ಶನಿವಾರ, ಸೆಪ್ಟೆಂಬರ್ 25, 2021
22 °C
ಸೌಲಭ್ಯ ಕಲ್ಪಿಸಲು ಆಗ್ರಹಿಸಿ ಕ್ವಾರಂಟೈನ್‌ ವಾಸಿಗಳ ಪ್ರತಿಭಟನೆ

ಚನ್ನಪಟ್ಟಣ: ಕೋವಿಡ್ ಕೇರ್‌ ಕೇಂದ್ರದ ಅವ್ಯವಸ್ಥೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ತಾಲ್ಲೂಕಿನ ಹೊನ್ನಾಯಕನಹಳ್ಳಿಯ ಕೋವಿಡ್ ಕೇರ್ ಸೆಂಟರ್‌ನಲ್ಲಿ ಆಹಾರ, ಕುಡಿಯುವ ನೀರು ಹಾಗೂ ಶೌಚಾಲಯ ಅವ್ಯವಸ್ಥೆ ಇದೆ ಎಂದು ಆರೋಪಿಸಿ ಕ್ವಾರಂಟೈನ್‌ನಲ್ಲಿರುವ ಮಂದಿ ಭಾನುವಾರ ಕೇರ್ ಸೆಂಟರ್ ಹೊರಗೆ ಕುಳಿತು ಪ್ರತಿಭಟನೆ ನಡೆಸಿದರು.

ಕೇರ್ ಸೆಂಟರ್‌ನಲ್ಲಿ ಸಕ್ಕರೆ ಖಾಯಿಲೆ, ರಕ್ತದೊತ್ತಡ ಇರುವ ಹೆಚ್ಚು ಮಂದಿ ಇದ್ದಾರೆ. ಬೆಳಿಗ್ಗೆ 10.30 ಗಂಟೆಯಾದರೂ ಬೆಳಗಿನ ಆಹಾರ ನೀಡುವುದಿಲ್ಲ. ಮಾತ್ರೆ ತೆಗೆದುಕೊಂಡು ಆಹಾರಕ್ಕಾಗಿ ಕಾಯುತ್ತೇವೆ. ಗೇಟ್ ಬಳಿಯೇ ಹೊರಗೆ ನಾಯಿಗಳಿಗೆ ಬಿಸಾಡಿ ಹೋಗುವಂತೆ ಆಹಾರ ಇಟ್ಟು ಹೋಗಿದ್ದಾರೆ. ನಾವು ಊಟವಿಲ್ಲದೆ ಇಲ್ಲಿಗೆ ಬಂದಿದ್ದೇವೆಯೇ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ನಾವು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತೇವೆ ಎಂದು ಹೇಳಿದರೂ ಕೇಳಲಿಲ್ಲ. ಇಲ್ಲಿ ಯಾವುದೇ ವ್ಯವಸ್ಥೆ ಸರಿಯಿಲ್ಲ. ಮಹಿಳೆಯರು, ಪುರುಷರು ಇಬ್ಬರಿಗೂ ಒಂದೇ ಶೌಚಾಲಯ ಇದೆ. ಅದನ್ನೇ ಬಳಕೆ ಮಾಡಬೇಕು. ಕುಡಿಯುವ ನೀರಿಲ್ಲ. ಶೌಚಾಲಯಕ್ಕೆ ಬಳಸುವ ನೀರನ್ನೇ ಸ್ನಾನಕ್ಕೆ ಬಳಕೆ ಮಾಡಬೇಕು. ಯಾವುದೇ ಅಧಿಕಾರಿಗಳು ಇಲ್ಲಿ ವ್ಯವಸ್ಥೆ ಸರಿಪಡಿಸಲು ಮುಂದಾಗಿಲ್ಲ. ಮಕ್ಕಳು, ವಯಸ್ಸಾದವರು ಇಲ್ಲಿದ್ದಾರೆ. ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶೌಚಾಲಯದಲ್ಲಿ ಶುಚಿತ್ವ ಕಾಪಾಡಿಲ್ಲ. ಸುಮಾರು 150 ಮಂದಿ ಕೇರ್ ಸೆಂಟರ್‌ನಲ್ಲಿ ಇದ್ದಾರೆ. ಬಹುತೇಕ ಮಂದಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದರ ಜತೆಗೆ ಚಿಕ್ಕಮಕ್ಕಳನ್ನೂ ಇಲ್ಲಿಗೆ ಕರೆತರಲಾಗಿದೆ. ನಮಗೆ ಸಮರ್ಪಕವಾಗಿ ಆಹಾರ ಒದಗಿಸಬೇಕು. ಜಿಲ್ಲಾಧಿಕಾರಿ ಅವರು ಸ್ಥಳಕ್ಕೆ ಆಗಮಿಸಬೇಕು ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದರು.

ಸೆಂಟರ್‌ನಲ್ಲಿ ಪ್ರತಿಭಟನೆ ನಡೆಯುತ್ತಿರುವ ವಿಷಯ ತಿಳಿದು ದೂರವಾಣಿ ಮೂಲಕ ತಹಶೀಲ್ದಾರ್ ನಾಗೇಶ್ ಅವರನ್ನು ಸಂಪರ್ಕಿಸಿ ಅವರನ್ನು ಸ್ಥಳಕ್ಕೆ ಕಳುಹಿಸಿದ ಶಾಸಕ ಎಚ್.ಡಿ. ಕುಮಾರಸ್ವಾಮಿ, ನಂತರ ಪ್ರತಿಭಟನಾನಿರತರ ಜೊತೆ ವಿಡಿಯೊ ಕಾಲ್ ಮೂಲಕ ಮಾತನಾಡಿ ಅವರ ಮನವೊಲಿಸಿದರು.

‘ಕೇರ್ ಸೆಂಟರ್‌ನಲ್ಲಿ ಇರುವ ಮಂದಿಗೆ ಯಾವುದೇ ಸಮಸ್ಯೆಯಾಗದಂತೆ ಕೂಡಲೇ ನಿಗಾವಹಿಸಲು ತಹಶೀಲ್ದಾರ್ ಅವರಿಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇಂದೇ ಬಗೆಹರಿಯುತ್ತದೆ. ಸರಿಯಾದ ಸಮಯಕ್ಕೆ ಊಟ ನೀಡುವುದು, ಸ್ವಚ್ಛತೆ ಕಾಪಾಡಲು ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ. ಸೋಂಕಿತರೂ ಸಹಕಾರ ನೀಡಬೇಕು. ಯಾವುದೇ ಸಮಸ್ಯೆಯಾದರೂ ಪ್ರತಿಭಟನೆ ಬೇಡ. ನೇರವಾಗಿ ನನ್ನನ್ನು ಸಂಪರ್ಕಿಸಿದರೆ ಸಮಸ್ಯೆ ಸರಿಪಡಿಸುತ್ತೇನೆ. ಕೋವಿಡ್ ಸೋಂಕಿತರನ್ನು ಶೀಘ್ರ ಗುಣಮುಖರನ್ನಾಗಿಸುವುದೇ ನಮ್ಮ ಧ್ಯೇಯವಾಗಿದೆ. ಎಲ್ಲರೂ ಸಹಕರಿಸಬೇಕು’ ಎಂದು ಕುಮಾರಸ್ವಾಮಿ ಮನವಿ ಮಾಡಿದರು. ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು