ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದ ಜಾತಿಗಳಿಗೆ ಎಲ್ಲಾ ಪಕ್ಷಗಳಿಂದ ಅನ್ಯಾಯ: ರೈಡ್ ನಾಗರಾಜ್

Last Updated 9 ಡಿಸೆಂಬರ್ 2019, 13:09 IST
ಅಕ್ಷರ ಗಾತ್ರ

ರಾಮನಗರ: ಹಿಂದುಳಿದ ಜಾತಿಗಳಿಗೆ ಎಲ್ಲಾ ರಾಜಕೀಯ ಪಕ್ಷಗಳು ಅನ್ಯಾಯ ಮಾಡುತ್ತಿವೆ ಎಂದು ರಾಮನಗರ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟದ ಅಧ್ಯಕ್ಷ ರೈಡ್ ನಾಗರಾಜ್ ಆರೋಪಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದು 72 ವರ್ಷಗಳು ಕಳೆಯುತ್ತಿದ್ದರೂ ಹಿಂದುಳಿದ ಜಾತಿಗಳಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ. ಇದನ್ನು ಮನಗಂಡು ಜಿಲ್ಲಾ ಮಟ್ಟದಲ್ಲಿ ಹಿಂದುಳಿದ ಜಾತಿಗಳ ಸಂಘಟನೆಯನ್ನು ಮಾಡುವ ದೃಷ್ಟಿಯಿಂದ 'ರಾಮನಗರ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ'ವನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಐದೂವರೆ ಲಕ್ಷಕ್ಕೂ ಹೆಚ್ಚು ಹಿಂದುಳಿದ ಜಾತಿಯ ಜನರಿದ್ದರೂ ನಿರ್ಲಕ್ಷ್ಯಿಸಲಾಗಿದೆ ಎಂದು ತಿಳಿಸಿದರು.

ಹಿಂದುಳಿದ ಜಾತಿಗಳನ್ನು ಚುನಾವಣಾ ಸಮಯದಲ್ಲಿ ಬಳಸಿಕೊಂಡು, ಎಲ್ಲಾ ಪಕ್ಷದವರು ಆಡಳಿತಕ್ಕೆ ಬಂದ ನಂತರ ನಿರ್ಲಕ್ಷ್ಯ ಮಾಡಿದ್ದಾರೆ. ನಮಗೆ ದೊರೆಯಬೇಕಿರುವ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಸರ್ಕಾರದಿಂದ ಸೌಲಭ್ಯಗಳು ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಹಿಂದುಳಿದ ಜಾತಿಗಳ ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಜಿಲ್ಲಾ ಹಿಂದುಳಿದ ಜಾತಿಗಳ ಮಹಾ ಒಕ್ಕೂಟ ನ್ಯಾಯ ಸಿಗುವವರೆಗೂ ಹೋರಾಟ ನಡೆಸಲಿದೆ ಎಂದರು.

ರಾಜಕೀಯ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಹಿಂದುಳಿದ ಜಾತಿಗಳ ಜನರಿಗೆ ಅನ್ಯಾಯವಾಗುತ್ತಿದೆ. ಇನ್ನು ಮುಂದೆ ಅನ್ಯಾಯಕ್ಕೆ ಅವಕಾಶ ನೀಡದೆ ಹೋರಾಟದ ಮೂಲಕವೇ ನ್ಯಾಯ ದಕ್ಕಿಸಿಕೊಳ್ಳುತ್ತೇವೆ. ಕಾಂಗ್ರೆಸ್ , ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹಿಂದುಳಿದ ಜಾತಿಗಳನ್ನು ಕೇವಲ ಮತ ಬ್ಯಾಂಕುಗಳನ್ನಾಗಿ ಉಪಯೋಗಿಸಿಕೊಳ್ಳುತ್ತಿವೆ. ಆ ಜಾತಿಯ ಜನರಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ನೀಡಿದ ಉದಾಹರಣೆ ಇಲ್ಲ. ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಮುಖಂಡ ನಾರಾಯಣ್ ಮಾತನಾಡಿ ಈ ಒಕ್ಕೂಟ 103 ಹಿಂದುಳಿದ ಜಾತಿಗಳನ್ನು ಒಳಗೊಂಡಿದೆ. ಎಲ್ಲರೂ ರಾಜಕೀಯಕ್ಕೆ ಆಸ್ಪದೆ ನೀಡದೆ ಒಗ್ಗಟ್ಟು ಕಾಯ್ದುಕೊಂಡು ಜನರ ಕುಂದು ಕೊರತೆ ನೀಗಿಸುವ ಕೆಲಸ ಮಾಡುತ್ತೇವೆ. ಶೀಘ್ರದಲ್ಲಿಯೇ ಹಿಂದುಳಿದ ಜಾತಿಗಳ ಸಮಾವೇಶ ಕೂಡ ಆಯೋಜಿಸಲಾಗುವುದುಎಂದರು.

ವಿವಿಧ ಸಮುದಾಯಗಳ ಮುಖಂಡರಾದ ಚಂದ್ರಶೇಖರ್, ಶ್ರೀನಿವಾಸ್, ವೆಂಕಟೇಶ್, ರೇವಣ್ಣ, ರಂಗಸ್ವಾಮಯ್ಯ, ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT