ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲುಬಾಯಿ ಜ್ವರಕ್ಕೆ ಸಿಗದ ಲಸಿಕೆ

ಕೇಂದ್ರದಿಂದ ಲಸಿಕೆ ಪೂರೈಕೆ ಮತ್ತೆ ವಿಳಂಬ: ಆರಂಭವಾಗದ ಅಭಿಯಾನ
Last Updated 6 ಅಕ್ಟೋಬರ್ 2022, 6:03 IST
ಅಕ್ಷರ ಗಾತ್ರ

ರಾಮನಗರ: ಅಕ್ಟೋಬರ್ ಕಳೆಯುತ್ತಿದ್ದರೂ ಜಿಲ್ಲೆಯಾದ್ಯಂತ ಇನ್ನೂ ಪಶುಗಳಿಗೆ ಕಾಲುಬಾಯಿ ಜ್ವರ ಲಸಿಕೆ ದೊರೆಯದಾಗಿದ್ದು, ಈ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಶುಪಾಲನೆ ಇಲಾಖೆ ವತಿಯಿಂದ ಕಳೆದ ನವೆಂಬರ್‌ನಲ್ಲಿ ಜಿಲ್ಲೆಯಾದ್ಯಂತ ರಾಸುಗಳಿಗೆ ಹದಿನಾರನೇ ಸುತ್ತಿನ ಲಸಿಕೆ ಕಾರ್ಯಕ್ರಮ ನಡೆದಿತ್ತು. ಈ ವರ್ಷ ಜೂನ್‌ನಲ್ಲೇ ಮತ್ತೆ ಅಭಿಯಾನ ಆರಂಭ ಆಗಬೇಕಿತ್ತು. ಆದರೆ ಕೇಂದ್ರ ಸರ್ಕಾರದಿಂದ ಇನ್ನೂ ಲಸಿಕೆಗಳು ಪೂರೈಕೆ ಆಗದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿಲ್ಲ. ಒಂದೊಮ್ಮೆ ಜಾನುವಾರುಗಳಲ್ಲಿ ಮತ್ತೆ ಜ್ವರಬಾಧೆ ಹೆಚ್ಚಾದಲ್ಲಿ ಅದರಿಂದ ರೈತರಿಗೆ ನಷ್ಟ ಹೆಚ್ಚಾಗುವ ಸಾಧ್ಯತೆ ಇದೆ.

2021ರ ಅಕ್ಟೋಬರ್‌ನಲ್ಲಿ ಜಿಲ್ಲೆಯಾದ್ಯಂತ ರಾಸುಗಳಲ್ಲಿ ಈ ಜ್ವರಬಾಧೆ ಉಲ್ಬಣ ಆಗಿದ್ದು, 56ಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಆದರೆ ಸಕಾಲಕ್ಕೆ ಲಸಿಕೆ ಪೂರೈಕೆ ಆಗದ ಕಾರಣಕ್ಕೆ ಪಶುಪಾಲನಾ ಇಲಾಖೆಯು ‘ ರಿಂಗ್‌ ವ್ಯಾಕ್ಸಿನ್‌’ ಕಾರ್ಯಕ್ರಮಕ್ಕೆ ಸೀಮಿತಗೊಂಡಿತ್ತು. ನಂತರದಲ್ಲಿ ನವೆಂಬರ್‌ನಲ್ಲಿ ಲಸಿಕೆ ಪೂರೈಕೆ ಆಗಿ 3.07 ಲಕ್ಷ ಜಾನುವಾರುಗಳಿಗೆ ಈ ಲಸಿಕೆ ಹಾಕಲಾಗಿತ್ತು.

ಲಸಿಕೆ ಯಾಕೆ?: 2013-14ನೇ ಸಾಲಿನಲ್ಲಿ ರಾಮನಗರ ಜಿಲ್ಲೆ ಒಂದರಲ್ಲಿಯೇ 1,300ಕ್ಕೂ ಹೆಚ್ಚು ರಾಸುಗಳು ಕಾಲುಬಾಯಿ ಜ್ವರಕ್ಕೆ ಬಲಿಯಾಗಿದ್ದವು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರವು ರಾಸುಗಳಿಗೆ ಕಾಲುಬಾಯಿ ಜ್ವರ ವಿರುದ್ಧದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಚಾಲನೆ ನೀಡಿತ್ತು. ಅಂದಿನಿಂದ ವರ್ಷಕ್ಕೆರಡು ಬಾರಿಯಂತೆ (ಮಾರ್ಚ್ ಮತ್ತು ಆಗಸ್ಟ್) 16 ಸುತ್ತುಗಳಲ್ಲಿ ಲಸಿಕಾ ಕಾರ್ಯಕ್ರಮ ನಡೆದಿದೆ. ಇದರ ಜೊತೆಗೆ ವಾಶಿಂಗ್ ಸೋಡಾ ಮೊದಲಾದ ದ್ರಾವಣಗಳ ಸಂಪಡನೆ ಮೂಲಕ ಸೋಂಕು ನಿಯಂತ್ರಣಕ್ಕೆ ಶ್ರಮಿಸಲಾಗುತ್ತಿದೆ.

ಪಶುಪಾಲನಾ ಇಲಾಖೆಯ ಜೊತೆಗೆ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬಮೂಲ್) ಸಹ ಈ ಅಭಿಯಾನಕ್ಕೆ ಕೈಜೋಡಿಸಿದೆ.

ಕಾಲು ಬಾಯಿ ಜ್ವರವು ವೈರಸ್‌ನಿಂದ ಹರಡುವ ಕಾಯಿಲೆಯಾಗಿದೆ. ಅಡುಗೆ ಅಥವಾ ಬಟ್ಟೆ ಸೋಡಾ (ಸೋಡಿಯಂ ಬೈ ಕಾರ್ಬೋನೆಟ್) ಸಿಂಪಡನೆಯಿಂದ ಇವುಗಳನ್ನು ಕೊಲ್ಲಲು ಸಾಧ್ಯವಿದೆ. ರೋಗ ಕಾಣಿಸಿಕೊಂಡ ಗ್ರಾಮಗಳಲ್ಲಿ ಆಗಾಗ್ಗೆ ಸೋಡಾ ಸಂಪಡನೆ ಮಾಡಲಾಗಿದೆ. ಆದಾಗ್ಯೂ ಕೆಲವು ಗ್ರಾಮಗಳಲ್ಲಿ ಕಾಲುಬಾಯಿ ಜ್ವರವು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದೆ.

ಲಕ್ಷಣಗಳೇನು: ‘ಮೊದಲಿಗೆ ಹಸುವಿನಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಕಾಲುಗಳಲ್ಲಿ ಗಾಯವಾಗುತ್ತದೆ. ದವಡೆ, ನಾಲಿಗೆಯಲ್ಲಿ ಗುಳ್ಳೆಗಳು ಕಾಣಿಸಿಕೊಂಡು ಸೀಳು ಬಿಡುತ್ತವೆ. ಇದರಿಂದ ನೋವು ಹೆಚ್ಚಿ ಹಸುಗಳು ಮೇಯುವುದನ್ನೇ ನಿಲ್ಲಿಸುತ್ತವೆ. ಸುಮಾರು ಏಳು ದಿನ ಕಾಲ ಅವುಗಳ ಪರಿಸ್ಥಿತಿ ಹೀಗೆ ಇರುತ್ತದೆ’ ಎಂದು ಪಶು ಸಂಗೋಪನಾ ಇಲಾಖೆಯ ವೈದ್ಯರು ಮಾಹಿತಿ ನೀಡುತ್ತಾರೆ.

ತೊಂದರೆ ಏನು?: ಒಮ್ಮೆ ರೋಗ ಕಾಣಿಸಿಕೊಂಡರೆ ಮುಗಿಯಿತು. ಅದು ಶಾಶ್ವತವಾಗಿ ವಾಸಿಯಾಗುವ ಸಾಧ್ಯತೆ ಇಲ್ಲ. ಕ್ರಮೇಣ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುವುದು, ಬಂಜೆತನ, ಹಾಲಿನ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ ಎಂದು ಪಶು ವೈದ್ಯರು ಎಚ್ಚರಿಸುತ್ತಾರೆ.

ಏನಿದು ಲಸಿಕೆ?

ರಾಮನಗರ ಜಿಲ್ಲೆಯಲ್ಲಿ ಸದ್ಯ 2.89 ಲಕ್ಷ ಹಸು–ದನ ಹಾಗೂ 19 ಸಾವಿರದಷ್ಟು ಎಮ್ಮೆಗಳಿವೆ. ಇವುಗಳಿಗೆ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡಲಾಗುತ್ತದೆ. ಮೂರುವರೆ ತಿಂಗಳು ಮೇಲ್ಪಟ್ಟ ಎಲ್ಲ ರಾಸುಗಳಿಗೆ ಈ ಲಸಿಕೆ ದೊರೆಯುತ್ತಿದೆ. ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣಾ ಕಾರ್ಯಕ್ರಮ (ಎನ್‍ಎಡಿಸಿಪಿ)ದಡಿ ಈ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ.

ಪ್ರತಿ ರಾಸುವಿಗೆ 2 ಮಿ.ಲಿ. ಲಸಿಕೆಯನ್ನು ಹಾಕಲಾಗುತ್ತದೆ. 2020ರಲ್ಲಿ ಸರ್ಕಾರವು ಸರ್ಕಾರವು ಜಿಲ್ಲೆಗೆ 2.92 ಲಕ್ಷ ಡೋಸ್ ಹಾಗೂ 2021ರಲ್ಲಿ 3.07 ಲಕ್ಷ ಡೋಸ್‌ ಲಸಿಕೆಯನ್ನು ನೀಡಿತ್ತು.

ಮತ್ತೆ ಮತ್ತೆ ಲಸಿಕೆ

ಸಾಮೂಹಿಕ ಲಸಿಕಾ ಕಾರ್ಯಕ್ರಮಗಳ ನಡುವೆಯೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಂಕು ಹರಡಿಸುವ ವೈರಾಣುಗಳು ಪ್ರತಿ ಎರಡು ಮೂರು ವರ್ಷಗಳಿಗೆ ಒಮ್ಮೆ ತಮ್ಮ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತಿವೆ. ಹೀಗಾಗಿ ಔಷಧೋಪಚಾರ ಪರಿಣಾಮಕಾರಿ ಆಗುತ್ತಿಲ್ಲ. ಮತ್ತೆ ಮತ್ತೆ ಜಾನುವಾರುಗಳಿಗೆ ನಿರಂತರವಾಗಿ ಲಸಿಕೆ ನೀಡುತ್ತ ಬರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT