ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕಮಿಷನ್ ಆಸೆಗೆ ₹15 ಲಕ್ಷ ಕಳೆದುಕೊಂಡ ಗೃಹಿಣಿ

Published 1 ಏಪ್ರಿಲ್ 2024, 6:42 IST
Last Updated 1 ಏಪ್ರಿಲ್ 2024, 6:42 IST
ಅಕ್ಷರ ಗಾತ್ರ

ರಾಮನಗರ: ಆನ್‌ಲೈನ್‌ ವ್ಯವಹಾರದಲ್ಲಿ ಅಪರಿಚಿತರು ತೋರಿಸಿದ ಕಮಿಷನ್ ಆಸೆಗೆ ಮರುಳಾದ ಗೃಹಿಣಿಯೊಬ್ಬರು ಬರೋಬ್ಬರಿಗೆ ₹15.45 ಲಕ್ಷ ಕಳೆದುಕೊಂಡಿದ್ದಾರೆ. ದುಪ್ಪಟ್ಟು ಲಾಭ ಬರಲಿದೆ ಎಂದು ಪುಸಲಾಯಿಸಿದ ವಂಚಕರು, ಮಹಿಳೆಯಿಂದ ಹಂತ ಹಂತವಾಗಿ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ.

ವಂಚನೆಗೆ ಸಂಬಂಧಿಸಿದಂತೆ, ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಕಮಿಷನ್ ಫ್ಯಾಕ್ಟರಿ ಕಂಪನಿ ಹಾಗೂ ಅರುಣ್ ವಿ. ಶಾಜಿಪನ್ ಎಂಬುವವನ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.

ಮನೆಯಲ್ಲೇ ಕುಳಿತು ಕೆಲಸ ಮಾಡಿ ಹೆಚ್ಚು ಸಂಪಾದಿಸುವ ಉದ್ಯೋಗದ ಸಂದೇಶವನ್ನು ಅರುಣ್ ಫೆ. 22ರಂದು ಟೆಲಿಗ್ರಾಂ ಮೂಲಕ ಗೃಹಿಣಿಗೆ ಕಳಿಸಿದ್ದ. ಕಮಿಷನ್ ಫ್ಯಾಕ್ಟರಿ ಕಂಪನಿಯ ಉತ್ಪನ್ನಗಳ ಸ್ಟಾಂಡರ್ಡ್ ಹೆಚ್ಚಿಸುವ ಉದ್ಯೋಗ ಇದಾಗಿದ್ದು, ರೇಟಿಂಗ್ ಆಧಾರದ ಉತ್ಪನ್ನಗಳ ಪ್ರಚಾರ ಮಾಡಿದರೆ ಕಮಿಷನ್ ಸಿಗುತ್ತದೆ ಎಂದು ಮನವೊಲಿಸಿದ್ದ.

ಗೃಹಿಣಿ ವಿವರ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಗಳನ್ನು ಪಡೆದುಕೊಂಡಿದ್ದ ಆತ, ಕೆಲಸಕ್ಕೆ ಹಣ ಜಮಾ ಮಾಡುವಂತಿಲ್ಲ ಎಂದಿದ್ದ. ಆತನೇ 10 ಸಾವಿರ ಬೋನಸ್ ಪಾಯಿಂಟ್ ಕೊಟ್ಟು 33 ರೇಟಿಂಗ್ಸ್ ಕೊಟ್ಟಿದ್ದ. ಜೊತೆಗೆ ಗೃಹಿಣಿಗೆ ಆನ್‌ಲೈನ್ ಮೂಲಕ ₹983 ಕಮಿಷನ್ ಪಾವತಿಸಿದ್ದ. ಇದರಿಂದ ಉತ್ತೇಜಿತರಾದ ಮಹಿಳೆ ಆತನ ಸೂಚನೆಯಂತೆ ಕೆಲಸ ಮಾಡತೊಡಗಿದರು.

ಮಾರನೇಯ ದಿನ ಅರುಣ್ ರೇಟಿಂಗ್ ಪೂರ್ಣಗೊಳಿಸಲು ₹10 ಸಾವಿರ ಪಾವತಿಸುವಂತೆ ಹೇಳಿದ್ದ. ಹೇಗಿದ್ದರೂ ಕಮಿಷನ್ ಬರುತ್ತದೆ ಎಂದುಕೊಂಡು ಗೃಹಿಣಿ ತನ್ನ ಪತಿ ಬ್ಯಾಂಕ್ ಖಾತೆಯಿಂದ ಹಣ ವರ್ಗಾಯಿಸಿದ್ದರು. ಪ್ರತಿಯಾಗಿ ಗೃಹಿಣಿಗೆ ₹10 ಸಾವಿರದ ಜೊತೆಗೆ ಹೆಚ್ಚುವರಿಯಾಗಿ ₹4,500 ಕಮಿಷನ್ ಸಿಕ್ಕಿತ್ತು.

ಇದರಿಂದ ಉತ್ತೇಜಿತರಾದ ಗೃಹಿಣಿ ಹೆಚ್ಚು ಕಮಿಷನ್ ಆಸೆಯಿಂದ ಅರುಣ್ ಹೇಳಿದಂತೆ, ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ 40 ದಿನಗಳ ಅವಧಿಯಲ್ಲಿ ₹15.45 ಲಕ್ಷ ಪಾವತಿಸಿದ್ದರು. ವಂಚಕರು ಕಮಿಷನ್ ಇರಲಿ, ರೇಟಿಂಗ್‌ಗಾಗಿ ಗೃಹಿಣಿಯಿಂದ ಪಾವತಿಸಿಕೊಂಡಿದ್ದ ಹಣವನ್ನು ಸಹ ಹಿಂದಿರುಗಿಸಲಿಲ್ಲ. ಸಂಪರ್ಕಕ್ಕೂ ಸಿಗಲಿಲ್ಲ. ತಾನು ವಂಚನೆಗೊಳಗಾಗಿರುವುದನ್ನು ಅರಿತ ಗೃಹಿಣಿ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT