ ಕೆ. ಶೇಷಾದ್ರಿ ಶಶಿ ಒತ್ತಾಯಿಸಿದರು.

ಸಭೆಯಲ್ಲಿ ಸದಸ್ಯರು ಹೇಳಿದ್ದು...

* ವಿದ್ಯುತ್ ಚಿತಾಗಾರವನ್ನು ಉದ್ಘಾಟನೆ ಮಾಡಿ. ರೈಲ್ವೆ ಸೇತುವೆ ಬಳಿ ಸಂಚಾರ ದಟ್ಟಣೆ ನಿಯಂತ್ರಿಸಿ.

* ಇ-ಖಾತೆ‌ ಇದ್ದರಷ್ಟೇ ಯುಜಿಡಿ ಸಂಪರ್ಕ ಕೊಡುತ್ತೇವೆ ಎನ್ನುವುದನ್ನು ಅಧಿಕಾರಿಗಳು ಬಿಡಬೇಕು. ಎಲ್ಲಾ ಮನೆಗಳಿಗೂ ಸಂಪರ್ಕ ಕೊಡಬೇಕು.

* ಚರ್ಚ್ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ ಕೆಲಸ ಆರಂಭಿಸಬೇಕು.

* ವಾರ್ಡ್ 23ರಲ್ಲಿ ತೆರೆದಿರುವ ನಮ್ಮ ಕ್ಲಿನಿಕ್‌ಗೆ ಜನ ಹೋಗುತ್ತಿಲ್ಲ. ಹಾಗಾಗಿ ಜನನಿಬಿಡ ಪ್ರದೇಶಕ್ಕೆ ಸ್ಥಳಾಂತರಿಸಬೇಕು.

* ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT