ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾದರಾಯನಪುರ | ದಾಂದಲೆ ಆರೋಪಿಗಳು ರಾಮನಗರಕ್ಕೆ, ದಿನವಿಡೀ ಸ್ಥಳಾಂತರ ಪ್ರಕ್ರಿಯೆ

ಜಿಲ್ಲಾ ಕಾರಾಗೃಹದ ಕೈದಿಗಳು ಪರಪ್ಪನ ಅಗ್ರಹಾರಕ್ಕೆ
Last Updated 21 ಏಪ್ರಿಲ್ 2020, 16:17 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರಿನ ಪಾದರಾಯನಪುರದಲ್ಲಿ ದಾಂದಲೆ ನಡೆಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಆರೋಪಿಗಳು ಮಂಗಳವಾರ ರಾಮನಗರದ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದಾರೆ. ಇಲ್ಲಿದ್ದ ಎಲ್ಲ ಕೈದಿಗಳನ್ನೂ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ದಾಂದಲೆ ಆರೋಪದ ಮೇಲೆ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ 54 ಆರೋಪಿಗಳ ಪೈಕಿ 50 ಮಂದಿಯನ್ನು ರಾಮನಗರ ಜೈಲಿಗೆ ಕರೆತರಲಾಗಿದೆ. ಉಳಿದ ನಾಲ್ಕು ಮಂದಿ ಪೈಕಿ ಮೂವರನ್ನು ಬೆಂಗಳೂರು ಪೊಲೀಸರು ವಿಚಾರಣೆ ಸಲುವಾಗಿ ವಶಕ್ಕೆ ಪಡೆದಿದ್ದಾರೆ. ರಾಮನಗರ ಜೈಲಿನಲ್ಲಿ ಮಹಿಳೆರಿಗೆ ಪ್ರತ್ಯೇಕ ವ್ಯವಸ್ಥೆ ಇರದ ಕಾರಣ ಒಬ್ಬ ಮಹಿಳಾ ಆರೋಪಿಯನ್ನು ಬೆಂಗಳೂರಿನಲ್ಲೇ ಬಿಡಲಾಗಿದೆ.

ದಿನವಿಡೀ ಪ್ರಹಸನ: ಮೊದಲಿಗೆ ರಾಮನಗರ ಜೈಲಿನಲ್ಲಿ ಇರುವ 177 ಕೈದಿಗಳನ್ನು ಬೆಂಗಳೂರು ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯಿತು. ಮುಂಜಾನೆ 6ರ ಸುಮಾರಿಗೆ ಪೊಲೀಸ್‌ ಸಿಬ್ಬಂದಿ ಜೈಲಿಗೆ ಧಾವಿಸಿದರು. ಸುಮಾರು ಎರಡು ಗಂಟೆಗಳ ಪೂರ್ವಸಿದ್ಧತೆ ಮಾಡಿಕೊಳ್ಳಲಾಯಿತು. ಆರೋಪಿಗಳಿಗೆ ಯಾವ ರೀತಿ ಭದ್ರತೆ ನೀಡಬೇಕು. ಹೆದ್ದಾರಿ ಮಾರ್ಗದಲ್ಲಿ ಯಾವ ರೀತಿ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.

10 ಬಿಎಂಟಿಸಿ, 4 ಕೆಎಸ್ ಆರ್‌ಪಿ ಬಸ್‌ಗಳು ಬೆಳಗ್ಗೆ ಎಂಟರ ಸುಮಾರಿಗೆ ಜೈಲಿನ ಮುಂಭಾಗ ಬಂದು ನಿಂತವು. ಬೆಳಿಗ್ಗೆ 10 ಗಂಟೆ ವೇಳೆಗೆ ಒಬ್ಬೊಬ್ಬರೇ ಕೈದಿಗಳನ್ನು ಬಸ್‌ಗೆ ಹತ್ತಿಸಲಾಯಿತು. ಕೈದಿಗಳು ಕಲರ್‍ ಬಟ್ಟೆ ತೊಟ್ಟು ತನ್ನ ಲಗೇಜ್ ಸಮೇತ ಬಸ್‌ ಏರಿದರು. ಅಂತರ ಕಾಯ್ದುಕೊಳ್ಳಬೇಕಾದ ಹಿನ್ನೆಲೆಯಲ್ಲಿ ಒಂದು ಬಸ್‌ಗೆ 12-15 ಜನರನ್ನಷ್ಟೇ ಹತ್ತಿಸಲಾಯಿತು.

ಎಸ್ಪಿ ಗರಂ: ಕೈದಿಗಳ ಸ್ಥಳಾಂತರ ವಿಚಾರದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಅನೂಪ್‌ ಶೆಟ್ಟಿ ಜೈಲು ಅಧಿಕಾರಿಗಳ ಮೇಲೆ ಗರಂ ಆದ ಘಟನೆಯೂ ನಡೆಯಿತು. ’ಕೈಗೆ ಕೋಳ ಹಾಕದೇ ಕರೆದೊಯ್ಯುತ್ತಿದ್ದೀರಿ. ಯಾರಾದರೂ ತಪ್ಪಿಸಿಕೊಂಡರೆ ಯಾರು ಹೊಣೆ’ ಎಂದು ಎಸ್ಪಿ ಪ್ರಶ್ನಿಸಿದರು. ಅಷ್ಟರಲ್ಲಿ ಆಗಲೇ ಒಂದು ಬಸ್ ಹೊರಟಿತ್ತು. ಅದನ್ನೂ ವಾಪಸ್ ಕರೆಯಿಸಿ ಎಲ್ಲ ಕೈದಿಗಳಿಗೂ ಬೇಡಿ ಹಾಕಿದ ನಂತರ ಒಂದೊಂದೇ ಬಸ್ ಅನ್ನು ಕಳುಹಿಸಲಾಯಿತು. ಈ ವಾಹನಗಳ ಮುಂದೆ ಮತ್ತು ಹಿಂದೆ ಪೊಲೀಸ್ ಬೆಂಗಾವಲು ವಾಹನಗಳು ತೆರಳಿದವು. ಈ ಸಂದರ್ಭ ಬೆಂಗಳೂರು-ಮೈಸೂರು ಹೆದ್ದಾರಿ ಪೂರ್ತಿ ಝೀರೊ ಟ್ರಾಫಿಕ್‌ನ ವ್ಯವಸ್ಥೆ ಇತ್ತು. ಮಧ್ಯಾಹ್ನ 12ರ ಹೊತ್ತಿಗೆ ಈ ಪ್ರಕ್ರಿಯೆ ಮುಗಿಯಿತು.

ಅರೋಪಿಗಳ ಸ್ಥಳಾಂತರ: ಕೈದಿಗಳ ಸ್ಥಳಾಂತರದ ಬಳಿಕ ಜೈಲು ಆವರಣವನ್ನು ಸ್ವಚ್ಛಗೊಳಿಸಲಾಯಿತು. ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಎಸ್ಪಿ ಅನೂಪ್ ಶೆಟ್ಟಿ, ಡಿಎಚ್‌ಒ ಡಾ.ನಿರಂಜನ್ ಸೇರಿದಂತೆ 7 ಮಂದಿ ಅಧಿಕಾರಿಗಳ ತಂಡವು ಕಾರಾಗೃಹಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿತು. ಸಂಜೆ 5ರ ನಂತರ ಪ್ರತ್ಯೇಕ ಬಸ್‌ಗಳಲ್ಲಿ ಆರೋಪಿಗಳನ್ನು ಜೈಲಿಗೆ ಕರೆತರಲಾಯಿತು. ತಪಾಸಣಾ ಕಿಟ್‌ಗಳೊಂದಿಗೆ ಆಗಮಿಸಿದ್ದ ವೈದ್ಯರ ತಂಡವು ಜೈಲಿನ ಪ್ರವೇಶ ದ್ವಾರದ ಬಳಿಯೇ ಈ ಎಲ್ಲ 50 ಮಂದಿಯ ಆರೋಗ್ಯ ತಪಾಸಣೆ ನಡೆಸಿತು. ನಂತರವಷ್ಟೇ ಅವರನ್ನು ಜೈಲಿನ ಒಳಗೆ ಬಿಡಲಾಯಿತು. ಈ ಸಂದರ್ಭ ಪೊಲೀಸರು ಬಿಗಿ ಬಂದೋಬಸ್ತ್‌ ಒದಗಿಸಿದ್ದರು. ಇಡೀ ದಿನ ಜೈಲಿನ ಮುಂಭಾಗದ ರಸ್ತೆಯನ್ನು ಬ್ಯಾರಿಕೇಡ್‌ಗಳಿಂದ ಬಂದ್ ಮಾಡಿದ್ದು, ಅನ್ಯ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಏಕಮುಖ ಸಂಚಾರ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT